ಐಮಂಗಲ ಸಮೀಪದ ಗದ್ದೆಕಡ್ಲು ಎಂಬಲ್ಲಿ ದೊರೆತಿರುವ ಐತಿಹಾಸಿಕ ಮಹತ್ವದ ನೊಳಂಬ ರಾಜ ದಂಪತಿ ಕೆತ್ತನೆಯ ಶಿಲ್ಪ. historical
- ಐಮಂಗಲ ಸಮೀಪದ ಗದ್ದೆಕಡ್ಲು ಬಳಿ ದೊರೆತ ಅಪರೂಪದ ಶಿಲೆ
- ಸುಮಾರು 10ನೇ ಶತಮಾನಕ್ಕೆ ಸೇರಿದ್ದೆಂದು ಅಂದಾಜು
ಐಮಂಗಲ: ಸಮೀಪದ ಗದ್ದೆಕಡ್ಲು ಬಳಿ ಐತಿಹಾಸಿಕ ಮಹತ್ವದ ನೊಳಂಬ ರಾಜ ದಂಪತಿಯ ಕೆತ್ತನೆಯ ಶಿಲ್ಪ ಪತ್ತೆಯಾಗಿದೆ. historical
ಡಾ. ಮಹೇಶ್ ಕುಂಚಿಗನಾಳು ಹಾಗೂ ವೈದ್ಯ ಡಾ. ಸಂತೋಷ್ ಕ್ಷೇತ್ರ ಅಧ್ಯಯನ ಮಾಡುವಾಗ ಈ ಶಿಲೆಗಳು ದೊರೆತಿವೆ. ಶಿಲ್ಪವು ಮೂರು ಅಡಿ ಎತ್ತರ, ಒಂದೂವರೆ ಅಡಿ ಅಗಲವಿದೆ. ಇದು ಕಪ್ಪು ಗ್ರಾನೈಟ್ ಶಿಲೆಯಾಗಿದೆ. ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಜಮೀನಿನಲ್ಲಿ ತಡೆಗೋಡೆ ನಿರ್ಮಿಸಲು ಭೂಮಿ ಅಗೆದಾಗ ಶಿಲ್ಪ ದೊರೆತಿದೆ.
ಶಿಲ್ಪದಲ್ಲಿ ಕೈಮುಗಿದು ಅಂಜಲಿ ಮುದ್ರೆಯಲ್ಲಿ ನಿಂತಿರುವ ರಾಜ ದಂಪತಿ ಕಾಣಬಹುದಾಗಿದೆ. ಶಿಲ್ಪ ಸರಳವಾಗಿದ್ದು. ಪುರುಷ ಸೊಂಟದಿಂದ ಮೊಣಕಾಲಿನ ವರೆಗೆ ಧೋತಿ ವಸ್ತ್ರ ಧರಿಸಿದ್ದಾನೆ. ಸೊಂಟದ ಭಾಗ ವಸ್ತ್ರವನ್ನು ಬಿಗಿದು ಕಟ್ಟಿರುವ ಕಟಿಬಂಧವಿದೆ. ಮೊಣಕೈ ಮೇಲೆ ಶಲ್ಯವಿದೆ. ಮಹಿಳೆ ಸೀರೆ, ಕರ್ಣಕುಂಡಲ, ಕಂಠಿಹಾರ, ತೋಳಬಂದಿ ಧರಿಸಿದಂತಿದೆ.
ಶಿಲೆಯ ಕಾಲ ಮತ್ತು ಇತಿಹಾಸ: ಶಿಲ್ಪದಲ್ಲಿ ಸ್ತ್ರೀ ತುರುಬು ಕಟ್ಟಿಕೊಂಡಂತಿದ್ದು, ದೇವಾಲಯದ ನಿರ್ಮಾತೃ ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 10ನೇ ಶತಮಾನಕ್ಕೆ ಸೇರಿದೆ ಎಂದು ಡಾ. ಸಂತೋಷ್ ಅಭಿಪ್ರಾಯಪಟ್ಟಿದ್ದಾರೆ.
ಶಿಲ್ಪದ ವಿನ್ಯಾಸ, ಶೈಲಿ, ಕಲ್ಲಿನ ಬಳಕೆ ಗಮನಿಸಿದಾಗ ಹಾಗೂ ನಂದಿ ಕೆತ್ತನೆಗಳಿಂದ ನೊಳಂಬ ಶೈಲಿಯಂತೆ ತೋರುತ್ತದೆ ಎಂದು ಡಾ. ಮಹೇಶ್ ಕುಂಚಿಗನಾಳು ತಿಳಿಸಿದ್ದಾರೆ. ಸಂಶೋಧಕರು ತಿಳಿಸಿರುವಂತೆ ಚಿತ್ರದುರ್ಗ ಜಿಲ್ಲೆಯ ಐಮಂಗಲ ನೊಳಂಬ ಪಲ್ಲವರ ಆಡಳಿತಕ್ಕೆ ಒಳಪಟ್ಟಿತ್ತು. ನೊಳಂಬರ ಹೆಸರಿ ನೊಂದಿಗೆ ಅತಿ ಸಾಮೀಪ್ಯತೆ ಹೊಂದಿರುವ ನೊಳಂಬಿಪಟ್ಟಣ ಶಿಲ್ಪ ದೊರೆತ ಜಾಗದಿಂದ ಅನತಿ ದೂರದಲ್ಲಿದೆ.
ಈ ಹಿಂದೆ ಸಮೀಪದಲ್ಲಿ ವೆಂಕಟೇಶ್ ಎಂಬುವರು ಬಸಿ ಕಾಲುವೆ ತೋಡುವಾಗ 2 ಬೃಹತ್ ನಂದಿಗಳು, ಬ್ರಾಹ್ಮಿ, ಮಾಹೇಶ್ವರಿ ಸಪ್ತಮಾತ್ರಿಕೆ ಶಿಲ್ಪಗಳು ಹಾಗೂ ಲಾಕುಳಯತಿಯ ಶಾಸನ ಸಹ ದೊರೆತಿದ್ದವು. ಇದನ್ನು ಡಾ. ಮಹೇಶ್ ಕುಂಚಿಗನಾಳು ಪ್ರಕಟಿಸಿದ್ದರು. ಈ ಭಾಗದಲ್ಲಿ ನೊಳಂಬ ದಿಲೀಪನ ಮಗ ನನ್ನಿ ನೊಳಂಬನ ಶಾಸನವನ್ನು ಬಿ.ಎಲ್. ರೈಸ್ 1903ರಲ್ಲಿ ಪ್ರಕಟಿಸಿದ್ದರು. ಇವುಗಳ ಸಾಲಿಗೆ ಈ ದಂಪತಿಗಳ ಶಿಲ್ಪವು ಸಹ ಸೇರುತ್ತದೆ.
ಗುರುತಿಸುವಿಕೆ: ನೊಳಂಬರ ರಾಜಲಾಂಛನ ನಂದಿ. ಈ ಶಿಲ್ಪದ ಮೇಲ್ಭಾಗದಲ್ಲಿ ನಂದಿಯ ಉಬ್ಬುಕೆತ್ತನೆ ಇರುವುದರಿಂದ ಇದು ನೊಳಂಬ ರಾಜದಂಪತಿಗೆ ಸೇರಲ್ಪಟ್ಟಿದ್ದೆಂದು ಸ್ಪಷ್ಟವಾಗಿ ಗುರುತಿಸಬಹುದು ಎಂದು ಮಹೇಶ್ ತಿಳಿಸಿದ್ದಾರೆ. ನೊಳಂಬರ ಮಗ ನನ್ನಿನೊಳಂಬ ಬ್ರಾಹ್ಮಣರಿಗೆ ದಾನನೀಡಿದ ವಿಷಯ ಶಾಸನದಲ್ಲಿದೆ. ಜತೆಗೆ ಇಲ್ಲಿ ನಂದಿಯ ಬೃಹತ್ ವಿಗ್ರಹಗಳು ಸಪ್ತಮಾತೃಕೆಯರ ಶಿಲ್ಪಗಳು ಇರುವುದರಿಂದ ಶಿವನ ದೇವಾಲಯವಾಗಿರಬಹುದು ಎಂದು ತಿಳಿಸಿದ್ದಾರೆ. ಶಿಲ್ಪಗಳು ಸಿಕ್ಕಿರುವ ಸ್ಥಳವನ್ನು ಪುರಾತತ್ವ ಇಲಾಖೆಯಿಂದ ಉತ್ಖನನ ನಡೆಸಿದಲ್ಲಿ ದೊಡ್ಡ ಶೈವ ದೇವಾಲಯದ ಸಂಕೀರ್ಣ ಅನಾವರಣಗೊಳ್ಳಲಿದೆ ಎಂದು ಸಂಶೋಧಕರಾದ ಡಾ. ಸಂತೋಷ್ ಹಾಗೂ ಡಾ. ಮಹೇಶ್ ಕುಂಚಿಗನಾಳು ತಿಳಿಸಿದ್ದಾರೆ.