- ಮಂಗಳೂರು ಬಳಿಕ ದುರ್ಗದಲ್ಲಿ ಕ್ಯಾಬಿನೆಟ್ ಮೀಟಿಂಗ್
- ಪ್ರಕಟವಾಗಬೇಕಿದೆ ಸರ್ಕಾರದ ನಿರ್ಧಾರ
- ಸಚಿವ ಸಂಪುಟ ಸಭೆ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಬೆಂಗಳೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆದ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಸಂಪುಟ ಸಭೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಶೀಘ್ರ ನಿರ್ಧಾರವಾಗಲಿದ್ದು, ಸಭೆ ಮುಂಗಾರು ಅಽವೇಶನಕ್ಕೂ ಮುನ್ನ ಅಥವಾ ಬಳಿಕವೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಬೆಂಗಳೂರು ವಿಭಾಗೀಯ ಮಟ್ಟದ ಸಭೆ ಯಶಸ್ವಿಯಾಗಿದೆ ಎಂದು ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯನ್ನು ಕೂಡ ನಡೆಸಲು ಸರ್ಕಾರ ಇಚ್ಛಿಸಿದೆ ಎನ್ನಲಾಗಿದೆ.
ಹಿರಿಯೂರು ವಿಧಾನಸಭಾ ಉಪಚುನಾವಣೆ ಗಮನದಲ್ಲಿ ಇಟ್ಟುಕೊಂಡು ವಿಭಾಗೀಯ ಪ್ರಗತಿ ಪರಿಶೀಲನಾ ಸಭೆಯನ್ನು ಚಿತ್ರದು ರ್ಗದಲ್ಲಿ ಆಯೋಜಿಸಲಾಗಿತ್ತು ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಈಗ ಸಂಪುಟ ಸಭೆ ಉದ್ದೇಶ ಉಪ ಚುನಾವಣೆ ದೃಷ್ಟಿಯೋ ಅಥ ವಾ ಮಧ್ಯ ಕರ್ನಾಟಕದ ನಾನಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಪರಿಹಾರ ಕಂಡುಕೊಳ್ಳುವ ಕಾಳಜಿಯೋ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಸಂಪುಟ ವಿಸ್ತರಣೆಯಾಗಿ ಆ.೩ರಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಬಹುದೆಂಬ ವರದಿಗಳಿವೆ. ಆ ರೀತಿಯಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪೂರ್ಣ ಸಚಿವ ಸಂಪುಟದ ಸಭೆಯನ್ನು ಚಿತ್ರದುರ್ಗದಲ್ಲಿ ನಡೆಸಿದರೆ, ಬೆಂಗಳೂರು ಹೊರತು ಪಡಿಸಿ ಹೊರ ಜಿಲ್ಲೆಯಲ್ಲಿ ನಡೆದ ಮೊದಲ ಸಭೆ ಎಂಬ ದಾಖಲೆ ಬರೆಯಲಿದೆ.
ಈಗಾಗಲೇ ರಾಜ್ಯಸರ್ಕಾರ ಮಂಗಳೂ ರಲ್ಲಿ ಕ್ಯಾಬಿನೆಟ್ ಸಭೆ ನಡೆಸಲು ಉದ್ದೇಶಿಸಿದೆ. ಇದಾದ ಬಳಿಕ ದುರ್ಗದಲ್ಲಿ ಎಂದು ಹೇಳಲಾಗಿದ್ದು, ಎಲ್ಲಿ ಮೊದಲು ಎಂಬುದನ್ನು ಕಾದು ನೋಡಬೇಕಿದೆ.
ಹತ್ತಾರು ವರ್ಷಗಳ ಕಾಲ ಬರವನ್ನೇ ಹಾಸಿ ಹೊದ್ದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಹತ್ತು ಹಲವು ಸಮಸ್ಯೆಗಳು ಜ್ವಲಂತವಾಗಿವೆ. ವಿಶೇಷವಾಗಿ ಬಹಳ ವರ್ಷಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನ, ಪ್ರವಾಸೋದ್ಯಮ ಅಭಿವೃದ್ಧಿ ಸಹಿತ ರಾಜ್ಯದ ಪ್ರಮುಖ ವಿಷಯಗಳ ಕುರಿತಂತೆ ಚರ್ಚೆ, ನಿರ್ಣಯದ ಘೋಷಣೆಗಳನ್ನು ಈ ಸಭೆಯಿಂದ ನಿರೀಕ್ಷಿಸಲಾಗಿದೆ.
ಮಂಗಳೂರಲ್ಲಿ ಸಂಪುಟ ಸಭೆ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ. ನಾನು ಚಿತ್ರದುರ್ಗದಲ್ಲೂ ಈ ಸಭೆಯನ್ನು ನಡೆಸುವಂ ತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇನೆ. ಮಂಗಳೂರಲ್ಲಿ ಆದ ಬಳಿಕ ಇಲ್ಲಿ ಸಭೆ ನಡೆಸುವುದಾಗಿ ಸಿಎಂ ಭ ರವಸೆ ಕೊಟ್ಟಿದ್ದಾರೆ.
— ಕೆ.ಸಿ.ವೀರೇಂದ್ರ ಪಪ್ಪಿ, ಶಾಸಕರು, ಚಿತ್ರದುರ್ಗ
ಚಿತ್ರದುರ್ಗದಲ್ಲಿ ಸಂಪುಟ ಸಭೆ ನಡೆಸುವ ಕುರಿತಂತೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಮುಂದೆ ಈ ಸಭೆಯನ್ನು ಇಲ್ಲಿ ಆಯೋಜಿಸ ಬಹುದು.
— ಟಿ.ವೆಂಕಟೇಶ್, ಜಿಲ್ಲಾಽಕಾರಿ, ಚಿತ್ರದುರ್ಗ.