ಹೊಸದುರ್ಗದ ಸದ್ಗುರು ಸೇವಾಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ವಿವೇಕ ಚಿಂತನೋತ್ಸವದ ಯುವ ಸಮ್ಮೇಳನದಲ್ಲಿ ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಶ್ರೀಕಾಂತಾನಂದ ಸರಸ್ವತಿ ಸ್ವಾಮೀಜಿ, ಚಿಂತಕ ಚಕ್ರವರ್ತಿ ಸೂಲಿಬೆಲೆ, ಸ್ವಾಮಿ ವಿನಯಾನಂದ ಸರಸ್ವತಿ ಸ್ವಾಮೀಜಿ ಇತರರಿದ್ದರು. Youth
- ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ
- ಹೊಸದುರ್ಗದಲ್ಲಿ ವಿವೇಕ ಚಿಂತನೋತ್ಸವ
ಹೊಸದುರ್ಗ: ಸ್ವಾಮಿ ವಿವೇಕಾನಂದರ ಆಲೋಚನೆ ಹಾಗೂ ಚಿಂತನೆ ಗಳನ್ನು ಯುವಶಕ್ತಿ ಬದುಕಿನಲ್ಲಿ ಅಳವಡಿಸಿ ಕೊಂಡರೆ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. Youth
ಪಟ್ಟಣದ ಸದ್ಗುರು ಸೇವಾಶ್ರಮದಲ್ಲಿ ಶನಿವಾರ ಶ್ರೀಕಾಂತಾನಂದ ಸರಸ್ವತಿ ಸ್ವಾಮೀಜಿ ಅವರ 26ನೇ ವರ್ಷದ ಬ್ರಹ್ಮೋಪದೇಶ ವಾರ್ಷಿ ಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವೇಕ ಚಿಂತನೋತ್ಸವದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಯುವ ಸಮಾಜದ ಪ್ರತೀಕವಾಗಿದ್ದಾರೆ. ದೇಶ ಬ್ರಿಟಿಷರ ಕೈಗೆ ಸಿಕ್ಕು ನಲುಗುತ್ತಿದ್ದಾಗ ದೇಶದ ಯುವಶಕ್ತಿಯನ್ನು ಎಚ್ಚರಿಸಿದ ಬಂಗಾಳದ ಯುವ ಸನ್ಯಾಸಿ ಅಮೆರಿಕದಲ್ಲಿ ನಿಂತು ಭಾರತ ದೇಶದ ಸಂಸ್ಕೃತಿ ಹಾಗೂ ಇತಿಹಾಸದ ಶ್ರೇಷ್ಠತೆಯ ಕುರಿತು ಪ್ರಪಂಚಕ್ಕೆ ತಿಳಿಸಿದರು.
ಕೆಲ ರಾಜಕೀಯ ನಾಯಕರು ವಿದೇಶಗಳಲ್ಲಿ ನಿಂತು ದೇಶದ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಆದರೆ ದೇಶ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯತ್ತ ಸಾಗುತ್ತಿದೆ. ಇದನ್ನು ದೇಶದ ಯುವ ಶಕ್ತಿ ಗಂಭೀರವಾಗಿ ಚಿಂತಿಸಬೇಕು ಎಂದರು.
ಯುವಶಕ್ತಿಯ ಆಲೋಚನೆಗಳು ಮೊಬೈಲ್, ರೀಲ್ಸ್ಗಳಲ್ಲಿ ಕಳೆದು ಹೋಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಮೊಬೈಲ್ ಆಲೋಚನೆಯ ಶಕ್ತಿಯನ್ನು ಹಾಳುಮಾಡುತ್ತಿದೆ. ಯುವಕರು ದೇಶಕ್ಕಾಗಿ ತಮ್ಮ ಸೇವೆಯನ್ನು ಸಮರ್ಪಿಸಿದರೆ ದೇಶ ಬಲಿಷ್ಠವಾಗುತ್ತದೆ ಎಂದು ಹೇಳಿದರು.
ಕಾಕ್ರೋಚ್ ಎಂದು ಕರೆದುಕೊಳ್ಳುವ ಜೆನ್ ಜಿ ತತ್ವ ಸಿದ್ಧಾಂತ ರಹಿತವಾಗಿದೆ. ಇದನ್ನು ಯುವಶಕ್ತಿ ಬೆಂಬಲಿಸಬಾರದು. ಪ್ರತಿಯೊಬ್ಬರೂ ವಿವೇಕಾನಂದರ ಪುಸ್ತಕ ಓದುವ ಆಸಕ್ತಿ ಬೆಳೆಸಿಕೊಳ್ಳಿ. ಅವರ ಚಿಂತನೆಗಳು ಬದುಕನ್ನು ಅಮೂಲಾಗ್ರವಾಗಿ ಬದಲಾಯಿಸುತ್ತವೆ ಎಂದರು.
ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಯುರೋಪಿಯನ್ನರ, ಮುಸ್ಲಿಂ ಹಾಗೂ ಬ್ರಿಟಿಷರ ಆಕ್ರಮಣದ ನಂತರ ದೇಶದ ಶಿಕ್ಷಣ ಪದ್ಧತಿ ಬದಲಾಯಿತು. ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆಯು ಉನ್ನತವಾದ ಜ್ಞಾನವನ್ನು ಹೊಂದಿತ್ತು ಎಂದರು. ನ್ಯೂಟನ್, ಪೈಥಾಗೊರಸ್ ಇನ್ನಿತರ ಸಂಶೋಧಕರು ಭಾರತದ ವೇದಗಳಿಂದ ಪಡೆದ ಜ್ಞಾನವನ್ನು ಪ್ರಪಂಚಕ್ಕೆ ನೀಡಿದರು. ಆತ್ಮ ವಿಕಾಸಕ್ಕೆ ಕಾರಣವಾಗುವ ವಿದ್ಯೆ ಮಾತ್ರ ಶ್ರೇಷ್ಠತೆಯನ್ನು ಪಡೆಯುತ್ತದೆ. ವಿವೇಕಾನಂದರ ಚಿಂತನೆಗಳು ಯುವಶಕ್ತಿಯ ಬದುಕನ್ನು ಹಸನಾಗಿಸುವ ಶಕ್ತಿ ಹೊಂದಿವೆ ಎಂದರು. ಸದ್ಗುರು ಸೇವಾಶ್ರಮದ ಶ್ರೀಕಾಂತಾನಂದ ಸರಸ್ವತಿ ಸ್ವಾಮೀಜಿ, ಶಿವಮೊಗ್ಗ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ವಿನಯಾನಂದ ಸರಸ್ವತಿ ಸ್ವಾಮೀಜಿ, ಹೊಸಪೇಟೆ ರಾಮಕೃಷ್ಣ ಆಶ್ರಮದ ಸ್ವಾಮಿ ಸುಮೇದಾನಂದ ಜಿ ಮಹಾರಾಜ್, ಸ್ವಾಮಿ ಪ್ರಕಾಶಾನಂದ ಸ್ವಾಮೀಜಿ ಇದ್ದರು.
ಬ್ರಹ್ಮೋಪದೇಶ ವಾರ್ಷಿಕೋತ್ಸವ: ಶ್ರೀಕಾಂತಾನಂದ ಸರಸ್ವತಿ ಸ್ವಾಮೀಜಿ ಅವರ 26ನೇ ವರ್ಷದ ಬ್ರಹ್ಮೋಪದೇಶ ವಾರ್ಷಿಕೋತ್ಸವದ ಅಂಗವಾಗಿ ಸ್ವಾಮಿ ನಿರ್ಭಯಾನಂದ ಸ್ವಾಮೀಜಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಎಸ್.ನಿಜಲಿಂಗಪ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ವ್ಯವಸ್ಥೆ ಹಾಗೂ ವಿವೇಕಾನಂದರ ಚಿಂತನೆಗಳ ಕುರಿತು ಸಂವಾದ ನಡೆಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ. ಎಸ್. ಕಲ್ಮಠ, ಎಂ.ಬಿ. ತಿಪ್ಪೇಸ್ವಾಮಿ, ಪ್ರಾಚಾರ್ಯೆ ಜ್ವಾಲಾ ರೋಕಡೆ ಇತರರು ಪಾಲ್ಗೊಂಡಿದ್ದರು.