ಚಿಕ್ಕಜಾಜೂರು ಸಮೀಪದ ಅರಸನಘಟ್ಟ ಗ್ರಾಮದಲ್ಲಿ ಹೆಚ್ಚುವರಿ ವಿದ್ಯುತ್ ತಂತಿ ಅಳವಡಿಸದಂತೆ ಎಇಇ ವಿರೂಪಾಕ್ಷಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. 
ಚಿತ್ರದುರ್ಗ

ಮನೆಗಳ ಮೇಲೆ ವಿದ್ಯುತ್ ತಂತಿ ಅಳವಡಿಕೆಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ಅರಸನಘಟ್ಟ ಗ್ರಾಮಸ್ಥರ ಪ್ರತಿಭಟನೆ
  • ಬೆಸ್ಕಾಂ ಇಂಜಿನಿಯರ್‌ಗೆ ಮನವಿ
ಚಿಕ್ಕಜಾಜೂರು: ಸಮೀಪದ ಅರಸನಘಟ್ಟ ಗ್ರಾಮದ ಮನೆಗಳ ಮೇಲೆ 11 ಕೆವಿ ವಿದ್ಯುತ್ ಮಾರ್ಗ ಅಳವಡಿಕೆಗೆ ಮುಂದಾಗಿರುವ ಬೆಸ್ಕಾಂ ಕ್ರಮ ಖಂಡಿಸಿ ಗ್ರಾಮಸ್ಥರು ಚಿಕ್ಕಜಾಜೂರು ಪೊಲೀಸ್ ಠಾಣೆ ಬಳಿ ಇತ್ತೀಚೆಗೆ ಪ್ರತಿಭಟನೆ ನಡೆಸಿ ಇಂಜಿನಿಯರ್‌ಗೆ ಮನವಿ ಪತ್ರ ಸಲ್ಲಿಸಿದರು.
9 ತಿಂಗಳ ಹಿಂದೆ ಅರಸನಘಟ್ಟ ಗ್ರಾಮಸ್ಥರು ನೀಡಿದ ನಾಲ್ಕು ಎಕರೆ ಜಾಗದಲ್ಲಿ 66/11 ಕೆವಿ ವಿದ್ಯುತ್ ಪವರ್ ಸ್ವೇಷನ್ ಆರಂಭಿಸಲಾಗಿದೆ. ಅಲ್ಲಿಂದ ಕಾಶಿಪುರ, ಅಮೃತಾಪುರ, ಕೊಂಡಾಪುರ ಸೇರಿ ಮುಂದಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲು ವಿದ್ಯುತ್ ಪವರ್ ಲೈನ್ 11 ಕೆವಿ ತಂತಿಯನ್ನು ಕೆಲ ಮನೆಗಳ ಮೇಲೆ ಪ್ರಾಥಮಿಕ ಲೈನ್ ಹಾದು ಹೋಗಿರುವ ಕಂಬಕ್ಕೆ ಜೋಡಣೆ ಮಾಡಲು ಮುಂದಾಗಿದ್ದಾರೆ. ಇದು ಗ್ರಾಮಸ್ಥರಲ್ಲಿ ಭೀತಿ ಸೃಷ್ಟಿಸಿದೆ ಎಂದು ಗ್ರಾಮದ ಎ.ಡಿ. ಗಿರೀಶ್ ಹೇಳಿದರು.
ಈಗಾಗಲೇ ವಿದ್ಯುತ್ ಕಂಬಗಳಿಂದ ವಿದ್ಯುತ್ ಪ್ರವಹಿಸಿ ಸಾಕಷ್ಟು ಅನಾಹುತ ಜರುಗಿವೆ. ಇದರ ಜತೆ 11 ಕೆವಿ ಲೈನ್ ಆಕಸ್ಮಿಕವಾಗಿ ಮನೆಗಳ ಮೇಲೆ ಬಿದ್ದಲ್ಲಿ ಇಡಿ ಊರೇ ಭಸ್ಮವಾಗಲಿದೆ. ಗ್ರಾಮದ ಹೊರಭಾಗದಲ್ಲಿ ಕಂಬಗಳನ್ನು ಹಾಕಿ ವಿದ್ಯುತ್ ತಂತಿ ಅಳವಡಿಸಬೇಕೆಂದು ಒತ್ತಾಯಿಸಿದರು.
ಗ್ರಾಮದ ನವೀನ್ ಮಾತನಾಡಿ, ಗ್ರಾಮದಲ್ಲಿ ರಸ್ತೆಯ ನಡುವೆ, ಶಾಲೆ, ಮನೆ ಮೇಲೆ ವಿದ್ಯುತ್ ತಂತಿ ಹಾದು ಹೋಗುವಂತೆ ಅವೈಜ್ಞಾನಿವಾಗಿ ಕಂಬ ಹಾಕಲಾಗಿದೆ. ರಸ್ತೆಗಳ ತಿರುವಿನಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದರಿಂದ ಹೊಳಲ್ಕೆರೆ, ಚಿಕ್ಕಜಾಜೂರಿಗೆ ಸಂಚರಿಸುವ ಶಾಲಾ ವಾಹನಗಳು, ಟ್ರಾೃಕ್ಟರ್, ಲಾರಿ, ಎತ್ತಿನ ಗಾಡಿಗಳು ಸಾಕಷ್ಟು ಬಾರಿ ಕಂಬಕ್ಕೆ ಡಿಕ್ಕಿ ಹೊಡೆದಿವೆ. ಸಂಬಂಧಿಸಿದ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಪಂ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಎ. ಏಕಾಂತ, ಎ.ಒ. ಗಿರೀಶ್, ಸಂಜಯ್, ಸುಧಾಕರ್, ವಿಶ್ವ, ಶಿವಣ್ಣ, ಮಲ್ಲಿಕಾರ್ಜುನ್, ಶಿವಕುಮಾರ್, ಅನಂದ್, ಡಿ.ಸಿ. ಮೋಹನ್, ರಾಜಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.