ನಾಯಕನಹಟ್ಟಿ: ಶಿಕ್ಷಕರಿಗೆ ವಿಜ್ಞಾನ ವಿಷಯದ ಬಗ್ಗೆ ಆಳವಾದ ಜ್ಞಾನವಿದ್ದರೆ ವಿದ್ಯಾರ್ಥಿಗಳು ಪ್ರಗತಿ ಹೊಂದಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ಹೇಳಿದರು. ಕುದಾಪುರ ಐಐಎಸ್ಸಿ ಕ್ಯಾಂಪಸ್ಸಿನ ಪ್ರತಿಭಾನ್ವೇಷಣೆ ಮತ್ತು ಕೌಶಲಾಭಿವೃದ್ಧಿ ಕೇಂದ್ರಕ್ಕೆ ಸೋಮವಾರ ಅವರು ಭೇಟಿ ನೀಡಿ ಪ್ರಯೋಗಾಲಯ ವೀಕ್ಷಿಸಿ ನಂತರ ತರಬೇತಿ ನಿರತ ವಿಜ್ಞಾನ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಕೆಇಎ ರಾಜ್ಯದಲ್ಲಿ ವೃತ್ತಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿದೆ. ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಶೇ. 99 ಅಂಕ ಪಡೆಯುತ್ತಿದ್ದರು. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾತ್ರ ಶೇ. 30-40 ಅಂಕ ಪಡೆಯುತ್ತಿದ್ದರು. ಕಾರಣ ಅವರು ಕೋಚಿಂಗ್ ಸೆಂಟರ್ಗಳಲ್ಲಿ ವಿವಿಧ ಪ್ರಶ್ನೆ ಪತ್ರಿಕೆ ಬಿಡಿಸುವ ಸಿದ್ಧ ಮಾದರಿ ಅಭ್ಯಾಸ ಮಾಡುವುದು ಗಮನಕ್ಕೆ ಬಂದಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಬಗ್ಗೆ ಜ್ಞಾನದ ಕೊರತೆ ಇರುವುದು ಸ್ಪಷ್ಟವಾಯಿತು. ಹೀಗೆ ಮುಂದುವರಿದರೆ ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಗುಣಾತ್ಮಕ ಕಲಿಕೆ ಕಣ್ಮರೆಯಾಗಲಿದೆ ಎಂಬುದನ್ನು ಅರಿತು ಇದನ್ನು ಸರಿಪಡಿಸಲು ನಾನು ಕೆಇಎ ನಿರ್ದೇಶಕಿ ಆಗಿದ್ದ ವೇಳೆ ತಜ್ಞರೊಂದಿಗೆ ಚರ್ಚಿಸಿ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಿ ಐಐಎಸ್ಸಿಯಂತಹ ಅಂತಾರಾಷ್ಟ್ರೀಯ ಗುಣಮಟ್ಟದ ಸಂಸ್ಥೆಯಲ್ಲಿ ರಾಜ್ಯದ ವಿಜ್ಞಾನ ಶಿಕ್ಷಕರಿಗೆ ಮೂಲ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಕ್ರಿಯಾತ್ಮಕ ಮತ್ತು ಪ್ರಯೋಗಾತ್ಮಕ ತರಬೇತಿಗೆ ಅವಕಾಶ ಕಲ್ಪಿಸಿದ್ದೆ ಎಂದು ತಿಳಿಸಿದರು.
ಸರ್ಕಾರಿ ವ್ಯವಸ್ಥೆಯಲ್ಲಿ ಲಭ್ಯವಿರುವ ಮೂಲ ಸೌಕರ್ಯ ಬಲಪಡಿಸಿ ಶಿಕ್ಷಕರ ಜ್ಞಾನ ಮತ್ತು ಸಾಮರ್ಥ್ಯ ಹೆಚ್ಚಿಸಬೇಕಾಗಿದೆ. ಆಗ ಮಾತ್ರ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾಗಿ ತಿಳಿಸಿದರು.
ಪ್ರತಿ ಶಿಕ್ಷಕರು ಜ್ಞಾನ ಹೆಚ್ಚಿಸಿಕೊಂಡು ವಿದ್ಯಾರ್ಥಿಗಳಿಗೆ ಸರಳವಾಗಿ ಬೋಧಿಸಿ ಮತ್ತು ತಾರ್ಕಿಕವಾಗಿ ಆಲೋಚಿಸುವ ಮನೋಭಾವ ಬೆಳಸಬೇಕು ಎಂದು ತರಬೇತಿ ಪಡೆಯುತ್ತಿರುವ ಒರಿಸ್ಸಾ ಪಿಜಿ ಶಿಕ್ಷಕರಿಗೆ ಸಲಹೆ ನೀಡಿದರು. ಕೇಂದ್ರದ ಸಂಚಾಲಕ ಹಾಗೂ ಹಿರಿಯ ಸಂಶೋಧನಾ ವಿಜ್ಞಾನಿ ಪ್ರೊ.ಬಿ. ಸುಬ್ಬಾರೆಡ್ಡಿ, ಜಿಟಿಟಿಸಿ ಸಂಸ್ಥೆ ಪ್ರಾಚಾರ್ಯ ಅನಿಲ್ಕುಮಾರ್, ಪ್ರೊ. ರಾಘವೇಂದ್ರ, ಪ್ರೊ. ಅರವಿಂದ, ಪ್ರೊ. ಕಿಶೋರ್, ಇಂಜಿನಿಯರ್ ಹೇಮಂತ್ಕುಮಾತ್, ತಹಸೀಲ್ದಾರ್ ರೆಹಾನ್ಪಾಷಾ, ಕಂದಾಯ ನಿರೀಕ್ಷಕ ಚೇತನ್ಕುಮಾರ್ ಇತರರು ಇದ್ದರು.