ಚಿತ್ರದುರ್ಗ: ಬದುಕಿಗೆ ಅಗತ್ಯವಿರುವ ಪಾಠವನ್ನು ಕಲಿಸುವ ಆಟೋಟಗಳು ನಮ್ಮ ನಾಯಕತ್ವ ಗುಣಗಳ ವೃದ್ಧಿಗೂ ಹೆಚ್ಚು ಸಹಕಾರಿಯಾಗಿವೆ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಅಭಿಪ್ರಾಯಪಟ್ಟರು.
ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಾವಣಗೆರೆ ವಿವಿ ಅಂತರ ಕಾಲೇಜು ಬಾಲಕ, ಬಾಲಕಿಯರ ೧೫ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ದಾವಣಗೆರೆ ವಿವಿ ತಂಡದ ಆಯ್ಕೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಜೀವನದ ಪ್ರತಿ ಕ್ಷಣದಲ್ಲೂ ಸೋಲು-ಗೆಲುವು ಇರುತ್ತದೆ. ಕ್ರೀಡಾ ನಿಯಮಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ. ಶಿಸ್ತು, ಸಮಯ ಪಾಲನೆ ಕ್ರೀಡೆಯಲ್ಲಿ ಮುಖ್ಯ. ಗೆದ್ದವರು ಬೀಗದೆ, ಸೋತವರು ಆತ್ಮವಿಶ್ವಾಸ ಕಳೆದುಕೊಳ್ಳದೇ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸರ್ಕಾರಿ ಉದ್ಯೋಗ ನೇಮಕದಲ್ಲಿರುವ ಶೇ.೨ ಮೀಸಲಾತಿಯನ್ನು ಕ್ರೀಡಾಪಟುಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ಮೋಹನ್, ತಾಪಂ ಇಒ ಜಯಸಿಂಹ, ಕುಡಾ ಸದಸ್ಯ ಎಚ್. ಅಂಜಿನಪ್ಪ, ತಹಸೀಲ್ದಾರ್ ಬೀಬೀ -Áತಿಮಾ, ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ್, ವೀರೇಂದ್ರ, ವೆಂಕಟೇಶ್, ಶಂಕರಪ್ಪ, ಹನೀಸ್, ಸೈಯದ್ ಖುದ್ದೂಸ್ ಇದ್ದರು. ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕ್ರೀಡಾ ದಿನಚರಿ ಬಿಡುಗಡೆ ಮಾಡಲಾಯಿತು.
ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿವಿ ಮತ್ತು ವಿಶ್ವವಿದ್ಯಾನಿಲಯದ ದೈಹಿ ಕ ಶಿಕ್ಷಣ ನಿರ್ದೇಶಕರ ಸಂಘ ಹಾಗೂ ಚಿತ್ರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗವಿತ್ತು.
ನಿರ್ದೇಶಕರ ನೇಮಕಕ್ಕೆ ತಿಂಗಳ ಗಡುವು
ವಿವಿ ಸಿಂಡಿಕೇಟ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಕಳೆದ ೨೦ ವರ್ಷಗಳಿಂದಲೂ ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕ್ರೀಡಾ ನಿರ್ದೇಶಕರ ನೇಮಕವಾಗಿಲ್ಲ. ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ದೈಹಿಕ ಶಿಕ್ಷಣ ಶಿಕ್ಷಕರು, ನಿರ್ದೇಶಕರು ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಾಸನಸಭೆಯಲ್ಲಿ ಈ ಕುರಿತ ಮಾತನಾಡುವಂತೆ ಶಾಸಕರಿಗೂ ಮನವಿ ಮಾಡಿದರು.