ಹೊಸದುರ್ಗ ತಾಲೂಕಿನ ಜೋಡಿತುಂಬಿನಕೆರೆ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಆಯೋಜಿಸಿದ್ದ ಸಂಘದ ಗ್ರಾಮಘಟಕಗಳನ್ನು ಕಾರ್ಯಾಧ್ಯಕ್ಷ ಈಚಗಟ್ಟ ಸಿದ್ಧವೀರಪ್ಪ ಉದ್ಘಾಟಿಸಿದರು. ಲಕ್ಷ್ಮಣ್ ಹೂಗಾರ್, ಮಾಯಪ್ಪ, ಪ್ರಸನ್ನ ಇತರರು ಇದ್ದರು. Farmer 
ಚಿತ್ರದುರ್ಗ

ಸರ್ಕಾರ ಎಚ್ಚರಿಸಲು ರೈತ ಸಂಘದ ಬಲವರ್ಧನೆ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಬಿಸನಹಳ್ಳಿ, ಜೋಡಿತುಂಬಿನಕೆರೆ, ಮಾವಿನಕಟ್ಟೆ ಘಟಕಗಳ ಉದ್ಘಾಟನೆ
ಹೊಸದುರ್ಗ: ರೈತ ಸಂಘಟನೆ ಬಲಪಡಿಸಿದರೆ ಮಾತ್ರ ಆಳುವ ಸರ್ಕಾರಗಳನ್ನು ಎಚ್ಚರಿಸುವ ಶಕ್ತಿ ಬರುತ್ತದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಹೇಳಿದರು. Farmer
ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮಂಗಳವಾರ ಆಯೋಜಿಸಿದ್ದ ಬಿಸನಹಳ್ಳಿ, ಜೋಡಿತುಂಬಿನಕೆರೆ ಹಾಗೂ ಮಾವಿನಕಟ್ಟೆ ಗ್ರಾಮ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.
ಸಮಸ್ಯೆಗಳ ಕುರಿತು ಸರ್ಕಾರದ ಗಮನಸೆಳೆಯಲು, ಪರಿಹಾರ ಪಡೆಯಲು, ರೈತ ವಿರೋಧಿ ನೀತಿಗಳನ್ನು ಖಂಡಿಸಲು, ರೈತರ ಪರವಾದ ಹೋರಾಟ ರೂಪಿಸಲು ರೈತ ಸಂಘ ಬಲಗೊಳ್ಳಬೇಕಾದ ಅವಶ್ಯಕತೆ ಇದೆ. ರೈತರು ತಮ್ಮ ಕೃಷಿ ಬದುಕಿನ ಜತೆ ಸ್ವಪ್ರೇರಣೆಯಿಂದ ರೈತ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚುತ್ತಿರುವ ಕೃಷಿ ವೆಚ್ಚ, ಮಳೆಯ ಅಭಾವ, ಪ್ರಕೃತಿ ವಿಕೋಪ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿವೆ. ರೈತನ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಸರ್ಕಾರಗಳು ರೈತರಿಗೆ ಪಿಂಚಣಿ ಯೋಜನೆ, ಆರೋಗ್ಯ ಸೇವೆ, ಕೃಷಿಗೆ ಬಡ್ಡಿ ರಹಿತ ಸಾಲ ಒದಗಿಸಲು ಮುಂದಾಗಬೇಕು ಎಂದರು.
ಬೆಳೆ ವಿಮೆ ಪ್ರೀಮಿಯಂ ಕಟ್ಟುವುದು ರೈತರಿಗೆ ಆರ್ಥಿಕ ಹೊರೆಯಾಗಿದೆ. ಸರ್ಕಾರವೇ ಪ್ರೀಮಿಯಂ ಹಣವನ್ನು ಕಟ್ಟಿ ಬೆಳೆ ವಿಫಲವಾದರೆ ಪರಿಹಾರ ಕೊಡಿಸಬೇಕು. ಚಿತ್ರದುರ್ಗ ಜಿಲ್ಲೆಯ ಸಮಗ್ರ ನೀರಾವರಿಗೆ ಹಲವು ದಶಕಗಳಿಂದ ಜಿಲ್ಲೆಯ ರೈತರು ಹೋರಾಟ ನಡೆಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಆರಂಭವಾಗಿ ಎರಡು ದಶಕಗಳಾದರೂ ಇಲ್ಲಿಯವರೆಗೆ ರೈತರ ಜಮೀನಿಗೆ ನೀರು ಹರಿದಿಲ್ಲ. ಸರ್ಕಾರ ಇನ್ನಾದರೂ ನೀರು ಹರಿಸಲು ಬದ್ಧತೆ ತೋರಬೇಕು ಎಂದರು.
ರೈತ ಹೋರಾಟಗಾರ ಲಕ್ಷ್ಮಣ್ ಹೂಗಾರ್ ಮಾತನಾಡಿ, ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರು ದೊರಕಿಸುವ ವಿಚಾರದಲ್ಲಿ ಸರ್ಕಾರಗಳು ನಿರ್ಲಕ್ಷೃ ತೋರಿವೆ. ರಾಜ್ಯದ ಸಂಸದರು ಪಕ್ಷಬೇಧ ಮರೆತು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಘೋಷಿಸಿರುವ ಅನುದಾನ ತರುವ ಕೆಲಸ ಮಾಡಬೇಕು. ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷರ ನೇಮಕ: ತಾಲೂಕಿನ ಮಾವಿನಕಟ್ಟೆ, ಬಿಸನಹಳ್ಳಿ ಹಾಗೂ ಜೋಡಿ ತಂಬಿನಕೆರೆ ಗ್ರಾಮಗಳಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ನೂತನ ಘಟಕಗಳನ್ನು ಉದ್ಘಾಟಿಸಲಾಯಿತು. ಬಿಸನಹಳ್ಳಿ ಘಟಕದ ಅಧ್ಯಕ್ಷರಾಗಿ ವಿಜಯಕುಮಾರ್, ಜೋಡಿ ತುಂಬಿನಕೆರೆ ಘಟಕದ ಅಧ್ಯಕ್ಷರಾಗಿ ಪ್ರಸನ್ನ, ಮಾವಿನಕಟ್ಟೆ ಘಟಕದ ಅಧ್ಯಕ್ಷರಾಗಿ ಪಣೀಂದ್ರರನ್ನು ಆಯ್ಕೆ ಮಾಡಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಮಾಯಪ್ಪ, ಕಾರ್ಯದರ್ಶಿ ನಿರಂಜನ, ಸಂಘಟನಾ ಕಾರ್ಯದರ್ಶಿ ಕೀರ್ತಪ್ಪ, ರಘು, ತುಂಬಿನಕೆರೆ ಬಸವರಾಜ್, ರಂಗಸ್ವಾಮಿ, ವೆಂಕಟೇಶ್, ಬಸವರಾಜಪ್ಪ, ಮಲ್ಲಿ ಕಾರ್ಜುನ್, ರಮೇಶ್, ರವಿಕುಮಾರ್ ಇತರರು ಇದ್ದರು.