ಪ್ರಮುಖ ಮುಖ್ಯಾಂಶಗಳು
ಮೊಳಕಾಲ್ಮೂರು: ತಾಲೂಕಿನ ವಡೇರಹಳ್ಳಿ ಸಮೀಪವಿರುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 60ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ಕ್ರಮವನ್ನು ವಿರೋಧಿಸಿ, ತಕ್ಷಣ ಮರು ನೇಮಕ ಮಾಡಿಕೊಳ್ಳಲು ಒತ್ತಾಯಿಸಿ ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್) ಸಂಘಟನೆ ಪದಾಧಿಕಾರಿಗಳು ಸೋಮವಾರ ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ಕಾರ್ಖಾನೆ ಆರಂಭವಾಗಿ 15 ವರ್ಷಗಳ ಹಿಂದೆ ಸ್ಥಳೀಯರಿಗೆ ಕೆಲಸ ನೀಡಲಾಗಿತ್ತು. ಆದರೆ, ಕಾಲಾನಂತರ ಕೆಲ ದಿನಗಳ ಕಾಲ ಮುಚ್ಚಿದ್ದ ಕಾರ್ಖಾನೆಯನ್ನು ಪುನಃ ಆರಂಭಿಸಿದಾಗ, ಸ್ಥಳೀಯ ಕಾರ್ಮಿಕರನ್ನು ಹೊರಗಿಟ್ಟು ಆಂಧ್ರ, ಬಿಹಾರ, ಒರಿಸ್ಸಾ, ಮತ್ತು ಮಧ್ಯಪ್ರದೇಶ ರಾಜ್ಯಗಳ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದು ಕಾರ್ಖಾನೆ ಮಾಲೀಕರ ದುರಹಂಕಾರದ ನಡೆಯಾಗಿದ್ದು, ಸ್ಥಳೀಯರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಕಾರ್ಖಾನೆ ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ್ದರಿಂದ ಅವರ ಕುಟುಂಬಗಳ ಜೀವನ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ.
ದುಡಿಮೆ ಇಲ್ಲದೆ ಹಲವು ಕಾರ್ಮಿಕರು ಕುಟುಂಬ ಸಮೇತ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ, ತಾಲೂಕು ದಂಡಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ಸ್ಥಳೀಯ ಕಾರ್ಮಿಕರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲು ಸೂಕ್ತ ಕ್ರಮವಹಿಸಬೇಕು.
ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ತಾಲೂಕು ಆಡಳಿತವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಡಿ.ಎಂ. ಮಲಿಯಪ್ಪ, ನಾಗರಾಜ, ಜಿ. ರಾಮು, ಕಾಮಯ್ಯ, ಮೂರ್ತಿ, ನಾಗರಾಜಪ್ಪ, ಹೊನ್ನೂರಪ್ಪ, ಮಲ್ಲಿಕಾರ್ಜುನ, ಗಂಗಪ್ಪ, ವಡೇರಪ್ಪ, ಹನುಮಕ್ಕ, ಶಾಂತಮ್ಮ, ಗಂಗಮ್ಮ, ಭಾಗ್ಯಮ್ಮ, ಶ್ರುತಿ, ಗೌರಮ್ಮ, ತಿಮ್ಮಕ್ಕ, ಜಯಮ್ಮ, ತಿಪ್ಪೇಸ್ವಾಮಿ, ಸರೋಜಮ್ಮ, ಓಬಮ್ಮ ಸೇರಿದಂತೆ ವಜಾಗೊಂಡ ಕಾರ್ಮಿಕರು ಭಾಗವಹಿಸಿದ್ದರು.