ರೈತರ ತೋಟದ ಮನೆಗಳ ವಿದ್ಯುತ್​ ಕಡಿತ ವಿರೋಧಿಸಿ ರೈತಸಂಘದ ಪದಾಧಿಕಾರಿಗಳು ಬಿ.ಜಿ.ಕೆರೆ ಬೆಸ್ಕಾಂ ಕಚೇರಿ ಎಇಇ ಮಮತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬೇಡರಡ್ಡಿಹಳ್ಳಿ ಬಸವರಡ್ಡಿ, ಸೂರಮ್ಮನಹಳ್ಳಿ ರಾಜಣ್ಣ, ತಿಪ್ಪೇಸ್ವಾಮಿ ಇತರರಿದ್ದರು. Protest
ಚಿತ್ರದುರ್ಗ

ರಾತ್ರಿ ವಿದ್ಯುತ್​ ಕಡಿತಕ್ಕೆ ಆಕ್ರೋಶ

ಬಿಜಿ ಕೆರೆ ಬೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ

ಮೊಳಕಾಲ್ಮೂರು: ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತು ವಿದ್ಯುತ್​ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತಸಂದ ಪದಾಧಿಕಾರಿಗಳು ಬಿ.ಜಿ.ಕೆರೆ ಬೆಸ್ಕಾಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಮಾತನಾಡಿ, ಬರದಿಂದ ಅಂತರ್ಜಲ ಪಾತಾಳ ಕಂಡಿದೆ. ಕೊಳವೆಬಾವಿಗಳಲ್ಲಿ ಲಭ್ಯವಿರುವ ಅಲ್ಪ ನೀರಿನಲ್ಲಿ ಬೆಳೆ ಇಟ್ಟು ರೈತರು ತೋಟದ ಮನೆಗಳಲ್ಲಿ ಕುಟುಂಬ ಸಮೇತ ಜೀವನ ಸಾಗಿಸುತ್ತಿದ್ದಾರೆ. ಇಲಾಖೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ರಾತ್ರಿ 6 ರಿಂದ ಬೆಳಗ್ಗೆ 6 ರವರೆಗೆ ವಿದ್ಯುತ್​ ಕಡಿತ ಮಾಡುತ್ತಿರುವ ಕಾರಣ ಕಾಡುಪ್ರಾಣಿಗಳು, ವಿಷ ಜಂತುಗಳ ಉಪಟಳದ ನಡುವೆ ಜೀವಭಯದಲ್ಲಿ ಬದುಕುವಂತಾಗಿದೆ. ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗಿದೆ. ರೈತರ ಜೀವನದ ಜತೆ ಚಲ್ಲಾಟ ಆಡುವುದನ್ನು ಬಿಟ್ಟು ರಾತ್ರಿಪೂರ್ತಿ ಸಮರ್ಪಕ ವಿದ್ಯುತ್​ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ತಾಲೂಕು ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ ಮಾತನಾಡಿ, ಸರ್ಕಾರಿ ನೌಕರಿ ಸಿಕ್ಕ ನಂತರ ಅಧಿಕಾರಿಗಳು ತಾವು ರೈತರ ಮಕ್ಕಳು ಎನ್ನುವುದನ್ನು ಮರೆತು ದರ್ಪದಿಂದ ವರ್ತಿಸುತ್ತಿದ್ದಾರೆ. ಜಮೀನಿನಲ್ಲಿ ಒಂದು ರಾತ್ರಿ ಕಳೆದರೆ ರೈತರ ಕಷ್ಟ ಏನೆಂದು ಗೊತ್ತಾಗುತ್ತದೆ. ದೇಶಕ್ಕೆ ಅನ್ನ ಕೊಡುವ ರೈತರನ್ನು ತಾತ್ಸಾರದಿಂದ ನೋಡುವುದು ಸರಿಯಲ್ಲ. ಇಲಾಖೆ ಮಾನದಂಡಗಳನ್ನು ಬದಿಗೊತ್ತಿ ಸಮರ್ಪಕವಾಗಿ ವಿದ್ಯುತ್​ ವಿತರಣೆಗೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಕಚೇರಿ ಮುಂದೆ ನಿರಶನ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ಬಿ.ಟಿ. ಈಶ್ವರಪ್ಪ, ವೀರಣ್ಣ, ಪ್ರಶಾಂತರಡ್ಡಿ, ಓಬಣ್ಣ, ತಿಪ್ಪೇರುದ್ರಪ್ಪ, ಬಸವರಾಜ, ಪರಮೇಶ್ವರಪ್ಪ, ನಾಗಣ್ಣ, ದಾಸಪ್ಪ, ಚನ್ನವಿರಣ್ಣ, ವೆಂಕಟೇಶ, ಪಾಂಡಪ್ಪ, ವೀರಭದ್ರಪ್ಪ, ರಾಮಚಂದ್ರ ರಡ್ಡಿ, ಅಶೋಕ, ಶಾಂತಣ್ಣ, ಎಂ. ಚಾಮರಾಜ, ಹನುಮಂತರಡ್ಡಿ, ವೀರೇಶ ಇತರರು ಇದ್ದರು.