ಮಧುರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಭಗೀರಥ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಭಗೀರಥ ಶ್ರೀಗಳು, ಶಾಸಕ ಬಿ.ಜಿ. ಗೋವಿಂದಪ್ಪ, ಎಂಎಲ್ಸಿ ಕೆ.ಎಸ್.ನವೀನ ಇತರರಿದ್ದರು. Uppara
- ಪುರುಷೋತ್ತಮಾನಂದ ಪುರಿ ಶ್ರೀ ಹೇಳಿಕೆ
- ಮಧುರೆ ಗ್ರಾಮದಲ್ಲಿ ಭಗೀರಥ ಜಯಂತ್ಯುತ್ಸವ
ಹೊಸದುರ್ಗ: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಉಪ್ಪಾರ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಮೀಸಲಾತಿ ನೀಡಬೇಕಾಗಿದೆ ಎಂದು ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು. Uppara
ತಾಲೂಕಿನ ಮಧುರೆ ಗ್ರಾಮದಲ್ಲಿ ಭಾನುವಾರ ತಾಲೂಕು ಉಪ್ಪಾರ ಸಂಘ, ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸಗರ ನಿವೃತ್ತ ನೌಕರರ ಸಂಘ ಹಾಗೂ ಭಾಗೀರಥಿ ಮಹಿಳಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಭಗೀರಥ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವಗಂಗೆಯನ್ನು ಧರೆಗಿಳಿಸಿದ ಭಗೀರಥ ಮಹರ್ಷಿಗಳ ಪರಂಪರೆಗೆ ಸೇರಿದ, ಉಪ್ಪು ತಯಾರಿಕೆಯ ಮೂಲಕ ಸಮಾಜಕ್ಕೆ ರುಚಿ ನೀಡಿದ ಇತಿಹಾಸ ಹೊಂದಿರುವ ಉಪ್ಪಾರ ಸಮುದಾಯ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದೆ. ಸೂಕ್ತ ಮೀಸಲಾತಿ ಪಡೆಯಲು ಹಲವಾರು ದಾಖಲೆಗಳು, ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಆದರೆ ಮೀಸಲಾತಿ ಬೇಡಿಕೆ ಈಡೇರಿಲ್ಲ. ಎಲ್ಲ ಅರ್ಹತೆ ಹೊಂದಿರುವ ಉಪ್ಪಾರ ಸಮುದಾಯಕ್ಕೆ ಮೀಸಲಾತಿ ದೊರೆಯಬೇಕು ಎನ್ನುವುದು ಭಗೀರಥ ಗುರುಪೀಠದ ಒತ್ತಾಯವಾಗಿದೆ ಎಂದರು.
ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ನನಗೆ ರಾಜಕೀಯ ಶಕ್ತಿ ನೀಡಿರುವ ಉಪ್ಪಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಎಂಎಲ್ಸಿ ಕೆ.ಎಸ್.ನವೀನ ಮಾತನಾಡಿ, ಮಕ್ಕಳಿಗೆ ಭಗೀರಥರ ಸಾಧನೆ ಆದರ್ಶವಾಗಬೇಕು. ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಹಾಗೂ ಭಗೀರಥ ಗುರುಪೀಠದ ಅಭಿವೃದ್ಧಿಗೆ 10 ಲಕ್ಷ ರೂ. ಒದಗಿಸಲಾಗುವುದು ಎಂದು ಹೇಳಿದರು.
ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಭರಮಣ್ಣ ಉಪ್ಪಾರ ಮಾತನಾಡಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಪ್ಪಾರ ನಿಗಮದಿಂದ ಹಲವು ಸೌಲಭ್ಯಗಳಿವೆ ಎಂದರು.
ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಪಿ.ಕೆ. ಪರಪ್ಪ, ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿಕುಮಾರ್, ಭಾಗೀರಥಿ ಮಹಿಳಾ ಸಂಘದ ಅಧ್ಯಕ್ಷೆ ಭಾಗೀರಥಮ್ಮ, ಭಗೀರಥ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಎನ್ ಮಲ್ಲಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ಜಿ. ಪಂ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಕೆಪಿಸಿಸಿ ಸದಸ್ಯ ಎಂ.ಪಿ. ಶಂಕರ್, ಮುಖಂಡರಾದ ಡಿ.ಮಂಜುನಾಥ್, ದುಷ್ಯಂತ, ಶಿವಣ್ಣ ಇತರರಿದ್ದರು.