ಮೊಳಕಾಲ್ಮೂರು ತಾಲೂಕು ರಾಯಾಪುರದಲ್ಲಿ ಶ್ರೀ ಬಸವೇಶ್ವರ ನೂತನ ರಥವನ್ನು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಶ್ರೀ ಬಸವಲೀಂಗ ಸ್ವಾಮಿಜಿ, ರಾಯಾಪುರ ಗ್ರಾಪಂ ಅಧ್ಯಕ್ಷೆ ಕರಿಬಸಮ್ಮ ಧನಂಜಯ, ದ್ರಾಕ್ಷಾರಸ ಮಡಳಿ ಅಧ್ಯಕ್ಷ ಡಾ. ಯೋಗೇಶ್‌ಬಾಬು, ಎನ್.ವೈ. ಚೇತನ,ಪಟೇಲ್‌ಜಿ. ಪಾಪಾನಾಯಕ ಇದ್ದರು. 
ಚಿತ್ರದುರ್ಗ

ಆರ್ಥಿಕ ಸಬಲೀಕರಣಕ್ಕೆ ಶೋಷಿತರಲ್ಲಿ ಒಗ್ಗಟ್ಟು ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅಭಿಮತ
  • ರಾಯಾಪುರದಲ್ಲಿ ಶ್ರೀ ಬಸವೇಶ್ವರ ರಥ ಲೋಕಾರ್ಪಣೆ
ಮೊಳಕಾಲ್ಮೂರು: ಶೋಷಿತ ಸಮುದಾಯಗಳು ರಾಜಕೀಯ ಪಕ್ಷಗಳ ಕೈಗೊಂಬೆಯಾಗದೆ ಒಗ್ಗಟ್ಟಿನ ಬಲದಲ್ಲಿ ಆರ್ಥಿಕ ಸಬಲೀಕರಣ ಸಾಧಿಸುವ ಜತೆಗೆ ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ರಾಯಾಪುರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ನೂತನ ರಥ ಲೋಕಾರ್ಪಣೆ, ಕಳಸ ಪ್ರತಿಷ್ಠಾಪನೆ, ಊರು ಮಾರಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ, ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಧಾರ್ಮಿಕ ಕಾರ್ಯಗಳು ಸತ್ಯ, ನಿಷ್ಠೆ, ಪ್ರಮಾಣಿಕ ದಿಕ್ಕಿನಡೆ ಕೊಂಡೊಯ್ಯುತ್ತವೆ. ಇಂತಹ ಮಹತ್ವಪೂರ್ಣ ಕಾರ್ಯಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುತ್ತವೆ ಎಂದು ಹೇಳಿದರು.
ತುಳಿತಕ್ಕೆ ಒಳಗಾದ ಶೋಷಿತ ಸಮುದಾಯಗಳನ್ನು ಶೋಷಣೆಯಿಂದ ಬಿಡಿಸಿ ಸಾಮಾಜಿಕ ನ್ಯಾಯದ ಮೂಲಕ ಸಮಾಜದ ಮುಖ್ಯ ವಾಹನಿಗೆ ತರುವ ಕೆಲಸ ಮಾಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿ ದೊಡ್ಡದು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.
ಈ ದೇಶದ ಎಲ್ಲ ಜಾತಿಯ ಸಾಂಸ್ಕೃತಿಕ ನಾಯಕರು ತಮ್ಮ ಸಮುದಾಯದ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ದಲಿತ ಸಮುದಾಯಗಳು ಒಗ್ಗಟ್ಟಿನ ಬಲದೊಂದಿಗೆ ಪ್ರಗತಿಯತ್ತ ಸಾಗಬೇಕಿದೆ ಎಂದರು.
ರಾಜಕೀಯ ಪಕ್ಷಗಳಿಗೆ ದಲಿತ ಸಮುದಾಯಗಳ ಉದ್ಧಾರ ಬೇಕಿಲ್ಲ. ಕೇವಲ ಮತಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇಂತಹ ತಾತ್ಸಾರ ಮನೋಭಾವ ತಾಳಿರುವವರಿಗೆ ತಕ್ಕ ಪಾಠ ಕಲಿಸಬೇಕು. ನಮ್ಮ ಹಕ್ಕುಗಳ ಸದ್ಭಳಕೆಗೆ ಒತ್ತುಕೊಡಬೇಕು. ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವತ್ತ ಜಾಗೃತರಾಗಬೇಕು ಎಂದು ತಿಳಿಸಿದರು.
ಸಿದ್ದಯ್ಯನಕೋಟೆ ಶ್ರೀಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸಮಾಜದ ಒಳಿತಿಗೆ ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ನೆರವಾಗಿವೆ ಎಂದರು.
ಮಠಾಧಿಪತಿಗಳು ಮಠಕ್ಕೆ ಸೀಮಿತವಾಗದೆ ನೊಂದ ಸಮುದಾಯಗಳ ಏಳಿಗೆಗೆ ದುಡಿಯುವ ಸಂಕಲ್ಪ ಹೊಂದಿದ್ದಾರೆ. ಮೌಢ್ಯ, ಕಟ್ಟು ಪಾಡುಗಳಿಂದ ಹೊರಬಂದು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವ ಮುಖೇನ ಪ್ರಗತಿ ಸಾಧಿಸಬೇಕು ಎಂದರು.
ರಾಯಾಪುರ ಗ್ರಾಪಂ ಅಧ್ಯಕ್ಷೆ ಕರಿಬಸಮ್ಮ ಧನಂಜಯ, ದ್ರಾಕ್ಷಾರಸ ಮಡಳಿ ಅಧ್ಯಕ್ಷ ಡಾ. ಯೋಗೇಶ್‌ಬಾಬು, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಎನ್.ವೈ. ಚೇತನ, ಮುಖಂಡರಾದ ಪಟೇಲ್ ಜಿ. ಪಾಪಾನಾಯಕ, ಕೆ. ಜಗಲೂರಯ್ಯ, ಡಿ.ಎಂ. ಈಶ್ವರಪ್ಪ, ಪಿ.ಒ. ಮುತ್ತಯ್ಯ, ರಾಮ್‌ದಾಸ್, ಓಬಣ್ಣ, ಪಾಪಣ್ಣ, ರೇವಣ್ಣ, ಜಿ.ಪಿ. ಸುರೇಶ, ರಘುಮೂರ್ತಿ, ವಿ. ಮಾರನಾಯಕ, ಪಾಲಯ್ಯ, ಕುಮಾರ, ಭಕ್ತ ಪ್ರಹ್ಲಾದ, ವಿಜಯ್, ಗಂಗಾಧರ, ಮಹಾಂತೇಶ್ ಹಾಗೂ ಗ್ರಾಮಸ್ಥರು ಇದ್ದರು.