ಮೊಳಕಾಲ್ಮೂರಿನ ಸರ್ಕಾರಿ ಜೂನಿಯರ್ ಕಾಲೇಜು. College 
ಚಿತ್ರದುರ್ಗ

ಡೋಲಾಯಮಾನ ಸ್ಥಿತಿಯಲ್ಲಿ ಪಿಯು ವಿದ್ಯಾರ್ಥಿಗಳ ಭವಿಷ್ಯ College

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕರ ಕೊರತೆಯಿಂದ ಪಠ್ಯ ಬೋಧನೆಗೆ ಹಿನ್ನಡೆ
  • ಮೊಳಕಾಲ್ಮೂರು ಸರ್ಕಾರಿ ಕಾಲೇಜಿನ ಪರಿಸ್ಥಿತಿ
ಕೆ. ಕೆಂಚಪ್ಪ ಮೊಳಕಾಲ್ಮೂರು
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. College
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಪ್ರಥಮ ಹಾಗೂ ದ್ವಿತೀಯ ಪಿಯುನಲ್ಲಿ 531 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಇಂಗ್ಲಿಷ್, ಗಣಿತ, ಅರ್ಥಶಾಸ್ತ್ರದ ಮೂವರು ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಉಳಿದ 11 ಬೋಧಕ ಹುದ್ದೆಗಳು ಹಾಗೂ ಕಚೇರಿ ಸಿಬ್ಬಂದಿ ಕೊರತೆಯಿದೆ. ಅತಿಥಿ ಉಪನ್ಯಾಸಕರನ್ನು ಸರಿದೂಗಿಸಿಕೊಂಡಿದ್ದರೂ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಶಿಕ್ಷಣ ಸಿಗದೆ ಫಲಿತಾಂಶದಲ್ಲಿ ಹಿನ್ನಡೆ ಕಾಣುವಂತಾಗಿದೆ.
ಈ ಹಿಂದೆ ಮಕ್ಕಳ ದಾಖಲಾತಿ ಸಂಖ್ಯೆ ಆಧರಿಸಿ ಒಂದು ವಿಷಯಕ್ಕೆ ಒಬ್ಬ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಪ್ರಥಮ ಪಿಯುಗೆ 335, ದ್ವಿತೀಯ ಪಿಯುನಲ್ಲಿ 196 ವಿದ್ಯಾರ್ಥಿಗಳಿದ್ದಾರೆ. ಪಠ್ಯಕ್ರಮ ಅನುಸಾರ ತಲಾ ಇಬ್ಬರು ಉಪನ್ಯಾಸಕರ ನೇಮಕದ ಆಗತ್ಯವಿದೆ. ಇದನ್ನು ಇಲಾಖೆ ಉನ್ನತ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಗಣಿಸಬೇಕೆಂಬುದು ಪಾಲಕರ ಒತ್ತಾಯವಾಗಿದೆ.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಶದ ಜನರು ಸಬಲೀಕರಣ ಹೊಂದಲು ಶಿಕ್ಷಣವೊಂದೇ ಅಸ್ತ್ರ. ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾಗಿ ಎಲ್ಲ ಸೌಲಭ್ಯಗಳು ಲಭ್ಯವಿದ್ದರೆ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಆದರೆ, ಕಳೆದ 15-20 ವರ್ಷದಿಂದಲೂ ಉಪನ್ಯಾಸಕರ ಕೊರತೆ ಸೇರಿ ಒಂದಲ್ಲ ಒಂದು ಸಮಸ್ಯೆಯನ್ನು ಕಾಲೇಜು ಎದುರಿಸುತ್ತಲೇ ಬಂದಿದೆ. ಇಲ್ಲಿನ ಸಮಸ್ಯೆಗಳು ಇಲಾಖೆಯ ಗಮನದಲ್ಲಿದ್ದರೂ ಪರಿಹರಿಸುವತ್ತ ಗಮನ ಹರಿಸಿಲ್ಲ.
ಇಲ್ಲಿನ ಪ್ರತಿಷ್ಠಿತ ಆದರ್ಶ ವಿದ್ಯಾಯಲಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕಳೆದ ವರ್ಷ ಪ್ರಥಮ ಪಿಯು ಪ್ರಾರಂಭವಾಗಿದೆ. ಪ್ರಥಮ ಪಿಯುನಲ್ಲಿ 81, ದ್ವಿತೀಯ ಪಿಯುನಲ್ಲಿ 115 ವಿದ್ಯಾರ್ಥಿಗಳಿದ್ದಾರೆ. ಶಾಲೆಗೆ ಒಬ್ಬ ಕಾಯಂ ಉಪನ್ಯಾಸಕರ ನೇಮಕಾತಿ ಆಗಿಲ್ಲ. ಅಧಿಕಾರಿಗಳು ಪಿಯು ತರಗತಿ ಉದ್ಘಾಟಿಸಿ ಹೋದವರು ಕಾಲೇಜಿನ ಬೇಕು, ಬೇಡಗಳ ಬಗ್ಗೆ ಗಮನಹರಿಸಿಲ್ಲ. ಹೀಗಾದರೆ ಮಕ್ಕಳ ಭವಿಷ್ಯದ ಗತಿಯೇನು ಎಂಬ ಪ್ರಶ್ನೆ ಕಾಡುತ್ತಿದೆ.

ಎರಡೂ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದೆ. ಪಠ್ಯಕ್ರಮ ಅನುಸಾರ ಗುಣಾತ್ಮಕ ಬೋಧನಾ ಕ್ರಮ ಅನುಸರಿಸಿದರೆ ಕಲಿಕೆಯಲ್ಲಿ ಸುಧಾರಣೆ ಸಾಧ್ಯ. ಕಾಲೇಜು ಬೀಗ ತೆಗೆಯಲು ಒಬ್ಬ ಜವಾನ ಇಲ್ಲ. ಎಲ್ಲವನ್ನೂ ನಾವೇ ನೋಡಿಕೊಳ್ಳಬೇಕು. ಇಲ್ಲಿನ ಸಮಸ್ಯೆಗಳನ್ನು ನೋಡಿದರೆ ಮಕ್ಕಳ ಭವಿಷ್ಯ ರೂಪಿಸುವುದು ಸವಾಲಾಗಿದೆ.

— ಬಿ. ಗೋವಿಂದಪ್ಪ ಪ್ರಾಚಾರ್ಯ