ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ್ ರೇಹಾನ್ ಪಾಷ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಬೆಳಗೆರೆ ಚಲವಾದಿ ಕಟ್ಟೆಮನೆ ಅಣ್ಣತಮ್ಮಂದಿರು ಭಾಗವಹಿಸಿದ್ದರು. Ekadashi
- ತಹಸೀಲ್ದಾರ್ ರೇಹಾನ್ ಪಾಷಾ ಸೂಚನೆ
- ಎರಡೂ ಗುಂಪಿನ ಒಪ್ಪಿಗೆ
ಚಳ್ಳಕೆರೆ: ತಾಲೂಕಿನ ಬೆಳಗೆರೆ ಗ್ರಾಮದ ಚಲವಾದಿ ಕಟ್ಟೆಮನೆ ಅಣ್ಣತಮ್ಮಂದಿರು ಜು.25, 26ರಂದು ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಹಾಗೂ ಶ್ರೀ ಯಲ್ಲಮ್ಮ ದೇವಿಯ ಆಷಾಢ ಮಾಸದ ಪ್ರಥಮ ಏಕಾದಶಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ತಹಸೀಲ್ದಾರ್ ರೇಹಾನ್ ಪಾಷಾ ಸೂಚಿಸಿದ್ದಾರೆ. Ekadashi
ತಾಲೂಕು ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ಹೊಂದಾಣಿಕೆಯಿಂದ ಹಬ್ಬ ಆಚರಿಸುವುದಾಗಿ ಚಲವಾದಿ ಜನಾಂಗದ ಎರಡೂ ಗುಂಪಿನವರು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದ್ದಾರೆ.
ಚಲವಾದಿ ಬೆಳಗೆರೆ ಕಟ್ಟೆಮನೆ ಅಭಿವೃದ್ಧಿ ಸಮಿತಿಯ ಹಳೆ ಮತ್ತು ಹೊಸ ಕಮಿಟಿ ಎಂಬ ಎರಡು ಗುಂಪುಗಳಾಗಿ ಏಕಾದಶಿ ಹಬ್ಬ ಆಚರಣೆಗೆ ಎರಡೂ ಗುಂಪಿನವರೂ ಪ್ರತ್ಯೇಕ ಕರಪತ್ರ ಮಾಡಿಸಿ, ಪೈಪೋಟಿ ರೀತಿಯಲ್ಲಿ ನಡೆದುಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಕಟ್ಟೆಮನೆಗೆ ನಡೆದುಕೊಳ್ಳುವ ಜನಾಂಗದ ಅಣ್ಣತಮ್ಮಂದಿರು ಕರ್ನಾಟಕ ಸೇರಿ ಆಂಧ್ರ ಮತ್ತು ತಮಿಳುನಾಡಿನಲ್ಲೂ ಸುಮಾರು ಐದು ಸಾವಿರ ಕುಟುಂಬಗಳಿವೆ. ಈಗಾಗಲೇ ಬಹುದೂರದ ಊರುಗಳ ಅಣ್ಣತಮ್ಮಂದಿರು ಕಾಲ್ನಡಿಗೆಯಲ್ಲಿ ಹರಕೆ ತೀರಿಸಲು ಪ್ರಯಾಣ ಆರಂಭಿಸಿದ್ದಾರೆ. ಜನಾಂಗದ ಪ್ರತಿ ಕುಟುಂಬದಲ್ಲಿ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನುಡಿ ನಮನ: ಈ ವರ್ಷದ ಏಕಾದಶಿ ಹಬ್ಬದಲ್ಲಿ ರಾಷ್ಟ್ರ ನಾಯಕರಾಗಿ ಬೆಳೆದಿದ್ದ ಜನಾಂಗದ ಎಚ್. ಹನುಮಂತಪ್ಪ ಅವರ ಅಗಲಿಕೆ ಸ್ಮರಿಸಿ, ನುಡಿ ನಮನ ಮಾಡುವ ಜವಾಬ್ದಾರಿ ಜನಾಂಗದ ಮೇಲಿದೆ ಎನ್ನುವ ಕಾರಣಕ್ಕೂ ಹಬ್ಬದ ಆಚರಣೆಗೆ ಎರಡು ಗುಂಪುಗಳು ಒಗ್ಗೂಡಿವೆ ಎನ್ನಲಾಗಿದೆ. ಸಭೆಯಲ್ಲಿ ಜನಾಂಗದ ಮುಖಂಡರಾದ ತಾಪಂ ಮಾಜಿ ಸದಸ್ಯ ಕೆ. ಜಯರಾಮಪ್ಪ, ಗುಡಿಬಂಡೆ ಮೂರ್ತಪ್ಪ, ಟಿ. ನಿಜಲಿಂಗಪ್ಪ, ಎನ್.ಆರ್.ಶಿವಣ್ಣ, ವೈ. ತಿಪ್ಪೇಸ್ವಾಮಿ, ಬಿ.ಎ. ಪರಮೇಶ್ವರಪ್ಪ, ಕೆ. ದೇವರಾಜ್, ವಿಶ್ವೇಶ್ವರಪ್ಪ, ಚೊಕ್ಕಣ್ಣ ಇದ್ದರು.