ಬೆಂಗಳೂರಿನ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಹಿರಿಯೂರು ತಾಲೂಕಿನ ರೈತರ ಸಭೆ ನಡೆಯಿತು. ಬಿ.ಜಿ. ಗೋವಿಂದಪ್ಪ, ರಘುಮೂರ್ತಿ, ಪೂರ್ಣಿಮಾ ಇದ್ದರು. 
ಚಿತ್ರದುರ್ಗ

ಹಿರಿಯೂರು ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಬದ್ಧ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಡಿ.ಕೆ. ಶಿವಕುಮಾರ್ ಸಕಾರಾತ್ಮಕ ಸ್ಪಂದನೆ
  • ಬೆಂಗಳೂರಿನಲ್ಲಿ ರೈತರು, ಜನಪ್ರತಿನಿಧಿಗಳ ಸಭೆ
ಹಿರಿಯೂರು: ತಾಲೂಕಿನ ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಹೊಣೆ ನಿಮ್ಮದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಜರುಗಿದ ಜೆ.ಜಿ.ಹಳ್ಳಿ-ಐಮಂಗಲ ಹೋಬಳಿ ರೈತರ ಸಭೆಯಲ್ಲಿ ಈ ಭರವಸೆ ನೀಡಿದರು.
ಶೀಘ್ರ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಕರೆದು, ಜಿಲ್ಲೆಯ ನೀರಾವರಿ ಯೋಜನೆ ಕುರಿತು ಪ್ರಗತಿ ಪರಿಶೀಲನೆ ನಡೆಸಿ, ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸಲು ಕ್ರಮ ವಹಿಸಲಾಗುವುದು. ಯೋಜನೆಗೆ ವೇಗ ನೀಡಿ, ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲೆಯ ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಒಂದು ವಾರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿ, ನೀರಾವರಿ ಯೋಜನೆ ಸಾಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಜೆ.ಜಿ. ಹಳ್ಳಿ ಹೋಬಳಿ ವ್ಯಾಪ್ತಿಯ ಕುಡಿವ ನೀರಿನ ಸಮಸ್ಯೆ ಕುರಿತು ಮಾಹಿತಿ ಇದೆ. ಯೋಜನೆ ಸಾಕಾರಕ್ಕೆ ಸರ್ಕಾರ ಬದ್ಧವಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕಡತ ಮಂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಆತ್ಮೀಯ ಗೆಳೆಯ: ದಿ.ಸುಧಾಕರ್ ನನ್ನ ಆತ್ಮೀಯ ಗೆಳೆಯ, ನಾನು ಮುಖ್ಯಮಂತ್ರಿಯಾಗಬೇಕು ಎಂಬ ಹಂಬಲ ಅವರಲ್ಲಿತ್ತು. ಜನಪರ ಸೇವೆ, ಅಭಿವೃದ್ಧಿ, ನೀರಾವರಿ ಯೋಜನೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ನಾನೇ ಹೋರಾಟ ಮಾಡಿ ಕಾಂಗ್ರೆಸ್ ಟಿಕೆಟ್, ಮಂತ್ರಿ ಸ್ಥಾನ ಕೊಡಿಸಲಾಯಿತು ಎಂದರು.
ಸಮರ್ಥ ಅಭ್ಯರ್ಥಿ ಕಣಕ್ಕೆ: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಕೊಟ್ಟ ಮಾತಿನಂತೆ ನೀರಾವರಿ ಯೋಜನೆ ಜಾರಿಗೆ ಸರ್ಕಾರ ಸಿದ್ದವಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವಂತೆ ಮುಖಂಡರಿಗೆ ಸೂಚಿಸಿದರು.
ಹಿರಿಯೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕೆಲವರು ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದು ನನ್ನ ಗಮನಕ್ಕೆ ಬಂದಿದೆ. ಯಾರು ಎಲ್ಲಿ ಹೋಗುತ್ತಾರೆ, ಏನು ಮಾತನಾಡುತ್ತಾರೆ ಎಂಬ ಮಾಹಿತಿ ಇದೆ ಎಂದರು.
ಸುಹಾಸ್‌ಗೆ ಕೈ ತಪ್ಪುವುದೇ ಟಿಕೆಟ್: ಸಿಎಂ ಮಾತನಾಡುವ ವೇಳೆ ಸುಹಾಸ್ ಸುಧಾಕರ್ ಅಧಿಕೃತ ಅಭ್ಯರ್ಥಿ ಎಂದು ಹೇಳದೆ, ಅಭ್ಯರ್ಥಿ ಆಯ್ಕೆ ನಮ್ಮದು, ಗೆಲ್ಲಿಸುವ ಹೊಣೆ ನಿಮ್ಮದು ಎಂದು ಮಾರ್ಮಿಕವಾಗಿ ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶಾಸಕಿ ಪೂರ್ಣಿಮಾ ಮಾತನಾಡಿ, ಜೆ.ಜಿ. ಹಳ್ಳಿ-ಐಮಂಗಲ ಹೋಬಳಿಯ ನೀರಿನ ಸಮಸ್ಯೆ ಕುರಿತು ಜಲ ಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿ ಅವರ ಜತೆ ಮಾತನಾಡಿದ್ದು, ಯೋಜನೆ ತ್ವರಿತಕ್ಕೆ ಆದ್ಯತೆ ನೀಡಬೇಕು. ಹಿರಿಯೂರಿನ ನೀರಾವರಿಗೆ ಮೈಸೂರು ಅರಸರ ಕೊಡುಗೆ ಸ್ಮರಣೀಯ. ವಿವಿ ಸಾಗರ ಜಲಾಶಯ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಜೆ.ಜಿ. ಹಳ್ಳಿ ಹೋಬಳಿಯ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ನೀರು ತುಂಬಿಸುವುದು, ಐಮಂಗಲ ಹೋಬಳಿಯ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆಯಿಂದ ನೀರು ಹರಿಸಿದರೆ ಅಂತರ್ಜಲ ವೃದ್ಧಿಯಾಗಿ ಜನ-ಜಾನುವಾರುಗಳ ಕುಡಿವ ನೀರಿಗೆ ವರದಾನವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಯುವ ಮುಖಂಡ ಸುಹಾಸ್ ಸುಧಾಕರ್, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಆರ್. ಮಂಜುನಾಥ್, ಜೆ. ರಾಜು. ಗರೀಬ್ ಅಲಿ, ಅಮೃತೇಶ್ವರ ಸ್ವಾಮಿ, ಕಲ್ಲಹಟ್ಟಿ ಹರೀಶ್, ಖಾದಿ ರಮೇಶ್, ಈ. ಗೌಡ, ಜಿ. ದಾದಾಪೀರ್, ನಿರಂಜನಮೂರ್ತಿ, ನಾಗೇಂದ್ರನಾಯ್ಕ, ಸೋಮಶೇಖರ್ ಇತರರಿದ್ದರು.
ಸಿಎಂ ಭೇಟಿ: ಭದ್ರಾ ಮೇಲ್ದಂಡೆ ಯೋಜನೆ- ಜೆ.ಜಿ.ಹಳ್ಳಿ, ಐಮಂಗಲ ಹೋಬಳಿ ವ್ಯಾಪ್ತಿಯ ನೀರಾವರಿ ಯೋಜನೆ ಪ್ರಗತಿ ಪರಿಶೀಲನೆಗೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ಹಿರಿಯೂರಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಉಪ ಚುನಾವಣೆ ಕಣ ರಂಗೇರಿದ್ದು, ಸಿಎಂ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಎಚ್‌ವೈಆರ್ ಡಿಕೆಎಸ್ 03