Pillow Lavas ಐಮಂಗಲ ಹೋಬಳಿಯ ಮರಡಿಹಳ್ಳಿಯ ಪಿಲ್ಲೋಲಾವ ಅಧ್ಯಯನಕ್ಕೆ ಪ್ರೊ. ಆರ್. ಶಂಕರ್, ಪ್ರೊ. ಪ್ರಭಾಕರ್ ಹಾಗೂ ಡಾ. ಸಂತೋಷ್ ಭೇಟಿ ನೀಡಿ ಪರಿಶೀಲಿಸಿದರು. 
ಚಿತ್ರದುರ್ಗ

ಅಪರೂಪದ ಶಿಲೆಗಳ ಸಂರಕ್ಷಣೆ ಬಹುಮುಖ್ಯ Pillow Lavas

ಪ್ರಮುಖ ಮುಖ್ಯಾಂಶಗಳು

  • ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್. ಶಂಕರ್ ಹೇಳಿಕೆ
  • ಮರಡಿಹಳ್ಳಿ ಪಿಲ್ಲೋಲಾವಗಳ (Pillow Lavas) ಪರಿಶೀಲನೆ
  • ರಕ್ಷಣೆಗೆ ಸರ್ಕಾರದ ಕ್ರಮ ಅಗತ್ಯ

ಐಮಂಗಲ:"ಶಿಲೆಗಳೆಂದರೆ ಅವು ಕೇವಲ ಬಂಡೆಗಳಲ್ಲ. ಹಲವು ಕಡೆ ಶಿಲಾ ಪದರಗಳು ತಮ್ಮ ಒಡಲಲ್ಲಿ ಇತಿಹಾಸವನ್ನು ಅಡಗಿಸಿಕೊಂಡಿದ್ದು, ಇತಿಹಾಸದ ಮಾಹಿತಿ ಹಾಗೂ ಅವುಗಳ ಸಂರಕ್ಷಣೆ ಬಹುಮುಖ್ಯ," ಎಂದು ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್. ಶಂಕರ್ ಹೇಳಿದರು.

ಐಮಂಗಲ ಹೋಬಳಿಯ ಮರಡಿಹಳ್ಳಿ ಗ್ರಾಮದಲ್ಲಿ ಪಿಲ್ಲೋಲಾವ (ಶಿಲಾ ಪದರಗಳು)ಗಳ ಅಧ್ಯಯನಕ್ಕಾಗಿ ಶನಿವಾರ ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಪ್ರಭಾಕರ್ ಹಾಗೂ ಜಿಯಾಲಜಿ ಪ್ರಾಧ್ಯಾಪಕ ಡಾ. ಸಂತೋಷ್ ಅವರೊಂದಿಗೆ ಭೇಟಿ ನೀಡಿ, ಪರಿಶೀಲಿಸಿ ಅವರು ಮಾತನಾಡಿದರು.

ಅಪರೂಪದ ಶಿಲಾ ಪದರಗಳು

"ಅಪರೂಪದ ಶಿಲಾ ಪದರಗಳು ಬೆಂಗಳೂರಿನ ಲಾಲ್‌ಬಾಗ್, ಉಡುಪಿ ಸಮೀಪದ ಸೇಂಟ್ ಮೇರಿ ದ್ವೀಪ, ಕೋಲಾರದ ಸಮೀಪದ ಪೆದ್ದಪಲ್ಲಿ ಹಾಗೂ ಮರಡಿಹಳ್ಳಿಯಲ್ಲಿ ಕಾಣಬಹುದಾಗಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (Geological Survey of India) ಇದರ ರಕ್ಷಣೆಯ ಜವಾಬ್ದಾರಿ ಹೊತ್ತಿದೆ," ಎಂದರು.

ಜಾಗೃತಿ ಮತ್ತು ಸರ್ಕಾರದ ಕ್ರಮ ಅಗತ್ಯ

"ಗ್ರಾಮೀಣ ಭಾಗದ ಜನರಿಗೆ ಇದರ ಮಹತ್ವದ ಅರಿವಿಲ್ಲದೆ ಹಾಳು ಮಾಡುತ್ತಿದ್ದಾರೆ. ಅವುಗಳ ಉಳಿವಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ನೀಡಲಾಗುವುದು. ಜೊತೆಗೆ ಆಯಾ ಸ್ಥಳದ ಜನರೊಂದಿಗೆ ಚರ್ಚಿಸಿ ಶಿಲಾಪದರದ ಮಹತ್ವ, ಅವುಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಸ್ಥಳೀಯ ಜನರ ಸಹಕಾರ ಇಲ್ಲದ ಹೊರತು ರಕ್ಷಣೆ ಅಸಾಧ್ಯ. ಮುಂದಿನ ಪೀಳಿಗೆಗೆ ಇವುಗಳನ್ನು ಉಳಿಸಿಕೊಡಬೇಕು," ಎಂದು ಅವರು ತಿಳಿಸಿದರು.

ಮೂಲ ಸೌಕರ್ಯಕ್ಕೆ ಆಗ್ರಹ

"ಪಿಲ್ಲೋಲಾವ ವೀಕ್ಷಣೆಗೆ ರಾಜ್ಯ, ದೇಶ, ವಿದೇಶಗಳಿಂದ ಜನರು ಬರುತ್ತಾರೆ. ಆದರೆ ಇಲ್ಲಿ ಸೌಕರ್ಯಗಳ ಕೊರತೆ ಇದೆ. ಸರ್ಕಾರ ಇಲ್ಲಿಗೆ ರಸ್ತೆ, ನೀರು, ಮೂಲ ಸೌಕರ್ಯ ಒದಗಿಸಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು," ಎಂದು ಕೆ. ಟಿ. ಶ್ರೀಧರ್, ಸಂಜಯ್, ಆರ್. ವೆಂಕಟೇಶ್ ರೆಡ್ಡಿ, ನಾಗರಾಜ್, ಸಂದೀಪ್, ಮಂಜುನಾಥ್ ಇತರರು ಒತ್ತಾಯಿಸಿದರು.