pardನಾಯಕನಹಟ್ಟಿಯಲ್ಲಿ ಶುಕ್ರವಾರ ಮೊಹರಂ ಆಚರಣೆ ಪ್ರಯುಕ್ತ ಮೆರವಣಿಗೆ ನಡೆಯಿತು.
- ನಾಯಕನಹಟ್ಟಿಯಲ್ಲಿ ಸಾಮರಸ್ಯಕ್ಕೆ ಸಾಕ್ಷಿಯಾದ ಹಬ್ಬ
- ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು
ನಾಯಕನಹಟ್ಟಿ: ಸಾಮರಸ್ಯ ಮತ್ತು ಭಾವೈಕ್ಯತೆ ಪ್ರತೀಕವಾದ ಮೊಹರಂ ಹಬ್ಬವನ್ನು 25 ವರ್ಷಗಳ ನಂತರ ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ಕೋಟೆ ಬಡಾವಣೆಯ ದೇಗುಲ ರಸ್ತೆ ಬಳಿ ನೂತನ ಪೀರಲದೇವರ ದೇಗುಲದಲ್ಲಿ ಗುರುವಾರ ಬೆಳಗ್ಗೆ ಹೂವುಗಳಿಂದ ಅಲಂಕೃತ ತಬೂತ್(ಪೆಟ್ಟಿಗೆ)ಗಳನ್ನು ಮೆರವಣಿಗೆ ಮೂಲಕ ತಲೆ ಮೇಲೆ ಹೊತ್ತು ತರಲಾಯಿತು. ನಂತರ ಲಾಲ್‌ಸಾಬ್‌ಅಲಿ, ಅಕ್ಸರ್‌ಅಲಿ, ಅಬ್ಬಾಸ್‌ಅಲಿ ಹಾಗೂ ಬಾರಾಹಿಮಾಂ ಎಂಬ ದೇವದೂತರ ಪಂಜುಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.
ಗುರುವಾರ ಸಂಜೆ ಪಟ್ಟಣದ ನಾಗರಿಕರು ಜಾತಿ, ಧರ್ಮ ಮೀರಿ ಪೀರಲ ದೇಗುಲಕ್ಕೆ ಆಗಮಿಸಿ ಸಕ್ಕರೆ, ಕಡಲೆ ಅರ್ಪಿಸಿದರು. ಶುಕ್ರವಾರ ಬೆಳಗಿನ ಜಾವ ಹಿಂದೂ, ಮುಸ್ಲಿಂ ಸಮುದಾಯದ ನೂರಾರು ಜನ ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು. ಹರಕೆ ಹೊತ್ತವರು, ಭಕ್ತರು ಕೆಂಡದ ಹೊಂಡದಲ್ಲಿ ನಡೆದರು.
ಶುಕ್ರವಾರ ಮಧ್ಯಾಹ್ನ ಮೊಹರಂ ಕಡೆಯ ದಿನದ ಪ್ರಯುಕ್ತ ತಬೂತ್ ಮತ್ತು ಪಂಜು ದೇವರುಗಳನ್ನು ಹೊತ್ತು ಮೆರವಣಿಗೆಗೆ ಚಾಲನೆ ನೀಡಲಾಯಿತು. ಭಕ್ತರು ಸಕ್ಕರೆ ಕಡಲೆಯನ್ನು ಅರ್ಪಿಸಿದ ನಂತರ ತೇರು ಬೀದಿಯ ಮೂಲಕ ಸಾಗಿ ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ಹೊರಮಠ ದೇಗುಲದಲ್ಲಿರುವ ಬಾವಿಯಲ್ಲಿ ದೇವರನ್ನು ವಿಸರ್ಜಿಸಿ ನೀರಿಗೆ ಹಾಕುವ ಸಂಪ್ರದಾಯ ಪಾಲಿಸಲಾಯಿತು.
ವಿವಿಧ ಕಾರಣಗಳಿಂದ 25 ವರ್ಷಗಳಿಂದ ಆಚರಿಸಿದೇ ಇದ್ದ ಮೊಹರಂ ಹಬ್ಬವನ್ನು ಈ ವರ್ಷ ಅದ್ದೂರಿಯಾಗಿ ನೆರವೇರಿಸಲಾಯಿತು.
ಮೆರವಣಿಗೆಯಲ್ಲಿ ಕಲಾತಂಡಗಳು, ವಿವಿಧ ಪ್ರಾಣಿಗಳ ಬೊಂಬೆಗಳು, ಕೋಡಂಗಿ, ಹಾಸ್ಯ ವೇಷದಾರಿಗಳು ಕಣ್ಮನ ಸೆಳೆದವು. ಡೊಳ್ಳು, ಹಲಗೆ, ತಪ್ಪಡಿಗಳ ಸದ್ದಿಗೆ ಸಾರ್ವಜನಿಕರು ಹೆಜ್ಜೆ ಹಾಕಿದರು. ಮೊಹರಂ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪೋಟೋ:ವಿ.ವಿ.26 ಎನ್‌ವೈಕೆ2ಪಿ