Child marriage ಭರಮಸಾಗರ ಹೋಬಳಿ ಪಿಚ್ಚಾರಹಟ್ಟಿ ಸುಲ್ತಾನಿಪುರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಬಾಲ್ಯ ವಿವಾಹ ತಡೆ ಕುರಿತು ಟಿಎಚ್‌ಒ ಡಾ. ಬಿ.ವಿ. ಗಿರೀಶ್ ಅರಿವು ಮೂಡಿಸಿದರು.
- ಸಾರ್ವಜನಿಕರಿಗೆ ಟಿಎಚ್ ಡಾ. ಬಿ.ವಿ.ಗಿರೀಶ್ ಸಲಹೆ
- ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ
- ಪಿಚ್ಚಾರಹಟ್ಟಿ ಸುಲ್ತಾನಿಪುರದಲ್ಲಿ ಜಾಗೃತಿ ಕಾರ್ಯಕ್ರಮ
ಭರಮಸಾಗರ: ಬಾಲ್ಯ ವಿವಾಹ ತಡೆಗೆ ಸಾರ್ವಜನಿಕರು ಕಟ್ಟುನಿಟ್ಟಿನ ನಿಗಾವಹಿಸಬೇಕು ಎಂದು ಟಿಎಚ್‌ಒ ಡಾ. ಬಿ.ವಿ. ಗಿರೀಶ್ ಹೇಳಿದರು.child marriage
ಹೋಬಳಿಯ ಪಿಚ್ಚಾರಹಟ್ಟಿ ಸುಲ್ತಾನಿಪುರದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ತಾಯಂದಿರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ 1098 ಸಂಖ್ಯೆಗೆ ಕರೆ ಮಾಡಬೇಕು. ಮಾಹಿತಿ ನೀಡುವವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.
ವಿವಾಹದ ವಯಸ್ಸು ಹೆಣ್ಣು ಮಕ್ಕಳಿಗೆ 18, ಗಂಡು ಮಕ್ಕಳಿಗೆ 21 ವರ್ಷ ನಿಗದಿಯಾಗಿದೆ. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅಪ್ರಾಪ್ತರ ವಿವಾಹಕ್ಕೆ ಕಾರಣರಾದವರು ಹಾಗೂ ಭಾಗವಹಿಸಿದವರಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಮಾತನಾಡಿ, ಬಾಲ್ಯಾವಸ್ಥೆಯಲ್ಲಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿದರೆ ರಕ್ತಹೀನತೆ, ಹೆರಿಗೆ ವೇಳೆ ಅಧಿಕ ರಕ್ತಸ್ರಾವ, ಕಡಿಮೆ ತೂಕದ ಶಿಶುಗಳ ಜನನ, ದಿನ ತುಂಬದ ಹೆರಿಗೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಎಚ್ಚರಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಆಟಪಾಠದಲ್ಲಿ ಕಾಲ ಕಳೆಯಬೇಕಾದ ಬಾಲಕಿಯರು ಅರಿವಿನ ಕೊರತೆಯಿಂದ ಗರ್ಭಧರಿಸಿ ಜೀವನಪೂರ್ತಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಸುಲ್ತಾನಿಪುರದ ನಾಲ್ವರು ಬಾಲಕಿಯರು ಗರ್ಭಿಣಿಯರಾಗಿರುವುದು ಆತಂಕಕಾರಿ ವಿಷಯ ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಕುಚೇಲ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಜ್ಯೋತಿ, ಆಶಾ ಕಾರ್ಯಕರ್ತೆ ಕಲ್ಪನಾ, ಅಂಗನವಾಡಿ ಕಾರ್ಯಕರ್ತೆ ನಗೀನ, ಗರ್ಭಿಣಿಯರು, ತಾಯಂದಿರು, ಗ್ರಾಮದ ಹಿರಿಯರು ಭಾಗವಹಿಸಿದ್ದರು.