protest ಚಳ್ಳಕೆರೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಪಿ. ಭೂತಯ್ಯ, ಕೆ. ಚಿಕ್ಕಣ್ಣ, ಸಿ. ಮಹೇಶ್, ಸಿ.ಎನ್. ಮಾರುತಿ ಇತರರು ಭಾಗವಹಿಸಿದ್ದರು.
- 29 ರಂದು ಪ್ರತಿಭಟನೆಗೆ ತೀರ್ಮಾನ
- ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆ
- ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಎಂದು ಆಕ್ರೋಶ
ಚಳ್ಳಕೆರೆ: ನಗರದ ಹೊರವಲಯದಲ್ಲಿ ಹೋರಾಟ ಮಾಡಲು ಸ್ಥಳ ನಿಗದಿ ಮಾಡಿರುವುದನ್ನು ಖಂಡಿಸಿ ಡಿ.29 ರಂದು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ತೀರ್ಮಾನಿಸಿದ್ದಾರೆ.protest
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಮಾತನಾಡಿ, ಯಾವ ಇಲಾಖೆಗಳಿಂದ ಸಾರ್ವಜನಿಕರಿಗೆ ಸಕಾಲಕ್ಕೆ ಕೆಲಸ ಆಗುವುದಿಲ್ಲವೋ ಅದೇ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಸಾರ್ವಜನಿಕರಿಗೆ ಹಕ್ಕಿದೆ. ಊರ ಹೊರಗೆ ಕಳುಹಿಸುವುದು ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ಮುಖಂಡ ಸಿ.ವೈ.ಶಿವರುದ್ರಪ್ಪ ಮಾತನಾಡಿ, ಸ್ವಾತಂತ್ರೃ ಕಾಲದಿಂದಲೂ ಸರ್ಕಾರಿ ಕಚೇರಿಗಳ ಮುಂದೆ ಹೋರಾಟ ನಡೆದಿವೆ. ಜನರ ಸಮಸ್ಯೆ ಪರಿಹಾರಕ್ಕೆ ಈಗಲೂ ಕಚೇರಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆ. ಊರ ಹೊರಗೆ ಕಳುಹಿಸಲು ಮುಂದಾಗಿರುವ ತಾಲೂಕು ಆಡಳಿತದ ವಿರುದ್ಧ ಹಮ್ಮಿಕೊಳ್ಳುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಊರ ಹೊರಗೆ ಹೋರಾಟಕ್ಕೆ ಜಾಗ ಗುರುತಿಸಲು ಯಾವುದೇ ಸಂಘಟನೆಗಳ ಅಭಿಪ್ರಾಯ ಕೇಳಿಲ್ಲ. ಇದೊಂದು ಜನ ವಿರೋಧಿ ನಿರ್ಧಾರ ಆಗಿದೆ ಎಂದು ಹೇಳಿದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೆ. ಚಿಕ್ಕಣ್ಣ ಮಾತನಾಡಿ, ಹೋರಾಟಗಳನ್ನು ಮಟ್ಟ ಹಾಕುವ ಕೆಲಸ ರಾಜ್ಯದಲ್ಲೇ ನಮ್ಮ ತಾಲೂಕಿನಿಂದ ಮೊದಲಾಗಿದೆ. ಇದುವರೆಗೂ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಹೋರಾಟಗಳು ನಡೆಸಲಾಗಿದೆ. ಸಕಾಲಕ್ಕೆ ಕೆಲಸ ಮಾಡದ ನಿರ್ಲಕ್ಷ್ಯ ಅಧಿಕಾರಿಗಳನ್ನು ಪ್ರತಿಭಟನೆಗಳಿಂದ ಮಾತ್ರ ಸರಿದಾರಿಗೆ ತರಲು ಸಾಧ್ಯ. ಆದರೆ, ಹೋರಾಟದ ದನಿ ದಮನಿಸಲು ಹೊರಟ ಅಧಿಕಾರಿಗಳ ನಡೆ ಖಂಡಿಸಬೇಕು ಎಂದರು.
ಕೆಆರ್‌ಎಸ್ ಪಕ್ಷದ ಮುಖಂಡ ಸಿ. ಮಹೇಶ್, ಪಕ್ಷದ ಎಸ್ಸಿ ಎಸ್ಟಿ ವಿಭಾಗದ ರಾಜ್ಯ ಕಾರ್ಯದರ್ಶಿ ಸಿ.ಎನ್. ಮಾರುತಿ, ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಡಾ. ಸಿ.ಶಿವಲಿಂಗಪ್ಪ, ಆರ್.ಎ. ದಯಾನಂದ ಮೂರ್ತಿ, ಭಗತ್ ಸಿಂಗ್ ಸಂಘಟನೆ ರಂಗಸ್ವಾಮಿ, ಪ್ರೆಸ್ ಮುರುಳಿ, ಕೃಷ್ಣೇಗೌಡ, ಹನುಮಂತಪ್ಪ, ಚೌಳೂರು ಪ್ರಕಾಶ, ಜಂಪಣ್ಣ, ಜಿ.ಎಚ್. ಹನುಮಂತಪ್ಪ ಇತರರು ಇದ್ದರು.