ಹೊಸದುರ್ಗ ತಾಲೂಕಿನ ಕಡದಿನಕೆರೆ ಗ್ರಾಮದಲ್ಲಿ ರೈತ ಬಿತ್ತನೆಗೆ ಜಮೀನು ಸಿದ್ದಗೊಳಿಸುತ್ತಿರುವುದು. sowing  
ಚಿತ್ರದುರ್ಗ

ಪೂರ್ವ ಮುಂಗಾರು ಬಿತ್ತನೆಗೆ ಹಿನ್ನಡೆ sowing

ಸುರೇಶ್ ಕೆಎಸ್

ಪ್ರಮುಖ ಮುಖ್ಯಾಂಶಗಳು

  • ಹೊಸದುರ್ಗ ತಾಲೂಕಿನಲ್ಲಿ ಮಳೆ ಅಭಾವ
  • ನೀರಿಲ್ಲದೆ ಬತ್ತಿದ ಕೊಳವೆ ಬಾವಿಗಳು
  • ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವ ತಾಲೂಕು
ಎಂ. ಯೋಗೀಶ ಹೊಸದುರ್ಗ
ಯಾತಕ್ಕೆ ಮಳೆ ಹೋದವೋ ಶಿವ ಶಿವ ಲೋಕಾ ತಲ್ಲಣಿಸುತಾವೋ ಎನ್ನುವಂತ ಸ್ಥಿತಿ ತಾಲೂಕಿನಲ್ಲಿ ಮಳೆರಾಯನ ಕಾಯುವಿಕೆಗೆ ಸಾಕ್ಷಿಯಾಗಿದೆ. ಹೊಸ ಮಳೆಗಳ ಪರ್ವ ಅರಂಭವಾಗಿ ಕೃತಿಕಾ ಮಳೆ ಮುಗಿಯುತ್ತಾ ಬಂದರೂ ಉತ್ತಮ ಮಳೆಯಾಗದಿರುವುದು ಪೂರ್ವ ಮುಂಗಾರು ಬಿತ್ತನೆಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. sowing
ತಾಲೂಕಿನಲ್ಲಿ ಮುಂಗಾರು ಬಿತ್ತನೆಗೂ ಮುನ್ನ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಉದ್ದು, ತೊಗರಿ, ಎಳ್ಳು ಹಾಗೂ ಸಾವೆ ಬಿತ್ತನೆ ಮಾಡುವುದು ವಾಡಿಕೆ. ಯುಗಾದಿ ನಂತರ ಹೊಸ ಮಳೆ ಆರಂಭವಾದ ತಕ್ಷಣ ಹೊನ್ನಾರು ಹೂಡಿ ಪೂರ್ವ ಮುಂಗಾರು ಬಿತ್ತನೆಗೆ ಭೂಮಿ ಹಸನು ಮಾಡಿಕೊಳ್ಳಬೇಕಾಗಿತ್ತು. ಅದರೆ ಮಳೆ ಬರಲೇ ಇಲ್ಲ.
ಅಶ್ವಿನಿ ಮತ್ತು ಭರಣಿ ಮಳೆಗಳು ರಣ ಬಿಸಿಲಿನಲ್ಲಿ ಕಳೆದು ಹೋಗಿ ಒಂದು ಹನಿಯನ್ನೂ ಧರೆಗೆ ಬೀಳಿಸಲಿಲ್ಲ. ಈ ಎರಡೂ ಮಳೆ ಬಂದಿದ್ದರೆ ರೈತರು ಹಿಂಗಾರು ಬೆಳೆ ಕೊಯ್ಲು ಮಾಡಿದ್ದ ಹೊಲಗಳಲ್ಲಿರುವ ಕೂಳೆ ತೆಗೆದು ಪೂರ್ವ ಮುಂಗಾರು ಬಿತ್ತನೆಗೆ ಹೊಲ ಹಸನುಗೊಳಿಸುತ್ತಿದ್ದರು. ಅಲ್ಪ ಸ್ವಲ್ಪ ಮಳೆಯಾಗಿದ್ದರೂ ಮೇ ತಿಂಗಳ ಮೊದಲ ವಾರದಲ್ಲಿ ಹೆಸರು, ಎಳ್ಳು ಹಾಗೂ ಸಾವೆ ಬಿತ್ತನೆ ಕಾರ್ಯ ನಡೆಯುತಿತ್ತು.
ಕಳೆದ ವರ್ಷ ಕೂಡ ಸರಿಯಾದ ಸಮಯಕ್ಕೆ ಮಳೆಯಾಗದೆ ಪೂರ್ವ ಮುಂಗಾರು ಬೆಳೆ ಸಂಪೂರ್ಣ ವಿಫಲವಾಗಿತ್ತು. ನಂತರ ಮುಂಗಾರು ಬೆಳೆ ಕೂಡ ರೈತನ ಕೈ ಹಿಡಿಯಲಿಲ್ಲ. ಈ ಬಾರಿಯಾದರೂ ಹೆಸರು ಬಿತ್ತಿ ಉತ್ತಮ ಬೆಳೆ ಪಡೆಯುವ ರೈತನ ಕನಸು ಕಮರಿ ಹೋಗುವ ಲಕ್ಷಣಗಳು ಹೆಚ್ಚಾಗಿವೆ.
ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು. ಸುಮಾರು 4500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಶ್ರೀರಾಂಪುರ ಹೋಬಳಿಯಲ್ಲಿ ಸುಮಾರು 1ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಳ್ಳು ಬಿತ್ತನೆಯಾಗುತ್ತದೆ. ಶ್ರೀರಾಂಪುರ ಹಾಗೂ ಮತ್ತೋಡು ಹೋಬಳಿಯಲ್ಲಿ ಪೂರ್ವ ಮುಂಗಾರು ಬೆಳೆಯಾಗಿ ಸಾವೆ ಬಿತ್ತುವ ವಾಡಿಕೆಯಿದೆ.
ಕಳೆದ ವಾರ ತಾಲೂಕಿನಲ್ಲಿ ಸ್ವಲ್ಪ ಮಳೆಯಾಗಿದ್ದು, ಬಿತ್ತನೆಗೆ ಕಾದಿರುವ ರೈತರು ಜಮೀನನ್ನು ಬಿತ್ತನೆಗೆ ಸಿದ್ದಗೊಳಿಸಿದ್ದಾರೆ. ಅಲ್ಪ ಪ್ರಮಾಣದಲ್ಲಿ ಹೆಸರು ಬಿತ್ತನೆಯಲ್ಲಿ ತೊಡಗಿದ್ದರೆ, ಬಹುತೇಕರು ಬಿತ್ತನೆ ಬೀಜ, ಗೊಬ್ಬರ ಸಿದ್ದಪಡಿಸಿಕೊಂಡು ಬಿತ್ತನೆಗೆ ಕಾದಿದ್ದಾರೆ. ಮಳೆ ಬಂದರೆ ಮುಂಗಾರು ಸಾವೆ ಬಿತ್ತನೆಯಾಗಲಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ತಾಲೂಕಿನಲ್ಲಿ ಮಳೆಯ ಅಭಾವದಿಂದ ಸಿರಿಧಾನ್ಯ ಕಣಜಕ್ಕೂ ಹಿನ್ನಡೆಯಾಗುವ ಸಾಧ್ಯತೆಯಿದೆ. ಹೆಸರು ಬಿತ್ತನೆ ತಡವಾದರೆ ಜುಲೈ ತಿಂಗಳ ಮುಂಗಾರು ಮಳೆಗೆ ಸಿಕ್ಕು ಬೆಳೆ ಹಾಳಾಗುತ್ತದೆ. ಮುಂಗಾರು ಬಿತ್ತನೆಗೂ ಹಿನ್ನಡೆಯಾಗುತ್ತದೆ. ಮಳೆ ಬರದೆ ರೈತ ಸಂಕಷ್ಟಕ್ಕೆ ಸಿಲುಕಿದ್ದು, ಬರ ಬರದಿರಲಿ ಎನ್ನುವ ರೈತನ ಆಶಯಕ್ಕೆ ಮಳೆರಾಯ ಅಸ್ತು ಎನ್ನಬೇಕಿದೆ.
ಬಿಸಿಲಿನ ತಾಪಮಾನ ಹೆಚ್ಚಾಗಿ ಇದೇ ಮೊದಲ ಬಾರಿಗೆ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಕೃಷಿಗೆ ಮೂಲ ಅಸರೆಯಾಗಿರುವ ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿದ್ದು, 800ಅಡಿ ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ. ತೆಂಗು, ಅಡಿಕೆ ಸೇರಿ ತೋಟಗಾರಿಕೆ ಬೆಳೆಗಳನ್ನು ಬೇಸಿಗೆಯಲ್ಲಿ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ. ಮುಂದಿನ ನಾಲ್ಕೈದು ದಿನದಲ್ಲಿ ಮಳೆ ಬರದಿದ್ದರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
"

ಮೇ ಮೊದಲ ವಾರದಲ್ಲಿ ಹೆಸರು, ಶೇಂಗಾ, ಹಲಸಂದೆ, ಎಳ್ಳು ಬಿತ್ತನೆಯಾಗಬೇಕಿತ್ತು. ಸರಿಯಾದ ಸಮಯಕ್ಕೆ ಮಳೆ ಬರದ ಹಿನ್ನೆಲೆಯಲ್ಲಿ ಬಿತ್ತನೆ ಸಾಧ್ಯವಾಗಿಲ್ಲ. ಬಿತ್ತನೆಗೆ ಪೂರಕವಾಗಿ ಕೃಷಿ ಇಲಾಖೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿದೆ. ಉತ್ತಮವಾಗಿ ಮಳೆಯಾದರೆ ಮುಂಗಾರು ಬಿತ್ತನೆಗೆ ಅನುಕೂಲವಾಗಲಿದೆ.

— -ಸಿ.ಎಸ್. ಈಶ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ.