ಹಿರಿಯೂರು ತಾಲೂಕಿನಲ್ಲಿ ನೀರಿಲ್ಲದೆ ಒಣಗಿದ ಕೆರೆಯ ದೃಶ್ಯ. lakes 
ಚಿತ್ರದುರ್ಗ

ಗ್ರಾಮೀಣ ಜಲಪಾತ್ರೆಗಳು ಖಾಲಿ ಖಾಲಿ lakes

ಸುರೇಶ್ ಕೆಎಸ್

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುತ್ತಿರುವ ನೀರಿನ ಸಮಸ್ಯೆ
  • ಹಿರಿಯೂರಿನಲ್ಲಿ ಮಳೆ ಮರೀಚಿಕೆ
  • ಎಲ್ಲಿ ನೋಡಿದರೂ ಬೋರ್‌ವೆಲ್‌ಗಳ ಸದ್ದು
ಬಸವರಾಜ್ ಖಂಡೇನಹಳ್ಳಿ ಹಿರಿಯೂರು
ತಾಲೂಕಿನಲ್ಲಿ ಮಳೆ ಮರೀಚಿಕೆಯಾಗಿದ್ದು, ಗ್ರಾಮೀಣ ಜನರ ಜೀವನಾಡಿಯಾಗಿರುವ ಕೆರೆಗಳು ನೀರಿಲ್ಲದೆ ಬತ್ತಿವೆ. ಜನ-ಜಾನುವಾರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. lakes
ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ನಂತರ ಅತಿ ಕಡಿಮೆ ಮಳೆ ಬೀಳುವ ಜೆ.ಜಿ. ಹಳ್ಳಿ, ಐಮಂಗಲ, ಧರ್ಮಪುರ ಹೋಬಳಿಯಲ್ಲಿ ಜೀವ ಜಲಕ್ಕಾಗಿ ಪರಿತಪಿಸುವಂತಾಗಿದೆ. ಇಲ್ಲಿ ವಾರ್ಷಿಕ ಸರಾಸರಿ 486 ಮಿ.ಮೀ ಮಳೆ ಬೀಳುವುದು ಅನಿಶ್ಚಿತವಾಗಿರುತ್ತದೆ. 100ವರ್ಷಗಳಲ್ಲಿ 70ವರ್ಷ ಬರಗಾಲ ಕಾಣಬಹುದು. ಈ ಭಾಗದಲ್ಲಿ ಕೆರೆಗಳು ತುಂಬಿದರೆ ಮಾತ್ರ ಅಂತರ್ಜಲ ವೃದ್ಧಿಯಾಗಿ ಕುಡಿವ ನೀರು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
ಮಳೆ ಕೊರತೆಯಿಂದ ಮೂರು (ಧರ್ಮಪುರ, ಐಮಂಗಲ, ಜೆ.ಜಿ.ಹಳ್ಳಿ) ಹೋಬಳಿ ವ್ಯಾಪ್ತಿಯಲ್ಲಿ ಅಂತರ್ಜಲ ಗಣನೀಯ ಕುಸಿತಗೊಂಡಿದೆ. ರೈತರು ಬೆಳೆ ಉಳಿಸಿಕೊಳ್ಳಲು ಕೊಳವೆ ಬಾವಿ ಅವಲಂಬಿಸಿದ್ದು, ತಾಲೂಕಿನಲ್ಲಿ ಅತಿ ಹೆಚ್ಚು ಕೊಳವೆ ಬಾವಿಗಳನ್ನು ಧರ್ಮಪುರ ಹೋಬಳಿಯಲ್ಲಿ ಕೊರೆಯಲಾಗಿದೆ. ಪ್ರಸಕ್ತ ವರ್ಷವೂ ಎಲ್ಲಿ ನೋಡಿದರೂ ಬೋರ್‌ವೆಲ್‌ಗಳ ಸದ್ದು, ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಲ ಪಾತ್ರೆಗಳು ಖಾಲಿ ಖಾಲಿ: ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ 38, (11ಕೆರೆ ತುಂಬಿವೆ) ಜಿಪಂ. ವ್ಯಾಪ್ತಿಯಲ್ಲಿ 15 ಕೆರೆಗಳಿವೆ. ಮಳೆ ಕೊರತೆಯಿಂದ ಬಹುತೇಕ ಕೆರೆಗಳು ಒಣಗಿವೆ. ಗ್ರಾಮೀಣ ಭಾಗದಲ್ಲಿ ಅಂತರ್ಜಲ ಗಣನೀಯ ಕುಸಿತಗೊಂಡಿದೆ. ತಾಲೂಕಿನ ವಿವಿಧೆಡೆ 800-1000ಅಡಿ ಕೊಳವೆ ಬಾವಿ ಕೊರೆದರೂ ನೀರು ಲಭ್ಯವಿಲ್ಲ. ಗ್ರಾಮೀಣ ಭಾಗದ ಜೀವಾಳವಾಗಿರುವ ಕೆರೆಗಳ ಉಳಿವಿಗೆ ಸರ್ಕಾರ-ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.
ಒತ್ತುವರಿ ತೆರವು ಸವಾಲು: ಬಯಲು ಸೀಮೆಯಲ್ಲಿ ಕೆರೆ, ಕಟ್ಟೆ, ಹಳ್ಳ, ಕೊಳ್ಳ, ಗೋ ಕಟ್ಟೆಗಳೇ ಜನರಿಗೆ ಜೀವಾಳ. ಆದರೆ ಗ್ರಾಮೀಣ ಭಾಗದ ಬಹುತೇಕ ಜಲಪಾತ್ರೆಗಳು ಒತ್ತುವರಿಯಾಗಿವೆ. ಕೆರೆಗಳ ಹಿನ್ನೀರು ಪ್ರದೇಶ ಒತ್ತುವರಿ ಮಾಡಿ ಸಾಗುವಳಿ ಮಾಡಲಾಗಿದೆ. ಹಳ್ಳ-ಕೊಳ್ಳಗಳ ಮೂಲಕ ಕೆರೆಗೆ ಹರಿವ ಗಂಗೆ ತನ್ನ ಅಸ್ತಿತ್ವಕ್ಕಾಗಿ ತಡಕಾಡುವಂತಾಗಿದೆ. ರಾಜಕೀಯ ಒತ್ತಡ, ಜಾತಿ ಇತರ ಕಾರಣಕ್ಕೆ ಒತ್ತುವರಿ ತೆರವು ಕಾರ್ಯಕ್ಕೆ ಹಿನ್ನಡೆಯಾಗಿದೆ.
ಕಸದ ರಾಶಿ: ಗ್ರಾಮೀಣ ಭಾಗದ ಜನರ ಜೀವಾಳವಾಗಿರುವ ಕೆರೆಗಳು ಇಂದು ಕಸದ ತೊಟ್ಟಿಗಳಾಗಿವೆ. ಗ್ರಾಮ ಪಂಚಾಯಿತಿಗಳು ಸಮರ್ಪಕ ಕಸ ವಿಲೇವಾರಿ ಮಾಡಲು ವಿಫಲವಾಗಿದ್ದು, ಗ್ರಾಮದಲ್ಲಿ ಸಂಗ್ರಹಿಸುವ ಕಸವನ್ನು ಕೆರೆಯಲ್ಲಿ ಸುರಿಯುತ್ತಿದ್ದು, ಪ್ಲಾಸ್ಟಿಕ್ ಇತರ ತ್ಯಾಜ್ಯದಿಂದ ಜಲಚರಗಳು ಅಪಾಯದಲ್ಲಿವೆ. ಜನರಲ್ಲಿ ಕೆರೆ ಸಂರಕ್ಷಣೆ, ಜಲ, ಪರಿಸರ ಜಾಗೃತಿ ಮೂಡಿಸಲು ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿರುವುದು ದುರಂತ.
ನೀರು ತುಂಬಿಸಲು ಒತ್ತಾಯ: ಜೀವನಾಡಿ ವಿವಿ ಸಾಗರ ಜಲಾಶಯ 2002-2025ರ ಅವಧಿಯಲ್ಲಿ ಸತತ 3ನೇ ಬಾರಿ ಭರ್ತಿಯಾಗಿದ್ದು, ವಿವಿಎಸ್ ಜಲಾಶಯದ ಎಡ-ಬಲ ನಾಲೆಗಳ ಮೂಲಕ ಅಚ್ಚುಕಟ್ಟು ಜಮೀನಿಗೆ ನೀರು ಹರಿಸಿದ ಸಂದರ್ಭದಲ್ಲಿ ಗುರುತ್ವಾಕರ್ಷಣೆ ಬಲದ ಮೇಲೆ ಕೆಲ ಕೆರೆಗಳಿಗೆ ನೀರು ಹರಿಸಲು ಅವಕಾಶವಿದೆ. (ರಂಗೇನಹಳ್ಳಿ, ಮಸ್ಕಲ್, ಬಿದರಕೆರೆ ಹಾಗೂ ಹಳ್ಳ, ಕೊಳ್ಳಗಳಿಗೆ ನೀರು ತುಂಬಿಸಬಹುದು) ಇದರಿಂದ ಅಂತರ್ಜಲ ವೃದ್ಧಿಯಾಗಿ ಕುಡಿವ ನೀರಿ, ಕೃಷಿಗೆ ಅನುಕೂಲವಾಗಲಿದೆ.
"

ಗ್ರಾಮೀಣ ಜಲ ಪಾತ್ರೆಗಳ ಸಂರಕ್ಷಣೆಗೆ ಕೆರೆ ಅಭಿವೃದ್ಧಿ ನೀರು ಬಳಕೆದಾರರ ಸಂಘ ರಚಿಸುವ ಸರ್ಕಾರದ ಆದೇಶ ಮೂಲೆಗುಂಪಾಗಿದೆ. ಇದರಿಂದ ಕೆರೆ ಅಭಿವೃದ್ಧಿ ನಿರ್ವಹಣೆಗೆ ಹಿನ್ನೆಡೆಯಾಗಿದೆ. ಕೆರೆಗಳನ್ನು ಪುನಶ್ಚೇತನಗೊಳಿಸಿದರೆ ಮಾತ್ರ ಅಂತರ್ಜಲ ವೃದ್ಧಿಯಾಗಿ, ಜನ-ಜಾನುವಾರುಗಳ ಕುಡಿವ ನೀರಿಗೆ ವರದಾನವಾಗಲಿದೆ.

— -ಕೆ.ಸಿ.ಹೊರಕೇರಪ್ಪ, ರೈತ ಮುಖಂಡ.

"

ಹಿರಿಯೂರು ತಾಲೂಕಿನಲ್ಲಿ ಎರಡು ಜಲಾಶಯ ಇದ್ದರೂ ನೀರಿಗೆ ಹಾಹಾಕಾರ ಇದೆ. ತಾಲೂಕಿನ ಜನರ ಸ್ಥಿತಿ ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ. ಸಮಗ್ರ ನೀರಾವರಿ ಯೋಜನೆ ಜಾರಿಯಾದರೆ ಮಾತ್ರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

— -ಕೆ.ಟಿ.ತಿಪ್ಪೇಸ್ವಾಮಿ. ಅಧ್ಯಕ್ಷ, ಜಿಲ್ಲಾ ರೈತ ಸಂಘ.