ಬಿ.ಜಿ.ಕೆರೆ ಉಪ ಪೊಲೀಸ್ ಠಾಣೆಯಲ್ಲಿ ಅಳವಡಿಸಿರುವ ಮಾನಿಟರ್. CC CAMARA
ಚಿತ್ರದುರ್ಗ

ಅಪರಾಧ ತಡೆಗೆ ಸಾರ್ವಜನಿಕರ ಸಾಥ್: ಬಿ.ಜಿ. ಕೆರೆಯಲ್ಲಿ ಸ್ವಂತ ಖರ್ಚಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ CCTV cameras installed at B.G. Kere

ಗ್ರಾಮದ 4 ಭಾಗದಲ್ಲಿ ಸಿಸಿ ಕ್ಯಾಮೆರಾ

ಟಿ. ರಾಮಚಂದ್ರಪ್ಪ ಕೊಂಡ್ಲಹಳ್ಳಿ

ನಿರಂತರವಾಗಿ ನಡೆಯುತ್ತಿರುವ ಅಪಘಾತ, ಕಳವು, ಗಲಾಟೆ, ಕಿರುಕುಳ, ಹಲ್ಲೆ ಮುಂತಾದ ಅಪರಾಧ ಪ್ರಕರಣಗಳಿಂದ ಬೇಸತ್ತ ಬಿ.ಜಿ.ಕೆರೆ ಸಾರ್ವಜನಿಕರು ಬರೋಬ್ಬರಿ 72 ಸಾವಿರ ರೂ. ಸಂಗ್ರಹಿಸಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಗ್ರಾಮದ 4 ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. CCTV cameras

ಅಪರಾಧ ಸಂಬಂಧಿತ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಪ್ರಕರಣಗಳ ತಡೆಯುವ, ಪತ್ತೆ ಹಚ್ಚುವ ಪೊಲೀಸ್ ಇಲಾಖೆಗೆ ಸಾರ್ವಜನಿಕರೂ ಕೈಜೋಡಿಸಿದ್ದು, ಸದಾ ಜನಸಂಚಾರ ಹಾಗೂ ವಾಹನ ಸಂಚಾರದ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಬಿ.ಜಿ. ಕೆರೆಯ ಮೇಲ್ಸೇತುವೆ ಕೆಳಗೆ, ಚಳ್ಳಕೆರೆ ಹಾಗೂ ಬಳ್ಳಾರಿ ಕಡೆ ಸಂಚರಿಸುವ ಬಸ್ ನಿಲುಗಡೆಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಈ ಹಿಂದೆ ಮೊಳಕಾಲ್ಮೂರು ಪಿಎಸ್‌ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಸಿ ಕ್ಯಾಮೆರಾಗಳ ಪ್ರಾಮುಖ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಗ್ರಾಮಸ್ಥರು, ಆಟೋ ಚಾಲಕರು, ಜನಪ್ರತಿನಿಧಿಗಳು, ಅಂಗಡಿ ವ್ಯಾಪಾರಿಗಳು ಮುಂತಾದವರು ಹಣ ಜೋಡಿಸಿ ತಾವೇ ಕ್ಯಾಮೆರಾ ಖರೀದಿಸಿ ಮೂರು ತಿಂಗಳ ಹಿಂದೆ ಪೊಲೀಸ್ ಠಾಣೆಗೆ ನೀಡಿದ್ದಾರೆ. ಪ್ರಸ್ತುತ ಪೊಲೀಸ್ ಠಾಣೆಯಿಂದಲೇ ಅವುಗಳ ನಿರ್ವಹಣೆ ಮಾಡಲಾಗುತ್ತಿದೆ.

ಇತ್ತೀಚೆಗೆ ಸಿಸಿ ಕ್ಯಾಮೆರಾ, ಮೊಬೈಲ್ ಲೊಕೇಶನ್ ಅಪರಾಧಿಗಳ ಪತ್ತೆಗೆ ಪ್ರಮುಖ ಸಾಕ್ಷಿ ಒದಗಿಸಲು, ವ್ಯಕ್ತಿ ಹಾಗೂ ಚಲನವಲನಗಳಿಗೆ ಸಂಬಂಧಿಸಿದ ಪೂರಕ ದಾಖಲೆ ಒದಗಿಸಲು ನೆರವಾಗುತ್ತಿದ್ದು, ಕಳೆದ ಮೂರು ತಿಂಗಳಿಂದ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿವೆ ಎನ್ನುತ್ತಾರೆ ಸ್ಥಳೀಯರು.

ಇಲಾಖೆಯ ಸಮುದಾಯ ಸಹಭಾಗಿತ್ವ ಕಾರ್ಯಕ್ರಮದ ಅನ್ವಯ ಸಾರ್ವಜನಿಕ ಸಭೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಹತ್ವ ತಿಳಿಸಲಾಗುತ್ತಿದೆ. ಇದರಿಂದ ಪ್ರೇರಿತರಾಗಿ ಬಿ.ಜಿ. ಕೆರೆಯ ಸ್ಥಳೀಯರು 72 ಸಾವಿರ ರೂ. ಸಂಗ್ರಹಿಸಿ ಸಿಸಿ ಟಿವಿ ಕ್ಯಾಮೆರಾ ನೀಡಿದ್ದಾರೆ. ಇದರಿಂದ ಅಪರಾಧ, ಕಳವು ನಿಯಂತ್ರಣವಾಗುತ್ತಿದೆ.
ಮಹೇಶ್ ಲಕ್ಷ್ಮಣ್ ಹೊಸಪೇಟೆ, ಪಿಎಸ್‌ಐ, ಮೊಳಕಾಲ್ಮೂರು