onionಚಳ್ಳಕೆರೆ ತಾಲೂಕಿನ ಗೊರ್ಲಕಟ್ಟೆ ಗ್ರಾಮದ ರೈತರ ಜಮೀನಿನಲ್ಲಿ ಬಿತ್ತನೆ ಮಾಡಿ 20 ದಿನ ಕಳೆದರೂ ಮೊಳಕೆಯೊಡೆಯದ ಈರುಳ್ಳಿ ಬೀಜಗಳ ಕುರಿತು ಕಳಪೆ ಬೀಜ ಸರಬರಾಜು ಮಾಡಿದ ಖಾಸಗಿ ಕಂಪನಿಯ ಮ್ಯಾನೇಜರ್ ಬಿ.ಕೆ. ಶಂಕರ್ ಅವರನ್ನು ರೈತರಾದ ಎಂ. ಭೀಮಚಂದ್ರ, ಬಿ. ಧನಂಜಯ, ಡಿ. ದೇವರಾಜ್, ಡಿ. ಜಗದೀಶ್, ಎಂ. ದ್ಯಾಮಣ್ಣ ತರಾಟೆಗೆ ತೆಗೆದುಕೊಂಡರು.
- ಕಳಪೆ ಬೀಜ ವಿತರಿಸಿದ ಖಾಸಗಿ ಕಂಪನಿ ವಿರುದ್ಧ ರೈತರ ಆಕ್ರೋಶ
- ಜಮೀನಿಗೆ ಬಂದ ಕಂಪನಿ ಮ್ಯಾನೇಜರ್ ಜೊತೆ ರೈತರ ವಾಗ್ವಾದ
- ಎಕರೆಗೆ ೩೦ ಸಾವಿರ ರೂ. ಖರ್ಚು ಮಾಡಿ ಕಂಗಾಲಾದ ಅನ್ನದಾತ
ಚಳ್ಳಕೆರೆ: ತಾಲೂಕಿನ ಗೊರ್ಲಕಟ್ಟೆ ಗ್ರಾಮದ ರೈತರು ನನ್ತಿವಾಳ ಸಮೀಪದ ತಮ್ಮ ಜಮೀನುಗಳಲ್ಲಿ ಕೋಟಿ ಆಸೆಯಿಟ್ಟು ಬಿತ್ತನೆ ಮಾಡಿದ್ದ ಈರುಳ್ಳಿ ಬೀಜಗಳು ಇಪ್ಪತ್ತು ದಿನ ಕಳೆದರೂ ಕನಿಷ್ಠ ಮೊಳಕೆಯನ್ನೂ ಒಡೆಯದೆ ಸಂಪೂರ್ಣ ನಶಿಸಿ ಹೋಗಿವೆ. ಖಾಸಗಿ ಕಂಪನಿಯ ಕಳಪೆ ಬಿತ್ತನೆ ಬೀಜದಿಂದಾಗಿ ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ಆರೋಪಿಸಿರುವ ನೊಂದ ರೈತರು ಗುರುವಾರ ತಮ್ಮ ಜಮೀನುಗಳಲ್ಲೇ ನಿಂತು ಇಲಾಖೆ ಹಾಗೂ ಕಂಪನಿ ವಿರುದ್ಧ ತೀವ್ರ ಅಳಲು ತೋಡಿಕೊಂಡಿದ್ದಾರೆ. onion
ನೊಂದ ರೈತ ಎಂ. ಭೀಮಚಂದ್ರ ಮಾತನಾಡಿ, "ಖಾಸಗಿ ಕಂಪನಿಯ ಈರುಳ್ಳಿ ಬಿತ್ತನೆ ಬೀಜವನ್ನು ನಾವು ಚಳ್ಳಕೆರೆ ನಗರದ ಅಂಗಡಿಯೊಂದರಲ್ಲಿ ಪ್ರತಿ ಕೆಜಿಗೆ ೧,೪೫೦ ರೂ. ನಂತೆ ಹಣ ನೀಡಿ ಖರೀದಿಸಿದ್ದೆವು. ಪ್ರತಿಯೊಬ್ಬ ರೈತರೂ ಕನಿಷ್ಠ ೫ ಕೆಜಿಯಷ್ಟು ಬೀಜ ಖರೀದಿಸಿ ಕಳೆದ ತಿಂಗಳು ಜಮೀನಿನಲ್ಲಿ ನಾಟಿ ಮಾಡಿದ್ದೆವು. ಆದರೆ ಬಿತ್ತನೆ ಮಾಡಿ ಬರೋಬ್ಬರಿ ಇಪ್ಪತ್ತು ದಿನಗಳಾಗುತ್ತಾ ಬಂದರೂ ಒಂದೇ ಒಂದು ಬೀಜವೂ ನೆಲದಿಂದ ಮೊಳಕೆಯೊಡೆದಿಲ್ಲ. ಸಾಮಾನ್ಯವಾಗಿ ಇಷ್ಟೊತ್ತಿಗೆ ಬೆಳೆದು ನಿಂತು ಕಳೆ ತೆಗೆಯುವ ಹಂತಕ್ಕೆ ಬರಬೇಕಾಗಿದ್ದ ಈರುಳ್ಳಿ ಸಸಿಗಳು, ಇಂದಿಗೂ ನೆಲದ ಮೇಲೆಯೇ ಕಾಣಿಸಿಕೊಳ್ಳದಿರುವುದು ನಮಗೆ ತೀವ್ರ ಆಘಾತ ತಂದಿದೆ" ಎಂದು ಬೇಸರ ವ್ಯಕ್ತಪಡಿಸಿದರು.
ಬಯಲುಸೀಮೆಯ ಈ ಭಾಗದಲ್ಲಿ ಪ್ರತಿಯೊಬ್ಬ ರೈತರೂ ಒಂದು ಎಕರೆ ಈರುಳ್ಳಿ ಬಿತ್ತನೆಗಾಗಿ ಉಳುಮೆ, ಕೂಲಿ ಹಾಗೂ ಪರಿಕರಗಳು ಸೇರಿದಂತೆ ಕನಿಷ್ಠ ೩೦ ಸಾವಿರ ರೂ. ಗಳಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ರೈತರಿಗೆ ಪದೇಪದೇ ಇಂತಹ ಕಳಪೆ ಬೀಜಗಳನ್ನು ನೀಡಿ ವಂಚಿಸುತ್ತಿರುವ ಕಂಪನಿಗಳ ವಿರುದ್ಧ ಕೃಷಿ ಇಲಾಖೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಇಂತಹ ಕಂಪನಿಗಳ ಪರವಾನಗಿಯನ್ನು (License) ತಕ್ಷಣವೇ ರದ್ದುಗೊಳಿಸಬೇಕು ಎಂದು ರೈತರು ಕಟುವಾಗಿ ಒತ್ತಾಯಿಸಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳು
ತುರ್ತು ಜಂಟಿ ಸಮೀಕ್ಷೆ: ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ವಂಚನೆಗೊಳಗಾದ ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ, ಬೆಳೆ ನಷ್ಟದ ನಿಖರ ವರದಿ ಸಿದ್ಧಪಡಿಸಬೇಕು.
ಕಂಪನಿಯಿಂದ ಪರಿಹಾರ: ಕಳಪೆ ಬೀಜ ವಿತರಿಸಿ ರೈತರನ್ನು ಬೀದಿಗೆ ತಳ್ಳಿರುವ ಖಾಸಗಿ ಕಂಪನಿಯಿಂದಲೇ ನಷ್ಟದ ಸಂಪೂರ್ಣ ಹಣವನ್ನು ವಸೂಲಿ ಮಾಡಿ ರೈತರಿಗೆ ಹಂಚಬೇಕು.
ದಾಳಿ ಮತ್ತು ಕಟ್ಟುನಿಟ್ಟಿನ ಕ್ರಮ: ಚಳ್ಳಕೆರೆ ನಗರದಲ್ಲಿ ನಕಲಿ ಹಾಗೂ ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ದಂಧಕೋರರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ಕಂಪನಿ ಮ್ಯಾನೇಜರ್‌ನೊಂದಿಗೆ ವಾಗ್ವಾದ:
ವಿಷಯ ತಿಳಿದು ರೈತರ ಜಮೀನುಗಳಿಗೆ ಭೇಟಿ ನೀಡಿದ ಖಾಸಗಿ ಈರುಳ್ಳಿ ಬೀಜ ಮಾರಾಟ ಕಂಪನಿಯ ಮಾರುಕಟ್ಟೆ ವ್ಯವಸ್ಥಾಪಕ ಬಿ.ಕೆ. ಶಂಕರ ಅವರನ್ನು ಸುತ್ತುವರಿದ ರೈತರು ತೀವ್ರವಾಗಿ ತರಾಟೆಗೆ ತರಹದ ಘಟನೆ ನಡೆಯಿತು.
ಮ್ಯಾನೇಜರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರೈತರು ವಾಗ್ದಾಳಿ ನಡೆಸಿದರು. "ಒಬ್ಬ ರೈತನ ಹೊಲದಲ್ಲಿ ಬೀಜ ಹುಟ್ಟದಿದ್ದರೆ ಮಣ್ಣಿನ ದೋಷ ಎನ್ನಬಹುದು. ಆದರೆ ಈ ಭಾಗದ ಹತ್ತಾರು ರೈತರು ಏಕಕಾಲಕ್ಕೆ ನಾಟಿ ಮಾಡಿರುವ ಇಡೀ ಕಂಪನಿಯ ಬೀಜಗಳು ಎಲ್ಲೂ ಮೊಳಕೆಯೊಡೆದಿಲ್ಲ ಎಂದರೆ ಇದು ನೂರಕ್ಕೆ ನೂರು ಕಂಪನಿಯ ಕಳಪೆ ಬೀಜದ ದೋಷವೇ ಆಗಿದೆ. ಕಳಪೆ ಬೀಜ ನೀಡಿ ನಮ್ಮ ಸಮಯ, ಶ್ರಮ ಹಾಗೂ ದಂಡು ಹಣವನ್ನು ಹಾಳು ಮಾಡಿದ್ದೀರಿ. ನಮಗೆ ನ್ಯಾಯ ಸಿಗಬೇಕು. ಕಂಪನಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನೀವು ಇಲ್ಲಿಂದ ಕದಲಬಾರದು" ಎಂದು ಮ್ಯಾನೇಜರ್ ಅವರನ್ನು ತಡೆದು ರೈತರು ಆಕ್ರೋಶ ಹೊರಹಾಕಿದರು.
"ನಮ್ಮದು ಸಂಪೂರ್ಣ ಒಣ ಬೇಸಾಯದ ಬಯಲು ಸೀಮೆ ಪ್ರದೇಶ. ಇಲ್ಲಿ ರೈತರಿಗೆ ಯಾವುದೇ ಬೆಳೆಯೂ ಸುಲಭವಾಗಿ ಕೈಗೆ ಸಿಗುವುದಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಸಾಲಸೋಲ ಮಾಡಿ ಈರುಳ್ಳಿ ನಂಬಿ ಕೂತಿದ್ದ ನಮಗೆ ಈ ಕಳಪೆ ಕಂಪನಿ ಭಾರಿ ದ್ರೋಹ ಎಸಗಿದೆ" ಎಂದು ಬೆಳೆ ನಷ್ಟ ಮಾಡಿಕೊಂಡ ರೈತರಾದ ಬಿ. ಧನಂಜಯ, ಡಿ. ದೇವರಾಜ್, ಡಿ. ಜಗನ್ನಾಥ್ ಹಾಗೂ ಎಂ. ದ್ಯಾಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಭಾಗದ ಐದಾರು ರೈತರ ಹೊಲಗಳಲ್ಲಿ ಈರುಳ್ಳಿ ಬೀಜ ಮೊಳಕೆಯೊಡೆದಿಲ್ಲ ಎನ್ನುವುದು ನಿಜ. ಇದು ಬೀಜದ ತಾಂತ್ರಿಕ ದೋಷ ಇರಬಹುದು. ಪ್ರಸ್ತುತ ಪ್ರತಿ ರೈತರ ಜಮೀನಿನ ಬೆಳೆ ಪರಿಸ್ಥಿತಿಯನ್ನು ಜಿಪಿಎಸ್ (GPS) ಫೋಟೋಗಳ ಮೂಲಕ ದಾಖಲಿಸಿಕೊಂಡಿದ್ದೇನೆ. ಈ ಬಗ್ಗೆ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಸಮಗ್ರ ವರದಿ ನೀಡುತ್ತೇನೆ. ಜಿಲ್ಲೆಯ ಬೇರೆ ಕಡೆಗಳಲ್ಲಿ ಇದೇ ಬೀಜದಿಂದ ಅತ್ಯುತ್ತಮ ಇಳುವರಿ ಬಂದಿದೆ. ಇಲ್ಲಿನ ಸಮಸ್ಯೆಗೆ ಮಣ್ಣಿನ ಗುಣಲಕ್ಷಣಗಳೂ ಕಾರಣವಿರಬಹುದು.
— ಬಿ.ಕೆ. ಶಂಕರ್, ಮಾರುಕಟ್ಟೆ ವ್ಯವಸ್ಥಾಪಕ.