crop insurance:ಬೆಳೆ ವಿಮೆ ಮತ್ತು ಪರಿಹಾರಕ್ಕೆ ಒತ್ತಾಯಿಸಿ ಚಳ್ಳಕೆರೆ ತಾಲೂಕು ಕಚೇರಿ ಮುಂದೆ ಮಂಗಳವಾರ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. 
ಚಿತ್ರದುರ್ಗ

crop insurance: ಬೆಳೆ ವಿಮೆ ಪರಿಹಾರ ವಿತರಣೆ ವಿಳಂಬಕ್ಕೆ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘದಿಂದ ಪ್ರತಿಭಟನೆ
  • ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ
  • ಮಳೆ ಕೊರತೆಯಿಂದ ಬೆಳೆ ನಷ್ಟ
ಚಳ್ಳಕೆರೆ: ಬೆಳೆ ವಿಮೆ ಮತ್ತು ಪರಿಹಾರಕ್ಕೆ ಒತ್ತಾಯಿಸಿ ಚಳ್ಳಕೆರೆ ತಾಲೂಕು ಕಚೇರಿ ಮುಂದೆ ಮಂಗಳವಾರ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಬಯಲುಸೀಮೆಯಲ್ಲಿ ಮಳೆ ಕೊರತೆಯಿಂದ ಮುಂಗಾರಿನ ಶೇಂಗಾ, ತೊಗರಿ ಬೆಳೆಗಳು ಸಂಪೂರ್ಣ ನಷ್ಟವಾಗಿವೆ. ಮಧ್ಯಂತರ ಬೆಳೆ ವಿಮೆಗಾಗಿ ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನಗಳು ಮೀಸಲಾತಿಯಂತೆ ಹಂಚಿಕೆಯಾಗುತ್ತಿಲ್ಲ. ಜಾತಿ, ಹಣ, ಗುಂಪುಗಾರಿಕೆ ಬಲದಿಂದ ಅಧಿಕಾರ ಪಡೆದುಕೊಳ್ಳಲಾಗುತ್ತಿದೆ. ಇಂಥವರಿಗೆ ಸಾಮಾನ್ಯ ಜನರ ಕಷ್ಟ ಮತ್ತು ಸಾಮಾಜಿಕ ಪರಿಸ್ಥಿತಿಗಳಿಗೆ ಪರಿಹಾರ ದೊರಕಿಸಿಕೊಡುವ ಮನಸ್ಸಿರುವುದಿಲ್ಲ. ಸಂವಿಧಾನಿಕ ಹುದ್ದೆಗಳನ್ನು ಮೀಸಲಾತಿಗೆ ಒಳಪಡಿಸಬೇಕು. ಪಿಎಂ, ಸಿಎಂ ಸ್ಥಾನಗಳು ಮೀಸಲಾತಿಯಂತೆ ಹಂಚಿಕೆ ಆಗಬೇಕು ಎಂದರು.

ರೈತರು ಸಂಕಷ್ಟದಲ್ಲಿ

ರಾಜ್ಯದ ಕೆಲವೆಡೆ ಅತಿವೃಷ್ಟಿಯಿಂದ, ಕೆಲವೆಡೆ ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ಕುರ್ಚಿ ಕಲಹದಲ್ಲೇ ಕಾಲ ಹರಣ ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಕೂಡಲೇ ಮಧ್ಯಂತರ ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗೆ ಸಮೀಕ್ಷಾ ವರದಿ

ಮನವಿ ಸ್ವೀಕರಿಸಿದ ತಹಸೀಲ್ದಾರ್ ರೇಹಾನ್ ಪಾಷ ಮಾತನಾಡಿ, ಬೆಳೆ ನಷ್ಟದ ಸಮೀಕ್ಷಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಎಷ್ಟು ದಿನದಲ್ಲಿ ವಿಮೆ ಹಣ ಸಿಗಲಿದೆ ಎಂಬುದನ್ನು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮರ್ಲಹಳ್ಳಿ ರವಿ ಕುಮಾರ್, ಟಿ. ಗಂಗಾಧರ್, ತರಕಾರಿ ತಿಪ್ಪೇಸ್ವಾಮಿ, ಪ್ರಶಾಂತ್ ರೆಡ್ಡಿ, ಮಹಂತೇಶ್, ನಾಗೇಂದ್ರಪ್ಪ, ಬೊಮ್ಮಣ್ಣ ಇತರರು ಇದ್ದರು.