ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ಅಂಬಿನೋತ್ಸವದಲ್ಲಿ ಅಲಂಕೃತ ಉತ್ಸವ ಮೂರ್ತಿ. Ambinotsava
ಚಿತ್ರದುರ್ಗ

ಹೊಸದುರ್ಗದಲ್ಲಿ ರಂಗನಾಥಸ್ವಾಮಿ ಅಂಬಿನೋತ್ಸವ

ಉತ್ಸವಕ್ಕೆ ಸಾಯಾದ ಸಹಸ್ರಾರು ಭಕ್ತರು, ದೇವರ ಮೂರ್ತಿಗೆ ಆಭರಣಾಲಂಕಾರ

ಹೊಸದುರ್ಗ: ತಾಲೂಕಿನ ವಾಣಿವಿಲಾಸ ಸಾಗರದ ಹಿನ್ನಿರಿನಲ್ಲಿರುವ ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ದಸರಾ ಅಂಬಿನೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಅಂಬಿನೋತ್ಸವಕ್ಕೆ ಪೂರ್ವ ಭಾವಿಯಾಗಿ ಬುಧವಾರ ಅಂಚಿ ಬಾರಿಹಟ್ಟಿಯ ದೇವಾಲಯದಲ್ಲಿ ಶ್ರೀ ರಂಗನಾಥ ಸ್ವಾಮಿಗೆ ಗಂಗಾಸ್ನಾನ, ಕುದುರೆ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳು ನೆರವೇರಿದವು. ಗುರುವಾರ ಮುಂಜಾನೆ ಅಶ್ವಾರೂಢ ಉತ್ಸವ ಮೂರ್ತಿಯನ್ನು ಮೂಲ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಮಧ್ಯಾಹ್ನ ಅಂಬಿನೋತ್ಸವದ ಸಂಪ್ರದಾಯದಂತೆ ದೇವರ ಪೂಜಾರರು ಶಮೀವೃಕ್ಷಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಬಿಲ್ಲು ಬಾಣ ಹೂಡಿ ಬಾಳೆಕಂಬ ಕತ್ತರಿಸುವ ಮೂಲಕ ಅಂಬಿನೋತ್ಸವ ನೆರವೇರಿಸಲಾಯಿತು.

ಜಾತ್ರೆ ಆವರಣದಲ್ಲಿ ನಿರ್ಮಿಸಿದ್ದ ವಿಶೇಷ ವೇದಿಕೆಯಲ್ಲಿ ರಂಗನಾಥಸ್ವಾಮಿ ಹಾಗೂ ಪರಿವಾರದ ದೇವರುಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ವೇಳೆ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸರದಿ ಸಾಲಿನಲ್ಲಿ ಸಾವಿರಾರು ಭಕ್ತರು ಬೆಳ್ಳಿಯ ಹಾವು, ಚೇಳುಗಳನ್ನು ಸಮರ್ಪಿಸಿ ದೇವರ ದರ್ಶನ ಪಡೆದರು. ಶ್ರೀ ರಂಗನಾಥಸ್ವಾಮಿಯ ಮೂಲ ಶಿಲಾಮೂರ್ತಿಯನ್ನು ರತ್ನಖಚಿತ ಬಂಗಾರ ಮತ್ತು ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗಿತ್ತು.

ಮಧ್ಯ ಕರ್ನಾಟಕದ ಕಾಡುಗೊಲ್ಲ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹಾರನಕಣಿವೆಯ ರಂಗಯ್ಯ ಪವಾಡಪುರುಷ ಎನ್ನುವ ನಂಬಿಕೆ ಭಕ್ತರಲ್ಲಿದೆ. ಪ್ರತಿವರ್ಷ ಆಶ್ವಿಜ ಮಾಸದ ಶುದ್ಧ ಏಕಾದಶಿ ದಿನ (ವಿಜಯದಶಮಿಯ ನಂತರದ ದಿನ) ಅಂಬಿನೋತ್ಸವ ನೆರವೇರುತ್ತದೆ. ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು

ದೇವರನ್ನು ಪೂಜಿಸುವ ಪದ್ಧತಿಯಿದೆ. ಜಾತ್ರೆಗೆ ಮಧ್ಯ ಕರ್ನಾಟಕ ಮಾತ್ರವಲ್ಲದೆ ನೆರೆಯ ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳಿಂದ ಭಕ್ತರು ಬಂದಿದ್ದರು.

ಜಾತ್ರೆ ವಿಶೇಷ

ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವವಾಗಿದ್ದರೂ ಸರ್ವ ಧರ್ಮದ ಜನರೂ ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಇಲ್ಲಿ ಹರಕೆ ತೀರಿಸುವುದರಿಂದ ಸರ್ಪದೋಷ ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಕಾಡುಗೊಲ್ಲ ಸಮುದಾಯ ವಿಷಜಂತುಗಳಿಂದ ರಕ್ಷಣೆ ಕೋರಿ ಇಲ್ಲಿಗೆ ಬರುತ್ತಾರೆ.

ಚಿನ್ನ, ಬೆಳ್ಳಿಯ ಹಾವು-ಚೇಳು ಅರ್ಪಣೆ

ರಂಗನಾಥಸ್ವಾಮಿ ವಿಷಜಂತುಗಳ ನಿವಾರಕ ಎನ್ನುವ ನಂಬಿಕೆಯಿಂದ ಭಕ್ತರು ಜಾನುವಾರುಗಳನ್ನು ಹಾವು, ಚೇಳು ಮತ್ತಿತರ ವಿಷಜಂತುಗಳಿಂದ ರಕ್ಷಿಸುವಂತೆ ಪ್ರಾರ್ಥಿಸಿ ದೇವರಿಗೆ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಹಾವು, ಚೇಳುಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ದೇವಾಲಯದ ಮೇಲೆ ಹರಕೆಯ ಹಾವು, ಚೇಳು ತೂರಿದರು.