ಚಳ್ಳಕೆರೆ ತಾಲೂಕಿನ ತಳಕು ಗುಡ್ಡದಲ್ಲಿ ಸೋಮವಾರ ಶ್ರೀ ಎತ್ತಪ್ಪನ ಜಾತ್ರಾ ಮಹೋತ್ಸವಕ್ಕೆ ವಿವಿಧ ಗ್ರಾಮಗಳಿಂದ ಇಪ್ಪತ್ತಕ್ಕೂ ಹೆಚ್ಚು ದೇವರುಗಳನ್ನು ಕರತಲಾಗಿತ್ತು. Ashadha
- 20 ಗ್ರಾಮ ದೇವತೆಗಳ ಸಮಾಗಮ
- ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತ ಸಮೂಹ
ಚಳ್ಳಕೆರೆ: ತಾಲೂಕಿನ ತಳಕು ಸಮೀಪದ ಗುಡ್ಡದಲ್ಲಿ ಕಾಡುಗೊಲ್ಲರ ಸಾಂಸ್ಕೃತಿಕ ನಾಯಕ ಶ್ರೀ ಎತ್ತಪ್ಪ ದೇವರ ಆಷಾಢದ ಜಾತ್ರಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ನೆರವೇರಿತು. Ashadha
ರಾಜ್ಯದ 12 ಜಿಲ್ಲೆಯ 44 ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕೆಲವರು ದೂರದ ಊರುಗಳಿಂದ ಬರಿಗಾಲಲ್ಲಿ ಆಗಮಿಸಿ ಮೀಸಲು ಕಾಣಿಕೆ ಸಮರ್ಪಿಸಿದರು.
ಗುಡ್ಡದ ತುದಿಯಲ್ಲಿರುವ ಶ್ರೀ ಎತ್ತಪ್ಪನ ವೀರಗಲ್ಲುಗಳಿಗೆ ಪೂಜೆ ಸಲ್ಲಿಸಿ, ಗಂಗಾ ದೋಣಿ ನೀರನ್ನು ತೀರ್ಥವಾಗಿ ಪಡೆದು ಮನೆಗಳಿಗೆ ತೆರಳಿದರು. ಕುರಿ ಹಟ್ಟಿ ಮತ್ತು ಮನೆಗಳಿಗೆ ತೀರ್ಥ ಪ್ರೋಕ್ಷಣೆ ಮಾಡಿ, ಈ ವರ್ಷ ಒಳ್ಳೆಯ ಮಳೆ, ಬೆಳೆ ಆಗಲಿ. ಜನ ಜಾನುವಾರುಗಳಿಗೆ ರೋಗರುಜಿನೆಗಳು ಬಾರದಿರಲೆಂದು ದೇವರನ್ನು ಬೇಡಿಕೊಂಡರು.
ದೇವರುಗಳ ಸಂಗಮ: ಶ್ರೀ ಎತ್ತಪ್ಪನ ಗುಡ್ಡದಲ್ಲಿ ಜರುಗುವ ಜಾತ್ರಾ ಮಹೋತ್ಸವಕ್ಕೆ ಬಂಜೆಗೆರೆ ಗ್ರಾಮದಿಂದ ಶ್ರೀ ಬಸವ ದೇವರು, ಶ್ರೀ ಈರಣ್ಣ ದೇವರು, ಬೂದಿಹಳ್ಳಿಯ ಶ್ರೀ ಜುಂಜಪ್ಪ, ಶ್ರೀ ಎತ್ತಪ್ಪ, ಕ್ಯಾತಗೊಂಡನಹಳ್ಳಿ ಶ್ರೀ ನರಸಿಂಹ ಸ್ವಾಮಿ, ಉಪ್ಪಾರಹಟ್ಟಿ ಶ್ರೀ ಜುಂಜಪ್ಪ, ಚಿತ್ರನಾಯಕನಹಳ್ಳಿ ಶ್ರೀ ಜುಂಜಪ್ಪ ಸೇರಿ ವಿವಿಧ ಗ್ರಾಮಗಳಿಂದ ಸುಮಾರು 20 ದೇವರುಗಳನ್ನು ಗುಡ್ಡಕ್ಕೆ ಹೊತ್ತು ತರಲಾಗಿತ್ತು. ಶ್ರೀ ಎತ್ತಪ್ಪನ ವೀರಗಲ್ಲುಗಳ ಬಳಿ ಕಂಬಳಿ ಹಾಕಿ ವಿಶೇಷ ಗದ್ದಿಗೆ ಪೂಜೆ ಸಲ್ಲಿಸಲಾಯಿತು. ಕುರಿ ಹಾಲಿನಿಂದ ತಯಾರಿಸಿದ ಎಡೆಬಾನವನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು.
ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ರಾಜ್ಯಾಧ್ಯಕ್ಷ ರಾಜಣ್ಣ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಸುಂಕಪ್ಪ, ರೆಡ್ಡಿಹಳ್ಳಿ ವೀರಣ್ಣ, ಅಪ್ಪು ವೀರೇಶ್, ಜೆಸಿಬಿ ವೀರೇಶ್, ಬಿ.ಗಿರೀಶ್, ಶ್ರೀಕಾಂತ್, ಸಿದ್ದಾಪುರ ಮಂಜು, ಕಾಂತರಾಜ್,ದೊಡ್ಡೇ ಗೌಡ, ಗೋವಿಂದಪ್ಪ, ಎಸಿಪಿ ಬಸವರಾಜ್, ರೇವಣ್ಣ, ಪಾಪಣ್ಣ, ಎಸ್. ನಾಗರಾಜ್, ಪ್ರಭುದೇವ್, ಈಶ್ವರಪ್ಪ ಇತರರು ಇದ್ದರು.
ಪುಣ್ಯ ಕ್ಷೇತ್ರವಾಗಿ ಬೆಳೆಸಲು ಸಂಕಲ್ಪ: ಎತ್ತಪ್ಪನ ಗುಡ್ಡವನ್ನು ಐತಿಹಾಸಿಕ ಪುಣ್ಯಕ್ಷೇತ್ರವಾಗಿ ಬೆಳೆಸಲು ಸಂಕಲ್ಪ ಮಾಡಬೇಕಿದೆ ಎಂದು ವನಕಲ್ಲು ಮಠದ ಡಾ. ಬಸವ ರಮಾನಂದ ಸ್ವಾಮೀಜಿ ಹೇಳಿದರು. ಜಾತ್ರೆ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಮಾತನಾಡಿ, 300 ಗುಡಿಕಟ್ಟುಗಳನ್ನು ಹೊಂದಿರುವ ಕಾಡುಗೊಲ್ಲರ ಸಂಸ್ಕೃತಿ ದೊಡ್ಡದಿದೆ. 14ನೇ ಶತಮಾನದಲ್ಲಿ ಶ್ರೀ ಎತ್ತಪ್ಪ, ಶ್ರೀ ಜುಂಜಪ್ಪ, ಶ್ರೀ ಕ್ಯಾತಪ್ಪ ಹೀಗೆ ಸಮುದಾಯದ 150 ಸಾಂಸ್ಕೃತಿಕ ನಾಯಕರು ಇದ್ದರು. ತಳಕಿನ ಗುಡ್ಡ ಎತ್ತಪ್ಪನ ವಾಸ ಸ್ಥಾನವಾಗಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಟಿ. ರವಿಕುಮಾರ್ ಮಾತನಾಡಿ, ಶ್ರೀ ಎತ್ತಪ್ಪನ ಗುಡ್ಡಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಕಲ್ಲಿನ ಮೆಟ್ಟಿಲು ನಿರ್ಮಿಸುವ ಕೆಲಸ ಆಗಬೇಕಿದೆ. ಗುಡ್ಡದ ಸುತ್ತ ಇರುವ ಜಮೀನು ಒತ್ತುವರಿಯಾಗಿದೆ. ಇಲ್ಲಿನ 72 ಎಕರೆ ಶ್ರೀ ಎತ್ತಪ್ಪನ ದೇವತಾ ಕಾರ್ಯಕ್ಕೆ ಮೀಸಲಾಗಿ ಉಳಿಯುವಂತೆ ನೋಡಿಕೊಳ್ಳಬೇಕು. ಮೂಲ ಸೌಕರ್ಯ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಭಕ್ತರು ಸಹಕರಿಸಬೇಕು ಎಂದು ಹೇಳಿದರು.
ಶಿಕ್ಷಣ ಪಡೆದೊಕೊಳ್ಳುವುದು ಮುಖ್ಯ: ಜಾತ್ರೆಗಳ ಆಚರಣೆಯಿಂದ ಸಮುದಾಯದಲ್ಲಿ ಜಾಗೃತಿ ಬೆಳೆಯುವುದಿಲ್ಲ. ಶಿಕ್ಷಣ ಪಡೆದುಕೊಳ್ಳುವತ್ತ ಗುರಿ ಇರಬೇಕು. ಶಿಕ್ಷಣದ ಜತೆಗೆ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಭಕ್ತಿ ಮನದಲ್ಲಿ ಇರಲಿ. ನೂರಾರು ಕಿಮೀ ಬರಿಗಾಲಲ್ಲಿ ನಡೆದು ಬರುವುದು ಬೇಡ. ಈಗಿನ ಪರಿಸ್ಥಿತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಎತ್ತಪ್ಪನ ಗುಡ್ಡದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಂಘಟಿತರಾಗಬೇಕು ಎಂದು ಟಿ. ರವಿಕುಮಾರ್ ಮನವಿ ಮಾಡಿದರು. 224 ಕ್ಷೇತ್ರಗಳಲ್ಲೂ ಸಮುದಾಯದ ಅಬ್ಯರ್ಥಿಗಳು 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಬಹುದಾಗಿದೆ. ಆದರೆ, ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಎಸ್‌ಟಿ ಮೀಸಲು ದಕ್ಕಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ ಎಂದರು.