ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೇಡರಡ್ಡಿಹಳ್ಳಿ ಬಸವರಡ್ಡಿ, ರವಿಕುಮಾರ, ಸೂರಮ್ಮನಹಳ್ಳಿ ರಾಜಣ್ಣ, ಡಿ.ಸಿ. ನಾಗರಾಜ, ಗೋವಿಂದಪ್ಪ, ಅಡವಿ ಮಾರಣ್ಣ, ರಮೇಶ್, ಚಿತ್ರಲಿಂಗಪ್ಪ, ಅಬ್ದುಲ್‌ಸಾಬ್, ಮರಿಸ್ವಾಮಿ ಇದ್ದರು. Protest
- ಬೇಡರಡ್ಡಿಹಳ್ಳಿ ಬಸವರಡ್ಡಿ ಅಸಮಾಧಾನ
- ನಾಗಸಮುದ್ರದಲ್ಲಿ ರೈತ ಸಂಘ ಉದ್ಘಾಟನೆ
ಮೊಳಕಾಲ್ಮೂರು: ಜಿಲ್ಲಾದ್ಯಂತ ಭೀಕರ ಬರ ಕಾಡುತ್ತಿದ್ದರೂ ಸೂಕ್ತ ಪರಿಹಾರ ಕೊಡಿಸಲು ಯಾವೊಬ್ಬ ಶಾಸಕರೂ ಸರ್ಕಾರದ ಗಮನ ಸೆಳೆಯದೆ ಅಧಿಕಾರದ ಲಾಲಾಸೆಯಿಂದ ಮಂತ್ರಿಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ನಡೆ ನೋವಿನ ಸಂಗತಿ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಶುಕ್ರವಾರ ರೈತಸಂಘದ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಳೆ ಅಭಾವದಿಂದ ರೈತಾಪಿ ವರ್ಗ ಆತಂಕದಲ್ಲಿದೆ. ಆಪತ್ತು ಎದುರಾಗಿದ್ದರೂ ಬರ ನಿರ್ವಹಣೆಗೆ ಸರ್ಕಾರ ದೃಢ ನಿರ್ಧಾರ ತಗೆದುಕೊಳ್ಳುತ್ತಿಲ್ಲ. ಮಂತ್ರಿ ಮಂಡಲ ವಿಸ್ತರಣೆಗೆ ದೆಹಲಿಗೆ ಎಡತಾಕುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಕಿಡಿ ಕಾರಿದರು. ಸಿಎಂ ಡಿ.ಕೆ. ಶಿವಕುಮಾರ್ ಚಿತ್ರದುರ್ಗ ಜಿಲ್ಲೆಗೆ ಎರಡು ದಿನ ಭೇಟಿ ಕೊಟ್ಟು ಬರ ಅಧ್ಯಯನ ನಡೆಸಿದ್ದಾರೆ. ಬೆಳೆ ನಷ್ಟದ ವಾಸ್ತವ ಪರಿಸ್ಥಿತಿ ಮನಗಂಡರೂ ಪರಿಹಾರ ಘೋಷಣೆಗೆ ವಿಳಂಬ ಮಾಡುತ್ತಿರುವುದೇಕೆ? ಇವರಿಗೆ ರೈತರ ಉದ್ಧಾರ ಬೇಕಿಲ್ಲ. ಸರ್ಕಾರ ಮೊಂಡುತನ ಬಿಟ್ಟು ಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಗೆ ಸಜ್ಜಾಗುತ್ತೇವೆ ಎಂದು ಎಚ್ಚರಿಸಿದರು.
ದಸಂಸ ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶಿ ಮಾತನಾಡಿ, ರೈತ ಹಾಗೂ ಕಾರ್ಮಿಕ ಸಂಘಟನೆಗಳು ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ನಾಗಸಮುದ್ರ ಗ್ರಾಮದಲ್ಲಿ ರೈತಸಂಘದ ಗ್ರಾಮ ಶಾಖೆ ಅಸ್ತಿತ್ವಕ್ಕೆ ಬಂದಿರುವುವುದು ರೈತ ಹಾಗೂ ಕಾರ್ಮಿಕರಿಗೆ ಶಕ್ತಿ ಬಂದಂತಾಗಿದೆ. ಅದಕ್ಕೆ ಪೂರಕವಾಗಿ ಸಂಘವನ್ನು ಕೊಂಡೊಯ್ಯುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ರವಿಕುಮಾರ, ತಾಲೂಕು ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಗ್ರಾಮ ಶಾಖೆ ಅಧ್ಯಕ್ಷ ಗೋವಿಂದಪ್ಪ, ಪ್ರಧಾನ ಕಾರ್ಯದರ್ಶಿ ಅಡವಿ ಮಾರಣ್ಣ, ರಮೇಶ್, ಚಿತ್ರಲಿಂಗಪ್ಪ, ಅಬ್ದುಲ್‌ಸಾಬ್, ಮರಿಸ್ವಾಮಿ, ಸುರೇಶ್, ಡಿ.ಸಿ. ನಾಗರಾಜ, ಓರಣ್ಣ, ನಿಂಗಣ್ಣ, ರಾಮಾಂಜಿನಿ, ದಾಸಪ್ಪ, ಮಂಜುನಾಥ, ತಿಪ್ಪೇಸ್ವಾಮಿ, ಶಿವಪ್ರಸಾದ್ ಇತರರು ಇದ್ದರು.