ಚಳ್ಳಕೆರೆ: ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಕಮ್ಮತ್ ಮರಿ ಕುಂಟೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಮಾರಾಟಗಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುವತ್ತಕ್ಕೂ ಹೆಚ್ಚು ಮಹಿಳೆಯರು ಮಂಗಳವಾರ ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದಲ್ಲಿ ಇನ್ನೂರು ಕುಟುಂಬ ಗಳಿದ್ದು, ಸುಮಾರು 10 ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದೆ. ಕೂಲಿ ಮಾಡಿ ಜೀವನ ನಡೆಸುವ ಕುಟುಂಬಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಗ್ರಾಮದಲ್ಲಿ ಸಂಜೆ ಹೊತ್ತಲ್ಲಿ ಮಹಿಳೆಯರು, ಮಕ್ಕಳು ಓಡಾಡುವುದು ಕಷ್ಟವಾಗಿದೆ. ಕೂಡಲೇ ಅಧಿಕಾರಿಗಳು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಅಬಕಾರಿ ಮತ್ತು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮದಲ್ಲಿ ಕುಡಿತದ ಪರಿಣಾಮವಾಗಿ ಮೂವರು ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟಿದ್ದಾರೆ. ಅಕ್ರಮ ಮದ್ಯ ಮಾರಾಟಗಾರರು ನಮ್ಮನ್ನು ಯಾರು ಏನೂ ಮಾಡಲಾಗದು ಎಂಬ ದೌರ್ಜನ್ಯದ ಮಾತುಗಳನ್ನಾಡುತ್ತಿದ್ದಾರೆ ಎಂದು ಗ್ರಾಮದ ಮನೋಹರ ಆರೋಪಿಸಿದರು. ಗ್ರಾಪಂ ಮಾಜಿ ಸದಸ್ಯೆ ಶ್ರುತಿ ಮನೋಹರ, ಟಿ. ರಾಮದಾಸ್, ತಿಪ್ಪಮ್ಮ, ಆರ್. ನಾಗವೇಣಿ, ಅನಿತಾ, ಲಲಿತಮ್ಮ, ಎಚ್. ಭಾರತಿ, ಲಕ್ಷ್ಮಕ್ಕ, ಮಂಜುಳಾ, ಮಾರಕ್ಕ, ಶಾಂತಮ್ಮ, ಆಶಾ, ಕೊಲ್ಲಮ್ಮ, ಆದಿಲಕ್ಷ್ಮೀ, ಗೌರಮ್ಮ, ಪ್ರಿಯಾಂಕ, ಸಾವಿತ್ರಮ್ಮ, ಸುಂದರಮ್ಮ, ಸುಮಿತ್ರಾ, ವಿ. ಸುವರ್ಣ, ವಿ. ತನುಜಾ ಇತರರಿದ್ದರು.
ಎರಡು ದಿನಗಳಲ್ಲಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಸಂಪೂರ್ಣ ನಿಲ್ಲಿಸಿ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.ಶಿವಪ್ಪ ಇನ್ಸ್ಪೆಕ್ಟರ್