ಮೊಳಕಾಲ್ಮೂರು ತಾಲೂಕು ಪಂಚಾಯಿತಿ ಸಂಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಗತಿ ಸಭೆ ಹಮ್ಮಿಕೊಳ್ಳಲಾಗಿತ್ತು. ಆಡಳಿತಾಧಿಕಾರಿ ಸೈಯದ್ ನಯೀಮ್, ಇಒ ಎಚ್.ಹನುಮಂತಪ್ಪ, ಎಇಇ ಲಿಂಗರಾಜು, ರಾಜಣ್ಣ, ಬಿಇಒ ನಿರ್ಮಲಾದೇವಿ, ಸಿಡಿಪಿಒ ನವೀನ್‌ಕುಮಾರ ಇತರರಿದ್ದರು. problems
- ತಾಪಂ ಇಒ ಎಚ್. ಹನುಮಂತಪ್ಪ ಸೂಚನೆ
- ತಾಲೂಕು ಮಟ್ಟದ ಪ್ರಗತಿ ಸಭೆ
ಮೊಳಕಾಲ್ಮೂರು: ಮಳೆಯ ಅಭಾವದಿಂದ ತುಂಗಭದ್ರಾ ಹಿನ್ನೀರು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನೀರಿನ ಸಮಸ್ಯೆ ಉದ್ಬವಿಸದಂತೆ ಪರ್ಯಾಯ ವ್ಯವಸ್ಥೆ ಮತ್ತು ಆರ್‌ಒ ಪ್ಲಾಂಟ್‌ಗಳ ಸಮರ್ಪಕ ನಿರ್ವಹಣೆಗೆ ಒತ್ತು ಕೊಡಬೇಕು ಎಂದು ತಾಪಂ ಇಒ ಎಚ್. ಹನುಮಂತಪ್ಪ ಪಿಡಿಒಗಳಿಗೆ ತಾಕೀತು ಮಾಡಿದರು. problems
ತಾಲೂಕು ಪಂಚಾಯಿತಿ ಸಂಭಾಂಗಣದಲ್ಲಿ ಆಡಳಿತಾಧಿಕಾರಿ ಸೈಯದ್ ನಯೀಮ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಗತಿ ಸಭೆಯಲ್ಲಿ ಮಾತನಾಡಿದರು.
ಸ್ಥಳೀಯವಾಗಿ ನೀರಿನ ಕೊರತೆ ಕಂಡು ಬಂದರೆ ಹತ್ತಿರದ ರೈತರ ಕೊಳವೆ ಬಾವಿ ನೀರು ಬಳಸಿಕೊಳ್ಳಬೇಕು. ತುರ್ತು ಸಮಸ್ಯೆ ಕಂಡುಬಂದರೆ ಟ್ಯಾಂಕರ್ ಮೊರೆ ಹೋಗಬೇಕು. ತಾತ್ಕಾಲಿಕ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇಲ್ಲದ ಸಬೂಬು ಕೇಳುವುದಿಲ್ಲ ಎಂದು ಖಡಕ್ ಸೂಚನೆ ನೀಡಿದರು.
ತುಂಗಭದ್ರಾ ಹಿನ್ನೀರು ನಮಗೆ ವರದಾನವಾಗಿತ್ತು. ಡ್ಯಾಂ ತಳಮಟ್ಟ ಕಂಡಿರುವ ಹಿನ್ನೆಲೆ ನೀರು ಸರಬರಾಜು ಆಗುವ ಜಾಕ್ವೆಲ್ ಸ್ಥಗಿತ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಬರುವ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾದರೆ ಸುಗಮ. ಅಲ್ಲಿಯತನಕ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದರು.
ಕೃಷಿ ಅಧಿಕಾರಿ ಹೇಮಂತನಾಯ್ಕ ಮಾತನಾಡಿ, ಈ ವರ್ಷ ಮುಂಗಾರು ತಡವಾಗಿದೆ. ವಾಡಿಕೆಗಿಂತ ಕಡಿಮೆ ಮಳೆ ಬಂದಿದೆ. ಜೂನ್ ನಂತರ ಶೇಂಗಾ ಬಿತ್ತನೆ ಕಾರ್ಯ ಶುರುವಾಗಲಿದೆ. ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರೈತರು ಆದಷ್ಟು ಮಿಶ್ರ ಬೆಳೆ ಪದ್ಧತಿಗೆ ಒತ್ತು ಕೊಡಬೇಕು. ಇದರಿಂದ ಭೂಮಿ ಫಲವತ್ತತೆ ಹೆಚ್ಚುವುದಲ್ಲದೆ, ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆಯಲ್ಲಿ ಆದಾಯ ನಿರೀಕ್ಷಿಸಬಹುದು ಎಂದು ತಿಳಿಸಿದರು.
ಒಣ ಹವೆ ಪ್ರದೇಶದಲ್ಲಿ ಕಡಿಮೆ ಖರ್ಚಿನಲ್ಲಿ ಆದಾಯ ತರುವ ಸಿರಿಧಾನ್ಯ ಬೆಳೆಗಳಿಗೆ ಹೆಚ್ಚು ಉತ್ತೇಜನ ಕೊಡಲಾಗಿದೆ. ಕಳೆದ ವರ್ಷ ಬೆಳೆದಂತಹ 127 ರೈತರಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ಈ ವರ್ಷವೂ ಹೆಚ್ಚು ಬೆಳೆಯಲು ಒಲವು ತೋರಬೇಕು. ಮುಖ್ಯವಾಗಿ ಕೃಷಿ ಅಧಿಕಾರಿಗಳ ಸಲಹೆ ಸೂಚನೆ ಪಾಲಿಸುವುದು ಸೂಕ್ತ ಮಾರ್ಗೋಪಾಯ ಎಂದರು.
ಉಳಿದಂತೆ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು. ಗ್ರಾ.ಕು. ನೀರು ಇಲಾಖೆ ಎಇಇ ಲಿಂಗರಾಜು, ಬೆಸ್ಕಾಂ ಎಇಇ ರಾಜಣ್ಣ, ಬಿಇಒ ನಿರ್ಮಲಾದೇವಿ, ಸಿಡಿಪಿಒ ನವೀನ್‌ಕುಮಾರ, ನಿರ್ಮಿತಿ ಕೇಂದ್ರ ಎಇ ಸತೀಶ್, ಅರಣ್ಯಾಧಿಕಾರಿ ಶ್ರೀಹರ್ಷ, ತೋಟಗಾರಿಕೆ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಬಿಆರ್‌ಸಿ ಎಚ್.ಹನುಮಂತಪ್ಪ, ರೇಷ್ಮೆ ಇಲಾಖೆ ಅಧಿಕಾರಿ ಮಹೇಶ್, ತಾಪಂ ವ್ಯವಸ್ಥಾಪಕ ನಂದೀಶ್, ಶಿವರಾಜ್, ಲಕ್ಷ್ಮೀದೇವಿ ಹಾಗೂ ಇತರರಿದ್ದರು.