ಹಿರಿಯೂರು: ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗೆ ಹಿರಿಯೂರು ಉಪ ಚುನಾವಣೆ ಮೂಲಕ ಸ್ಪಷ್ಟ ಸಂದೇಶ ರವಾನಿಸಬೇಕಿದೆ ಎಂದು ಎಂಎಲ್ಸಿ ಸಿ.ಟಿ. ರವಿ ಹೇಳಿದರು. ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎನ್ಡಿಎ ಪರ ಅಲೆ ಶುರುವಾಗಿದೆ. ಹಿರಿಯೂರು ಉಪ ಚುನಾವಣೆ ಗೆಲುವು 2028ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ. ಎರಡೂ ಪಕ್ಷದ ಕಾರ್ಯಕರ್ತರು ಮೈತ್ರಿ ಧರ್ಮ ಪಾಲನೆ ಮಾಡಿ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೇಕಾಬಿಟ್ಟಿ ಬೆಲೆ ಏರಿಕೆ ಮಾಡಿದೆ. ಒಂದು ಕೈಯಲ್ಲಿ ಕೊಟ್ಟು ಎರಡು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಕಾಂಗ್ರೆಸ್ನವರು ಜೇಬುಗಳ್ಳರಿಗಿಂತ ಕಡೆಯಾಗಿದ್ದಾರೆ. ರಾಜ್ಯದಲ್ಲಿ ಭೀಕರ ಬರ, ಮಳೆ ಕೊರತೆಯಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದರೂ ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಟೀಕಿಸಿದರು.
ದೇಶದ ಅತ್ಯಂತ ಶ್ರೀಮಂತ ಸಿಎಂ ರಾಜ್ಯದ ಚುಕ್ಕಾಣಿ ಹಿಡಿದಿದ್ದರೂ ಸರ್ಕಾರದ ಖಜಾನೆ ಖಾಲಿ ಎನ್ನುತ್ತಾರೆ. ರಾಜ್ಯದಲ್ಲಿ ಮೀಸಲಾತಿ ಕಡಿತ ಮಾಡಿ ದಲಿತರಿಗೆ ಅನ್ಯಾಯ ಮಾಡಲಾಗಿದ್ದರೂ ದಲಿತರು ಏಕೆ ಬೀದಿಗೆ ಇಳಿದು ಹೋರಾಟ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು. ಸ್ವಾಭಿಮಾನದ ಅಸ್ತ್ರ ಹಿಡಿದು ಹಣ ಬಲ ಸೋಲಿಸಬೇಕು. ಹಿರಿಯೂರಿನ ಜನರ ಸ್ವಾಭಿಮಾನ ಮಾರಾಟಕ್ಕಿಲ್ಲ ಎನ್ನುವ ಸಂದೇಶ ನೀಡಬೇಕು. ಸಂಸದ ಗೋವಿಂದ ಕಾರಜೋಳ ಅವರ ಮಾರ್ಗದರ್ಶನ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರ ಅನುಭವ, ಶಾಸಕ ಧೀರಜ್ ಮುನಿರಾಜ್ ಗೌಡ ಅವರು ಅರ್ಜುನನ ಪಾತ್ರ ನಿರ್ವಹಿಸಲಿದ್ದು, ರಾಜಣ್ಣ ಸಾರಥ್ಯದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ತಾಲೂಕಾಧ್ಯಕ್ಷ ಕೆ. ಅಭಿನಂದನ್, ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಪ್ರೀತಂಗೌಡ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ರಾಜಣ್ಣ, ಗಿರೀಶ್, ಮೇಘರಾಜ್ ಇತರರಿದ್ದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಉಪ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶಕ್ತಿ ಮೀರಿ ಹೋರಾಟ ಮಾಡಬೇಕು. ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಜನ ಜಾಗೃತಿ ಮೂಡಿಸಬೇಕು. ಎಲ್ಲದಕ್ಕೂ ಸಿಎಂ ಕೇಂದ್ರದ ಕಡೆ ಬೆರಳು ತೋರಿಸುತ್ತಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಅನುದಾನ ನೀಡಲಾಗಿದೆ. ಈ ವಿಚಾರದಲ್ಲಿ ಜಿಲ್ಲಾ ಸಚಿವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಮಧ್ಯ ಕರ್ನಾಟಕ, ಕೃಷ್ಣಾ ಬೆಸಿನ್ ನೀರಾವರಿ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕಾಳಜಿ ಇಲ್ಲ. ಅವರು ಕಾವೇರಿ ಬಿಟ್ಟು ನಮ್ಮ ಕಡೆ ಬರಲ್ಲ ಎಂದರು.
ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆಯಲ್ಲಿ ಕಾಲ ದೂಡುತ್ತಿದೆ. 18 ವರ್ಷ ಕ್ಷೇತ್ರ ಪ್ರತಿನಿಧಿಸಿದ ದಿ.ಸುಧಾಕರ್ ಅವರು ನೀರಾವರಿ ಯೋಜನೆ ಬಗ್ಗೆ ಗಮನ ಹರಿಸಲಿಲ್ಲ. ಜಿಲ್ಲೆಯ ರೈತರು, ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿದೆ. ಇದರಲ್ಲಿ ಸುಧಾಕರ್ ಪಾತ್ರ ಇಲ್ಲ, ಕೆಲವರು ಚಿತ್ರದುರ್ಗ ಶಾಖಾ ಕಾಲುವೆಗೆ ದಿ. ಸುಧಾಕರ್ ಹೆಸರಿಡಬೇಕು ಎಂದು ಹೇಳುತ್ತಿರುವುದು ದುರಂತ ಎಂದರು.
ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ, ನಮ್ಮ ಜೇಬು ಖಾಲಿಯಾಗಿದೆ ಎಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು, ರೈತರ ಸಭೆಯಲ್ಲಿ ಹೇಳುವ ಸಿಎಂ, ಹಿರಿಯೂರಿಗೆ 2500 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದು ಹಸಿ ಸುಳ್ಳು. ಕ್ಷೇತ್ರದ ಸ್ವಾಭಿಮಾನಿ ಮತದಾರರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು.ಸಿ.ಟಿ. ರವಿ ಎಂಎಲ್ಸಿ