ಭರಮಸಾಗರದ ದೊಡ್ಡಪೇಟೆ ಶ್ರೀರಾಘವೇಂದ್ರ ಕೃಪಾಶ್ರಮದಲ್ಲಿ ಭಾನುವಾರ ಅಧಿಕ ಮಾಸದ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ಸೇವೆ ನಡೆಯಿತು. 
ಚಿತ್ರದುರ್ಗ

ಶ್ರೀ ರಾಘವೇಂದ್ರ ಗುರುಸ್ತೋತ್ರ ಪಾರಾಯಣ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಅಧಿಕಮಾಸದ ಪ್ರಯುಕ್ತ ಆಯೋಜನೆ
  • ಬೃಂದಾವನ, ಪಾದುಕೆಗಳಿಗೆ ವಿಶೇಚ ಪೂಜೆ
ಭರಮಸಾಗರ: ಅಧಿಕಮಾಸದ ಪ್ರಯುಕ್ತ ಇಲ್ಲಿನ ದೊಡ್ಡಪೇಟೆಯ ಶ್ರೀ ರಾಘವೇಂದ್ರ ಕೃಪಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಅಪ್ಪಣ್ಣಾಚಾರ್ಯ ವಿರಚಿತ ಶ್ರೀ ರಾಘವೇಂದ್ರ ಗುರುಸ್ತೋತ್ರ 33 ಬಾರಿ ಸಾಮೂಹಿಕ ಪಾರಾಯಣ ಸಂಪನ್ನಗೊಂಡಿತು.
ಬೆಳಗ್ಗೆಯಿಂದಲೇ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ, ಬೆಳ್ಳಿ ಬೃಂದಾವನ ಹಾಗೂ ಪಾದುಕೆಗಳಿಗೆ ವಿಶೇಷ ಪೂಜೆ, ಅರ್ಚನೆ, ಮಹಾಮಂಗಳಾರತಿ ನೆರವೇರಿಸಲಾಯಿತು. ವಿವಿಧ ಬಗೆಯ ಹೂ., ಪತ್ರೆ, ತುಳಸಿ ದಳಗಳಿಂದ ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೀಪಾಲಂಕಾರ ಕಣ್ಮನ ಸೆಳೆಯಿತು.
ನಂತರ ಅಪ್ಪಣ್ಣಾಚಾರ್ಯರು ರಚಿಸಿರುವ ಶ್ರೀ ರಾಘವೇಂದ್ರ ಗುರುಸ್ತೋತ್ರವನ್ನು ಭಕ್ತರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ರಾಗಬದ್ಧವಾಗಿ ಪಠಿಸಿದರು. ಪಾರಾಯಣದ ವೇಳೆ 33 ವಿಧದ ಪುಷ್ಪಾರ್ಚನೆ, 33 ದೀಪ ಸೇವೆ, 33 ನೈವೇದ್ಯ ಸಮರ್ಪಣೆ, ವೇದಘೋಷ, ಸಂಕಲ್ಪ ವಿಧಿ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.
ಪಾರಾಯಣದ ಸಂದರ್ಭದಲ್ಲಿ ಭಕ್ತರು ರಾಯರನ್ನು ಧ್ಯಾನಿಸುತ್ತಾ ಭಕ್ತಿಭಾವದಲ್ಲಿ ತಲ್ಲೀನರಾಗಿದ್ದು ಗಮನಸೆಳೆಯಿತು. ಮೂರು ವರ್ಷಕ್ಕೊಮ್ಮೆ ಬರುವ ಅಧಿಕಮಾಸದಲ್ಲಿ ಇಂತಹ ಅಪರೂಪದ ಪಾರಾಯಣ ಸೇವೆಯಲ್ಲಿ ಭಾಗವಹಿಸಲು ಭಕ್ತರು ಕಾತರದಿಂದ ಕಾಯುತ್ತಿದ್ದರು ಎಂದು ಸೇವಾ ಬಳಗ ತಿಳಿಸಿತು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀರಾಯರ ಮಂತ್ರಾಕ್ಷತೆ, ತೀರ್ಥ, ಪ್ರಸಾದ ವಿತರಿಸಲಾಯಿತು. ಬೃಂದಾವನದ ಸೊಬಗು, ಧಾರ್ಮಿಕ ವಾತಾವರಣ ಹಾಗೂ ವೇದಮಂತ್ರಗಳ ಘೋಷಣೆ ನೆರೆದಿದ್ದ ಭಕ್ತರ ಮನಸ್ಸಿಗೆ ಆಧ್ಯಾತ್ಮಿಕ ಸಂತೃಪ್ತಿ ತಂದುಕೊಟ್ಟಿತು.
ಗುರುದರ್ಶನ ಸೇವಾ ಬಳಗದ ಸದಸ್ಯರು, ಭಕ್ತರು ಹಾಗೂ ರಾಯರ ಆರಾಧಕರು ಭಾಗವಹಿಸಿದ್ದರು.