ಮೊದಲ ಹಂತದಲ್ಲಿ ವೇದಾವತಿಯಿಂದ ಧರ್ಮಪುರ ಕೆರೆಗೆ ಹರಿದು ಬರುತ್ತಿರುವ ನೀರು. Water
ಚಿತ್ರದುರ್ಗ

ಚುನಾವಣೆ ಗೆಲುವಿಗೆ ನೀರಿನ ಸಂಕಷ್ಟವೇ ಅಸ್ತ್ರ

ಧರ್ಮಪುರ ಏತ ನೀರಾವರಿ 2ನೇ ಹಂತದ ಯೋಜನೆಗೆ ಸಿಎಂ ಗ್ರೀನ್ ಸಿಗ್ನಲ್

ಬಸವರಾಜ್ ಖಂಡೇನಹಳ್ಳಿ ಹಿರಿಯೂರು

ತಾಲೂಕಿನ ಜನರ ನೀರಿನ ಸಂಕಷ್ಟವೇ ಉಪ ಚುನಾವಣೆ ಯಲ್ಲಿ ಕಾಂಗ್ರೆಸ್ ಪ್ರಮುಖ ಅಸ್ತ್ರವಾಗಿದ್ದು, ನೀರಾವರಿ ಯೋಜನೆ ಸಾಕಾರಕ್ಕೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಉಪ ಚುನಾವಣೆ ಗೆಲುವು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದ್ದು, ತಾಲೂಕಿನ ಜನರ ಪ್ರಮುಖ ಬೇಡಿಕೆ ಕೆರೆಗಳಿಗೆ ನೀರು ತುಂಬಿಸುವುದಾಗಿದೆ. ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಅವರು ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದೇ ಬೇಡಿಕೆ ಬಂದಿತ್ತು.

ಸಚಿವ ಬಾಲಕೃಷ್ಣ, ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚಿಸಿ ನೀರಿನ ಸಮಸ್ಯೆ ಮನವರಿಕೆ ಮಾಡಿಕೊಟ್ಟು ಧರ್ಮಪುರ ಏತ ನೀರಾವರಿ 2ನೇ ಹಂತದ ಯೋಜನೆ ಅನುಷ್ಠಾನಕ್ಕೆ ಒತ್ತಡ ತಂದಿದ್ದರು. ಈಗ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸೂಚಿಸಿರುವುದು ಧರ್ಮಪುರ ಹೋಬಳಿ ಜನರಲ್ಲಿ ಸಂತಸ ತಂದಿದೆ.

ತಾಲೂಕಿನಲ್ಲಿ ಶತಮಾನದ ಇತಿಹಾಸವಿರುವ ವಿವಿ ಸಾಗರ ಜಲಾಶಯವಿದ್ದರೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ವಿಷಯ ಪ್ರತಿ ಚುನಾವಣೆಯಲ್ಲಿ ಮತ ಬೇಟೆಗೆ ಅಸ್ತ್ರವಾಗುತ್ತಲೇ ಇದೆ. ಆಡಳಿತ ವ್ಯವಸ್ಥೆಯಲ್ಲಿನ ಲೋಪ, ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪಗಳಿಗೆ ಸಿಲುಕಿ ಗಡಿ ಗ್ರಾಮದ ಜನ ನಲುಗುತ್ತಿದ್ದಾರೆ. ನಿತ್ಯ ಬೆಳಗಾದರೆ ನೀರಿಗೆ ಏನು ಮಾಡಬೇಕು ಎನ್ನುವ ಯೋಚನೆಯಲ್ಲಿದ್ದ ಜನರಿಗೆ ಈ ನಿರ್ಧಾರ ಹೊಸ ಭರವಸೆ ಮೂಡಿಸಿದೆ.

ಡಿಪಿಆರ್ ಸಿದ್ಧ

ಧರ್ಮಪುರ ಕೆರೆಯಿಂದ ನೇರ ಪೈಪ್‌ಲೈನ್ ಮೂಲಕ ಹಲಗಲದ್ದಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಅರಳಿಕೆರೆ, ಹೊಸಕೆರೆ, ಬೇತೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿದ್ದು, ಈಗಾಗಲೇ ನೀರಾವರಿ ಇಲಾಖೆ 35 ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಯೋಜನೆ ಜಾರಿಯಾದರೆ ಗಡಿ ಗ್ರಾಮಗಳಿಗೆ ಶಾಶ್ಚತ ನೀರಾವರಿ ಸೌಲಭ್ಯ ಸಿಗಲಿದೆ. ಅಂತರ್ಜಲ ವೃದ್ಧಿ, ಕೃಷಿ, ಕುಡಿವ ನೀರಿಗೆ ವರದಾನವಾಗಲಿದೆ.

ನೀರಾವರಿ ಯೋಜನೆ ಸಾಕಾರಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಶ್ಲಾಘನೀಯ, ಉಪ ಚುನಾವಣೆ ಘೋಷಣೆಗೂ ಮೊದಲು ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಬೇಕು. ಧರ್ಮಪುರ ಹೋಬಳಿಯ ರೈತರು ಸಿಎಂ ಭೇಟಿ ಮಾಡಿ ಒತ್ತಡ ಹೇರಲಾಗುವುದು.
ಸಕ್ಕರ ಗಿರೀಶ್, ಅಧ್ಯಕ್ಷ, ಧರ್ಮಪುರ ನೀರಾವರಿ ಹೋರಾಟ ಸಮಿತಿ
ಧರ್ಮಪುರ ಏತ ನೀರಾವರಿ 2ನೇ ಹಂತದ ಯೋಜನೆಗೆ ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಯೋಜನೆ ಕಾರ್ಯಗತಕ್ಕೆ ಶಕ್ತಿ ಮೀರಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ.
ಎಂ.ಎಸ್. ಈರಲಿಂಗೇಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ