ಹಿರಿಯೂರಿನ ಅಂಬೇಡ್ಕರ್ ವೃತ್ತದ ಸಮೀಪ ವಿವಿಎಸ್ ಎಡ ನಾಲೆ ಸೇತುವೆ ದುಸ್ಥಿತಿ. VV Sagar
- ವಾಹನ ಸಂಚಾರಕ್ಕೆ ಹರಸಾಹಸ
- ಪ್ರಯಾಣಿಕರ ಸುರಕ್ಷತೆಗೆ ಕಂಟಕ
ಹಿರಿಯೂರು: ನಗರದ ಅಂಬೇಡ್ಕರ್ ವೃತ್ತದ ಸಮೀಪ ವಿವಿ ಸಾಗರ ಎಡ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಅಪಾಯದಲ್ಲಿದ್ದು, ಶಿಥಿಲ ಸ್ಥಿತಿ ತಲುಪಿದೆ. VV Sagar
ನಗರಕ್ಕೆ ಸಂಪರ್ಕ ಬೆಸೆಯುವ ಮುಖ್ಯ ಸೇತುವೆ ಕಾಯಕಲ್ಪಕ್ಕಾಗಿ ಕಾಯುತ್ತಿದ್ದು, ಮಳೆಗಾಲ ಹಾಗೂ ಅಚ್ಚುಕಟ್ಟು ಪ್ರದೇಶದ ಜಮೀನಿಗೆ ನೀರು ಹರಿಸಿದ ಸಂದರ್ಭದಲ್ಲಿ ಈ ಕಿರಿದಾದ ಸೇತುವೆಗಳ (ಎಡ-ಬಲ ನಾಲಾ ಸೇತುವೆ) ಮೇಲೆ ಸಂಚರಿಸುವುದು ಜೀವಕ್ಕೆ ಕುತ್ತು ತರುವ ಸಾಧ್ಯತೆಯಿದೆ. ಸುರಕ್ಷಿತ ಸಂಚಾರಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. 40-50 ವರ್ಷಗಳ ಹಿಂದೆ ನಿರ್ಮಿಸಿರುವ ಸೇತುವೆ ಬಹುತೇಕ ಶಿಥಿಲ ಸ್ಥಿತಿ ತಲುಪಿದ್ದು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ.
ವರ್ಷದಲ್ಲಿ ಎರಡು ಬಾರಿ ಅಚ್ಚುಕಟ್ಟು ಜಮೀನಿಗೆ ನೀರು ಹರಿಸುವುದರಿಂದ ಸೇತುವೆ ತಳಪಾಯ ಶಿಥಿಲವಾಗಿದೆ. ಅಲ್ಲಲ್ಲಿ ಸಿಮೆಂಟ್ ಕಿತ್ತು ಹೋಗಿದೆ. ನೀರು ರಭಸವಾಗಿ ಹರಿಯುತ್ತಿದೆ. ಇದರಿಂದಾಗಿ ಸೇತುವೆ ಇನ್ನಷ್ಟು ಶಿಥಿಲಗೊಳ್ಳುವ ಸಾಧ್ಯತೆಯಿದೆ. ಮುಖ್ಯ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಿರಿದಾದ ಸೇತುವೆಗಳ ಮೇಲೆ ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡುಸತ್ತಿದ್ದಾರೆ.
ಹಾರಿಕೆ ಉತ್ತರ: ಸೇತುವೆ ದುರಸ್ತಿ-ಹೊಸ ಸೇತುವೆ ನಿರ್ಮಾಣ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ವೇದಾವತಿ ನದಿಯ ಸೇತುವೆ ಕೂಡ ಶಿಥಿಲಗೊಂಡಿದ್ದು, ಸಂಚಾರ ಕಷ್ಟ ಸಾಧ್ಯವಾಗಿದೆ. ಸೇತುವೆ ಎಡ-ಬಲ ಭಾಗದಲ್ಲಿನ ತಡೆಗೋಡೆ ಅಪಾಯದಲ್ಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯುವ ಮುಂಚಿತವಾಗಿ ಸೇತುವೆಗಳ ಸುರಕ್ಷತೆಗೆ ಕ್ರಮವಹಿಸಬೇಕಿದೆ. ವಿವಿ ಸಾಗರದಿಂದ ಅಚ್ಚುಕಟ್ಟು ಜಮೀನಿಗೆ ಒಂದು ತಿಂಗಳ ಕಾಲ ನೀರು ಹರಿಸುತ್ತಿದ್ದು, ನಗರದಲ್ಲಿ ಎಡ-ಬಲ ನಾಲೆ ಹಾದು ಹೋಗಿದ್ದು, ಕೊಳಚೆ ನೀರು, ಪ್ಲಾಸ್ಟಿಕ್ ತ್ಯಾಜ್ಯವನ್ನು ನಾಲೆಗೆ ಹಾಕುವುದರಿಂದ ನೀರು ಕಲುಷಿತವಾಗಿ ರೈತರ ಜಮೀನು ಸೇರುತ್ತಿದೆ ಎಂಬ ದೂರು ರೈತರಿಂದ ಕೇಳಿಬಂದಿದೆ.
"
ಹಿರಿಯೂರು ನಗರ ವೇಗವಾಗಿ ಬೆಳೆಯುತ್ತಿದ್ದು, ವಾಹನ ಸಂಚಾರ ದಟ್ಟಣೆ ಮಿತಿ ಮೀರಿದೆ. ಕಿರಿದಾದ ಸೇತುವೆಗಳ ಮೇಲೆ ಬಸ್, ಶಾಲಾ ವಾಹನಗಳು ಸಂಚರಿಸುವುದರಿಂದ ಪ್ರಯಾಣಿಕರು, ಮಕ್ಕಳ ಸರಕ್ಷತೆಗೆ ಆದ್ಯತೆ ನೀಡಬೇಕಿದೆ.
— ಶಶಿಕಲಾ ರವಿಶಂಕರ್, ಸಮಾಜ ಸೇವಕಿ.
"
ಹಿರಿಯೂರಿನ ಮುಖ್ಯ ರಸ್ತೆ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ತಾಲೂಕು ಕಚೇರಿ ಬಳಿ ರಾಜ ಕಾಲುವೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ವೇಗ ನೀಡಿ ಸಂಚಾರಕ್ಕೆ ಮುಕ್ತಗೊಳಿಸಬೇಕು.
— ಕಸವನಹಳ್ಳಿ ರಮೇಶ್, ರೈತ ಮುಖಂಡ.
"
ಹಿರಿಯೂರು ನಗರಕ್ಕೆ ಸಂಪರ್ಕ ಬೆಸೆಯುವ ಕೊಂಡಿ ಯಾಗಿರುವ ಸೇತುವೆ ಶಿಥಿಲ ಸ್ಥಿತಿ ತಲುಪಿದೆ. ಸರ್ಕಾರ ತಕ್ಷಣ ಸೇತುವೆ ದುರಸ್ತಿಗೆ ಕ್ರಮವಹಿಸಬೇಕು.
— ಎಚ್.ಆರ್.ಯೋಗೇಶ್, ಬಿಜೆಪಿ ಮುಖಂಡ.