Molakalmuru: ಮೊಳಕಾಲ್ಮೂರಿನಲ್ಲಿ ಅರ್ಧಕ್ಕೆ ನಿಂತಿರುವ ಬಿಇಒ ಕಚೇರಿ ಕಟ್ಟಡ ಕಾಮಗಾರಿ.
- ಅನುದಾನದ ಕೊರತೆಯಿಂದ ಬುನಾದಿಗೆ ಸೀಮಿತ
- ತುಕ್ಕು ಹಿಡಿಯುತ್ತಿರುವ ಕಬ್ಬಿಣದ ಪಿಲ್ಲರ್
- ಕಾಮಗಾರಿ ಜಾಗದಲ್ಲಿ ಜಾಲಿ ಮರ
ಮೊಳಕಾಲ್ಮೂರು: ಮೊಳಕಾಲ್ಮೂರಿನಲ್ಲಿ ಬಿಇಒ ಕಚೇರಿ ನಿರ್ಮಾಣ ಕಾಮಗಾರಿ ಅನುದಾನ ಕೊರತೆಯಿಂದ ನನೆಗುದಿಗೆ ಬಿದ್ದಿದೆ.
ಮೂರು ವರ್ಷಗಳ ಹಿಂದೆ ಮಂಜೂರಾದ 1.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಬುನಾದಿ ಹಾಗೂ ಪಿಲ್ಲರ್ ಬೇಸ್ ಮಟ್ಟದವರೆಗೆ ಕಾಮಗಾರಿ ನಡೆದಿದೆ. ಹಣದ ಸಮಸ್ಯೆಯಿಂದ ಅಲ್ಲಿಗೆ ನಿಂತಿದೆ.
ಕಾಮಗಾರಿ ಜಾಗದಲ್ಲಿ ಜಾಲಿ ಮರಗಳು ಬೆಳೆದಿವೆ. ಕಟ್ಟಡ ಕಾಮಗಾರಿ ಬಗ್ಗೆ ಕೇಳುವವರೆ ಇಲ್ಲದಂತಾಗಿದೆ. ಹೆಚ್ಚುವರಿ ಅನುದಾನಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಬಿಇಒ ಹೇಳುತ್ತಾರೆ.
ಸದ್ಯಕ್ಕೆ ಸರ್ಕಾರಿ ಶಾಲೆಯ ಹಳೆಯ ಕಟ್ಟಡದಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅದು ಸಹ ಮಳೆಗಾಲದಲ್ಲಿ ಸೋರುತ್ತದೆ. ಕಚೇರಿ ಸಿಬ್ಬಂದಿಗೆ ಹೊಸ ಕಟ್ಟಡದಲ್ಲಿ ಕೆಲಸ ಮಾಡಬೇಕೆಂಬ ಹಂಬಲ ಇದ್ದರೂ ಕಾಲ ಕೂಡಿ ಬಂದಿಲ್ಲ.
ಆರಂಭದಲ್ಲಿ ಬಿಡುಗಡೆ ಆದ 50 ಲಕ್ಷ ರೂ. ಮೊತ್ತದಲ್ಲಿ ಬೇಸ್ ಮಟ್ಟದವರೆಗೆ ಕೆಲಸ ಆಗಿದೆ. ಕಾಮಗಾರಿ ಮುಂದುವರಿಸಲು ಅನುದಾನ ಬಿಡುಗಡೆಗೆ ಅನೇಕ ಬಾರಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಬಿಸಿಲು, ಮಳೆಗೆ ಪಿಲ್ಲರ್‌ಗೆ ಹಾಕಿರುವ ಕಬ್ಬಿಣ ತುಕ್ಕು ಹಿಡಿದು ಹಾಕಿದ ಬಂಡವಾಳ ವ್ಯರ್ಥವಾಗಲಿದೆ ಎಂದು ಭೂಸೇನಾ ನಿಗಮದ ಇಂಜಿನಿಯರ್ ಕಾರಿಗನೂರು ನಟರಾಜ್ ತಿಳಿಸಿದ್ದಾರೆ.