ಬಲ ನಾಲೆ ನೀರನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ಮಾಡಿದರು. Protest
ಚಿತ್ರದುರ್ಗ

ಹರಿಯುವ ನಾಲೆ ನೀರಿಗೆ ತಡೆ ಖಂಡಿಸಿ ಪ್ರತಿಭಟನಾ ರ್ಯಾಲಿ

ಶಿಡ್ಲಯ್ಯನಕೋಟೆ ಗ್ರಾಮಸ್ಥರ ವಿರುದ್ಧ ಹೋರಾಟ, ತಕ್ಷಣ ಕ್ರಮಕೈಗೊಳ್ಳದಿದ್ದರೆ ಬೆಂಗಳೂರು ಚಲೋ ಎಚ್ಚರಿಕೆ

ಪರಶುರಾಮಪುರ: ಬಲದಂಡೆ ನಾಲೆ ಮುಖಾಂತರ ಪರಶುರಾಮಪುರದ ಎರಡೂ ಕೆರಕೆಗಳಿಗೆ ಹರಿಯುವ ನೀರಿಗೆ ಶಿಡ್ಲಯ್ಯನಕೋಟೆ ಗ್ರಾಮದ ಕೆಲವರು ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿ ಗ್ರಾಮದ ಪೊಲೀಸ್ ಠಾಣೆ ಎದುರು ಶುಕ್ರವಾರ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಯಿತು. ಹರಿಯುವ ನೀರಿಗೆ ವಿನಾಕಾರಣ ತಡೆಯೊಡ್ಡುವ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ ಮಾತನಾಡಿ, ನಾಲೆಯಲ್ಲಿ ಬರುವ ನೀರಿಗೆ ಅಡ್ಡಲಾಗಿ ಕಲ್ಲುಗುಂಡು, ಫೈಬರ್ ಶೀಟ್ ಅಡ್ಡಹಾಕಿ ಟಿಎನ್‌ಕೋಟೆ ಗ್ರಾಮದ ಕೆರೆಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಇದನ್ನು ಪೊಲೀಸರು ತಡೆಯದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೋಸಿಕೆರೆ, ಚೌಳೂರು ಮತ್ತು ಪರಶುರಾಮಪುರ ಕೆರೆಗೆ ನಾಲೆಯ ನೀರು ಹರಿಯುವುದಿಲ್ಲ. ಇದರಿಂದ ಕುಡಿವ ನೀರಿಲ್ಲದೇ ಅಂತರ್ಜಲ ಕುಸಿದಿದೆ. ಈ ವಿಷಯವನ್ನು ಸಚಿವ ಟಿ. ರಘುಮೂರ್ತಿ, ನೀರಾವರಿ ಇಲಾಖೆ, ಪೊಲೀಸ್ ಇಲಾಖೆ, ತಾಲೂಕು ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಸಂಘದ ಪದಾಧಿಕಾರಿ ಕೃಷ್ಣಪ್ಪ ಮಾತನಾಡಿ, ಹರಿಯುವ ನೀರಿಗೆ ಅಡ್ಡಿಪಡಿಸುವುವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ನೀಡಿದರೂ ಕ್ರಮವಾಗಿಲ್ಲ. ಈ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬೈಪಾಸ್‌ನ ರೈತ ಭವನದಿಂದ ಆರಂಭವಾದ ರ್ಯಾಲಿ ಮುಖ್ಯವೃತ್ತದ ಬಳಿಗೆ ಆಗಮಿಸಿತು ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ್ದ ಘೋಷಣೆ ಕೂಗಿದರು. ನಂತರ ಪೊಲೀಸ್ ಠಾಣೆ ಎದುರು ಅಡುಗೆ ತಯಾರಿಸಿ ಎಲ್ಲರಿಗೂ ಉಣಬಡಿಸಿದರು.

ಜಿಲ್ಲಾಧ್ಯಕ್ಷ ಎಂ.ಜಿ.ಕೆಂಚಪ್ಪ, ತಾಲೂಕು ಅಧ್ಯಕ್ಷ ಕೆ. ಚಿಕ್ಕಣ್ಣ, ಶಾಂತಣ್ಣ, ಜಂಪಣ್ಣ, ಎಚ್. ಪ್ರಕಾಶ, ಹನುಮಂತರಾಯ, ಖಾದರ್ ಭಾಷಾ, ನಾಗೇಂದ್ರಪ್ಪ, ನರಸಿಂಹಮೂರ್ತಿ, ಶಂಕ್ರಪ್ಪ, ಲಕ್ಷ್ಮೀದೇವಿ, ಎಂ. ಜಯಮ್ಮ, ನಿಂಗಮ್ಮ, ರತ್ನಮ್ಮ, ಚೌಳೂರು, ಗೋಸಿಕೆರೆ, ಕ್ಯಾದಿಗುಂಟೆ, ಕಡೇಹುಡೆ ಸುತ್ತಲಿನ ರೈತರು, ಗ್ರಾಮಸ್ಥರು ಇದ್ದರು.

ನೀರು ಸಮಾನ ಹಂಚಿಕೆಯಾಗಲಿ

ಚೌಳೂರು ಚೆಕ್‌ಡ್ಯಾಂನಲ್ಲಿ ಪಂಪ್‌ಹೌಸ್ ನಿರ್ಮಿಸಿ ಪೈಪ್‌ಗಳ ಮುಖಾಂತರ ಚೌಳೂರು, ಪರಶುರಾಮಪುರದ ಕೆರೆಗಳಿಗೆ ನೀರು ಹರಿಸಬೇಕು. ಟಿಎನ್‌ಕೋಟೆ ಗ್ರಾಮ ಬಳಿ ಬಲನಾಲೆ ಮೂಲಕ ಬರುವ ನೀರನ್ನು ತಡೆಗಟ್ಟುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರದ ನಿರ್ದೇಶನದಂತೆ ನಾಲೆಯ ನೀರನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಸಂಘದ ಗ್ರಾಮ ಘಟಕದ ಅಧ್ಯಕ್ಷ ನವೀನ್‌ಗೌಡ ಒತ್ತಾಯಿಸಿದರು.

ನೀರಿನ ಸಮಸ್ಯೆಗೆ ಕೂಡಲೇ ಪರಿಹಾರ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸುವ ಜತೆಗೆ ಬೆಂಗಳೂರು ಚಲೋ ಸಹ ಕೈಗೊಳ್ಳುತ್ತೇವೆ.
ಚೌಳೂರು ಪ್ರಕಾಶ , ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ