ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಅವರಿಗೆ ಭದ್ರಾ ಜಲ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಚ್. ಬಿಲ್ಲಪ್ಪ, ಡಾ. ರಾಘವೇಂದ್ರ ಪ್ರಸಾದ್, ಎಲ್. ಜಯಪ್ಪ, ಡಾ. ನಧಾಪ್, ಎಂ.ಆರ್. ಶಾಂತಪ್ಪ ಇತರರಿದ್ದರು. Award
ಚಿತ್ರದುರ್ಗ

ಕುಡಿವ ನೀರಿನ ಬೇಡಿಕೆ ಅಂದಾಜಿಸಿ ಯೋಜನೆ

ಶಾಸಕ ಬಿ.ಜಿ. ಗೋವಿಂದಪ್ಪ ಮಾಹಿತಿ

ಹೊಸದುರ್ಗ: ತಾಲೂಕಿನ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 600 ಕೋಟಿ ರೂ. ವೆಚ್ಚದಲ್ಲಿ ಭದ್ರಾ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ನೀರು ಹರಿಸುವ ಕಾಮಗಾರಿ ನಡೆಸಲಾಗುತ್ತಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.

ಪಟ್ಟಣದ ಟೌನ್‌ಕ್ಲಬ್‌ನಲ್ಲಿ ಭಾನುವಾರ ಸಮಾನ ಮನಸ್ಕ ಮಿತ್ರ ಮಂಡಳಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಜನರ ಕೃಷಿ ಕಾರ್ಯಕ್ಕೆ ಹಾಗೂ ನಿತ್ಯ ಜೀವನದ ಬಳಕೆಗಾಗಿ ನೀರು ಒದಗಿಸುವುದು ನನ್ನ ರಾಜಕೀಯ ಬದ್ಧತೆಯಾಗಿದೆ. ಅದರಂತೆ ಕೃಷಿ ಜಮೀನಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಹಾಗೂ ಕುಡಿಯುವ ನೀರಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ತಾಲೂಕಿಗೆ ನೀರು ತರಲಾಗುತ್ತಿದೆ. ಮುಂದಿನ 50 ವರ್ಷಗಳ ನೀರಿನ ಬೇಡಿಕೆ ಅಂದಾಜು ಮಾಡಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಆರೋಗ್ಯ ಇಲಾಖೆ ಸಿಬ್ಬಂದಿ ಸರ್ಕಾರಿ ಕರ್ತವ್ಯದ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಮಾನ ಮನಸ್ಕ ಮಿತ್ರ ಮಂಡಳಿ ಸ್ಥಾಪಿಸಿರುವುದು ಮಾದರಿ ಕಾರ್ಯ. ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ವೇದಿಕೆಗೆ ಸೀಮಿತವಾಗದೆ ಪ್ರತಿಯೊಬ್ಬರೂ ನಾಡು ನುಡಿ ಬೆಳವಣಿಗೆಗೆ ಸಹಕಾರ ನೀಡಬೇಕು. ಮನೆ ಮನಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಪ್ರಸಾದ್ ಮಾತನಾಡಿ, ಮಾನವನ ಬದುಕಿನಲ್ಲಿ ಕರ್ತವ್ಯಕ್ಕೆ ನೀಡಿದ ಮಹತ್ವವನ್ನು ಮನರಂಜನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ನೀಡಬೇಕು. ಈ ಹಿನ್ನೆಲೆಯಲ್ಲಿ ಜಾತಿ, ಧರ್ಮ, ಅಂತಸ್ತು ಸೇರಿದಂತೆ ಯಾವುದೇ ಬೇಲಿಯಿಲ್ಲದೆ ಎಲ್ಲರನ್ನೂ ಪ್ರೀತಿಸುವ, ಸಮಾಜಮುಖಿ ಚಿಂತನೆಯ ಮನಸ್ಸುಗಳು ಒಂದಾಗಿ ಸಮಾನ ಮನಸ್ಕ ಮಿತ್ರ ಮಂಡಳಿ ರಚನೆಯಾಗಿದೆ. ಕನ್ನಡ ನೆಲ ಜಲ ಭಾಷೆಯ ರಕ್ಷಣೆ, ರಾಜ್ಯೋತ್ಸವದ ಆಚರಣೆಯ ಜತೆಗೆ ಸಾಮಾಜಿಕ ಚಿಂತನೆಯ ರಚನಾತ್ಮಕ ಕಾರ್ಯಗಳು ಸಂಸ್ಥೆಯ ಬದ್ಧತೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ಭದ್ರಾ ಜಲ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ಬಿಇಒ ಎಲ್. ಜಯಪ್ಪ, ಜಿಲ್ಲಾ ಆಯುಷ್ ಅಧಿಕಾರಿ ಡಾ. ನಧಾಪ್, ಕಸಾಪ ತಾಲೂಕಾಧ್ಯಕ್ಷ ಎಂ.ಆರ್. ಶಾಂತಪ್ಪ, ಎಂ.ಆರ್.ಸಿ. ಮೂರ್ತಿ, ಡಾ. ಸುದರ್ಶನ ಪಾಟೀಲ್, ಜಾನಕಿ ಇತರರಿದ್ದರು.

ಶಾಸಕರಿಗೆ ಭದ್ರಾ ಜಲ ಸೇವಾ ರತ್ನ ಪ್ರಶಸ್ತಿ

ಸಂಸ್ಥೆಯ ಅಧ್ಯಕ್ಷ ವಿರೇಂದ್ರ ಪಾಟೀಲ್ ಮಾತನಾಡಿ, ಸಮಾನ ಮನಸ್ಕ ಮಿತ್ರ ಮಂಡಳಿ ವತಿಯಿಂದ 2ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ನಡೆಸಲಾಗುತ್ತಿದೆ. ಪ್ರತಿ ವರ್ಷ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಈ ವರ್ಷ ಬರದ ನಾಡಿಗೆ ಭದ್ರೆಯನ್ನು ಹರಿಸಲು ಭಗೀರಥ ಪ್ರಯತ್ನ ನಡೆಸಿದ ಶಾಸಕ ಬಿ.ಜಿ. ಗೋವಿಂದಪ್ಪ ಅವರಿಗೆ ತಾಲೂಕಿನ ಜನರ ಪರವಾಗಿ ಭದ್ರಾ ಜಲ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.