ಹೊಸದುರ್ಗದಲ್ಲಿ ಶನಿವಾರ ಪೋಲಿಸ್ ಇಲಾಖೆ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು. ಪಿಎಸ್‌ಐ ಶ್ರೀಶೈಲ, ಸಿಬ್ಬಂದಿ ರಾಜು, ಪ್ರಸನ್ನ ಕುಮಾರ್ ಇದ್ದರು.road 
ಚಿತ್ರದುರ್ಗ

ರಸ್ತೆಯಲ್ಲಿ ಪರೀಕ್ಷೆ ಬರೆದ ಸಾರ್ವಜನಿಕರು road

ಧನಂಜಯ ಎಸ್.ಹಕಾರಿ.

ಪ್ರಮುಖ ಮುಖ್ಯಾಂಶಗಳು

  • ಪ್ರಶ್ನೆಗಳಿಗೆ ಉತ್ತರ ಬರೆದವರಿಗೆ ಹೆಲ್ಮೆಟ್ ಉಡುಗೊರೆ
  • ಹೊಸದುರ್ಗದಲ್ಲಿ ವಿನೂತನ ರಸ್ತೆ ಸುರಕ್ಷತಾ ಸಪ್ತಾಹ
  • ಸಾರ್ವಜನಿಕ ರಸ್ತೆಯ ನಡುವೆ ಹಾಕಿದ ಶಾಮಿಯಾನ
ಎಂ.ಯೋಗೀಶ ಹೊಸದುರ್ಗ
ಸಾರ್ವಜನಿಕ ರಸ್ತೆಯ ನಡುವೆ ಹಾಕಿದ ಶಾಮಿಯಾನದ ಅಡಿಯಲ್ಲಿ ಪಾಠ ಹಾಗೂ ಪರೀಕ್ಷೆ ನಡೆಯುತ್ತಿತ್ತು. ಪೊಲೀಸರು, ಶಿಕ್ಷಕರು ಹಾಗೂ ಪರೀಕ್ಷಾ ಮೇಲ್ವಿಚಾರಕರಾಗಿದ್ದರು. ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ಪರೀಕ್ಷಾರ್ಥಿಗಳಾಗಿದ್ದರು. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಸ್ಥಳದಲ್ಲಿಯೇ ಬಹುಮಾನ ಸಿಗುತ್ತಿತ್ತು. ದಾರಿಯ ಸಂಚಾರಿಗಳು ಕುತೂಹಲದಿಂದ ವೀಕ್ಷಿಸುತ್ತಿದ್ದರು.

ರಸ್ತೆ ಸುರಕ್ಷತೆ ಕುರಿತು ಜಾಗೃತಿ

ಮೇಲಿನ ಸನ್ನಿವೇಶ ಕಂಡು ಬಂದದ್ದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಹೊಸದುರ್ಗ ಪೊಲೀಸರು ನಡೆಸುತ್ತಿದ್ದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ. ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಸಲಾಯಿತು.
ಹೊಸದುರ್ಗ ಠಾಣೆಯ ಪೊಲೀಸ್ ನಿರೀಕ್ಷಕ ರಮೇಶ್ ಗೌಡ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನು ವಿನೂತನವಾಗಿ ಆಯೋಜಿಸುವ ಮೂಲಕ ಜನರಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ಇದರ ಭಾಗವಾಗಿ ಜನರಿಗೆ ವಾಹನ ಚಲಾವಣೆಯ ವೇಳೆ ಪಾಲಿಸಬೇಕಾದ ರಸ್ತೆ ನಿಯಮಗಳು, ಸೂಚನಾ ಫಲಕಗಳ ಕುರಿತು ತಿಳಿಸುವ ಕಾರ್ಯ ನಡೆಯಿತು. 

ಹೆಲ್ಮೆಟ್ ಪಡೆಯಲು ಪರೀಕ್ಷೆ ನಿಗದಿ:

ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರನ್ನು ಕೇಂದ್ರೀಕರಿಸಿ ಬಸವೇಶ್ವರ ವೃತ್ತದಲ್ಲಿ ಶಾಮಿಯಾನ ಹಾಕಿ ಪೆಂಡಾಲ್ ನಿರ್ಮಿಸಿ ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೆ ಉಚಿತವಾಗಿ ಹೆಲ್ಮೆಟ್ ನೀಡುವ ವಿನೂತನ ಕಾರ್ಯಕ್ರಮ ನಡೆಸಿಕೊಡಲಾಯಿತು. ಹೆಲ್ಮೆಟ್ ಪಡೆಯಲು ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ರಸ್ತೆ ನಿಯಮಗಳ ಕುರಿತು ಪ್ರಶ್ನೆಗಳನ್ನು ನೀಡಿ ಅವರಿಂದ ಉತ್ತರ ಬರೆಸಿ ಮೌಲ್ಯಮಾಪನ ಮಾಡಿ ಸರಿ ಉತ್ತರ ಬರೆದ ಪರೀಕ್ಷಾರ್ಥಿಗಳಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು. 
ಪ್ರತಿ ತಂಡದಲ್ಲಿ 15 ರಿಂದ 20 ಜನರಿಗೆ ಅವಕಾಶ ನೀಡಿ ಪರೀಕ್ಷೆ ಬರೆಸಲಾಯಿತು. ಸರಿ ಉತ್ತರ ಬರೆದ ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಹೆಲ್ಮೆಟ್ ನೀಡುವ ಮೂಲಕ ವಾಹನ ಚಲಾಯಿಸುವಾಗ ಜೀವ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಪರೀಕ್ಷೆಯಲ್ಲಿ ಪಾಲ್ಗೊಂಡು ರಸ್ತೆ ಸಂಚಾರಿ ನಿಯಮಗಳ ಕುರಿತು ಅಗತ್ಯ ಮಾಹಿತಿ ಪಡೆದರು. 
ಇನ್‌ಸ್ಪೆಕ್ಟರ್ ರಮೇಶ್ ಗೌಡ, ಪಿಎಸ್‌ಐ ಶ್ರೀಶೈಲ, ಪೊಲೀಸ್ ಸಿಬ್ಬಂದಿ ರಾಜು, ಪ್ರಸನ್ನ ಕುಮಾರ್ ಕಾರ್ಯಕ್ರಮದಲ್ಲಿ ವಾಹನ ಸವಾರರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಅರಿವು ಮೂಡಿಸಲಾಯಿತು. 
"

ಬೈಕ್ ಅಪಘಾತದಲ್ಲಿ ಶೇ.90ರಷ್ಟು ಸಾವುಗಳು ಹೆಲ್ಮೆಟ್ ಇಲ್ಲದ ಕಾರಣಕ್ಕೆ ಸಂಭವಿಸುತ್ತಿವೆ. ನಿಯಮ ಪಾಲನೆಯಿಂದ ಅಮೂಲ್ಯ ಜೀವ ರಕ್ಷಿಸುವ ಜತೆಗೆ ನಮ್ಮನ್ನು ನಂಬಿರುವ ಕುಟುಂಬದ ಸದಸ್ಯರಿಗೆ ರಕ್ಷಣೆ ಒದಗಿಸಬಹುದಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿನೂತನ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ಯೋಚಿಸಲಾಗಿದೆ.

— ರಮೇಶ್ ಗೌಡ, ಪೊಲೀಸ್ ನಿರೀಕ್ಷಕ, ಹೊಸದುರ್ಗ
"

ರಸ್ತೆ ನಿಯಮಗಳನ್ನು ಪಾಲಿಸುವುದು ಪ್ರತಿ ವಾಹನ ಸವಾರನ ಕರ್ತವ್ಯವಾಗಿದೆ. ಹೆಲ್ಮೆಟ್ ನೀಡುವ ಮೂಲಕ ಹೆಲ್ಮೆಟ್ ಧರಿಸುವುದರಿಂದ ಜೀವ ರಕ್ಷಿಸಬಹುದು ಎನ್ನುವ ಸಂದೇಶವನ್ನು ತಿಳಿಸಲಾಗಿದೆ. ಪರೀಕ್ಷೆಯ ಪ್ರಶ್ನೆಗಳು ಜನರಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರತಿದೆ.

— ಶ್ರೀಶೈಲ, ಪಿಎಸ್‌ಐ