ಹೊಸದುರ್ಗದಲ್ಲಿ ಶನಿವಾರ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಸಮಾರಂಭವನ್ನು ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಎಸ್.ಎನ್. ಸಿದ್ದರಾಮಪ್ಪ, ಬಸವರಾಜಪ್ಪ, ಎಲ್. ಜಯಪ್ಪ ಇದ್ದರು. Lingayat
- ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯ
- ಪ್ರತಿಭಾ ಪುರಸ್ಕಾರ, ಶೈಕ್ಷಣಿಕ-ವೃತ್ತಿ ಮಾರ್ಗದರ್ಶನ
ಹೊಸದುರ್ಗ: ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳು ವ್ಯಕ್ತಿತ್ವ ವಿಕಾಸಗೊಳಿಸುವ ಹಾಗೂ ವಿಶ್ವ ಮಾನವ ಸಂದೇಶ ಸಾರುವ ಶಕ್ತಿ ಹೊಂದಿವೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. Lingayat
ಪಟ್ಟಣದ ಸಿದ್ದರಾಮೇಶ್ವರ ಸಭಾ ಭವನದಲ್ಲಿ ಶನಿವಾರ ವೀರಶೈವ ಲಿಂಗಾ ಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಹಿರಿಯರು ಮಕ್ಕಳಿಗೆ ಧರ್ಮದ ಸಂಸ್ಕಾರ ನೀಡುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕು. ಭಸ್ಮ ಧಾರಣೆ, ಲಿಂಗ ದೀಕ್ಷೆ, ವಚನಗಳ ಸ್ಮರಣೆ ಸೇರಿ ಧಾರ್ಮಿಕ ಆಚರಣೆಗಳನ್ನು ತಿಳಿಸುವ ಕೆಲಸವಾಗಬೇಕು. ದಿನನಿತ್ಯ ವಚನಗಳನ್ನು ಪಠಿಸುವುದರಿಂದ ಜ್ಞಾನದ ವಿಕಾಸವಾಗುತ್ತದೆ. ಮಕ್ಕಳು ತಂದೆ ತಾಯಂದಿರನ್ನು ದೇವರು ಎಂದು ಭಾವಿಸಿ ಅವರಿಗೆ ವಂಚನೆ ಮಾಡದಂತೆ ಬದುಕುತ್ತಾರೆ ಎಂದರು. ದೇವರನ್ನು ಹೊರಗೆ ಹುಡುಕುವ ಅಗತ್ಯವಿಲ್ಲ. ತಂದೆ ತಾಯಿಯಲ್ಲಿ ದೇವರನ್ನು ಕಾಣಬೇಕು. ಬದುಕಿನ ಸಂಧ್ಯಾಕಾಲದಲ್ಲಿ ಅವರನ್ನು ಗೌರವದಿಂದ ಕಾಣುವಂತಹ ಗುಣ ಬೆಳೆಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಪ್ರತಿಭಾನ್ವಿತರು ಸಿಗು ತ್ತಾರೆ. ಅದೇ ರೀತಿ ಸಂಸ್ಕಾರವಂತರ ಸಂಖ್ಯೆ ಹೆಚ್ಚಾಗಬೇಕು. ಮಕ್ಕಳು ನಡೆ ನುಡಿಗಳ ಮೂಲಕ ಪ್ರತಿಭಾನ್ವಿತರಾಗಬೇಕು ಎಂದು ಅಭಿಪ್ರಾಯಪಟ್ಟರು. ಗೋಡೇಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆಯಬೇಕು. ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳು ದೊರೆಯುತ್ತವೆ. ನಮ್ಮ ಮನೆಯ ಮಕ್ಕಳಿಗೆ ಶೈಕ್ಷಣಿಕ ಮಾತು ಔದ್ಯೋಗಿಕ ಅವಕಾಶಗಳು ದೊರೆಯಲು ಸಾಧ್ಯವಾಗುತ್ತದೆ. ವೀರಶೈವ ಲಿಂಗಾಯತ ನೌಕರರ ಸಂಘ ಶರಣರ ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ ಎಂದರು.
ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎಸ್.ಎನ್. ಸಿದ್ದರಾಮಪ್ಪ ಮಾತನಾಡಿ, ಬಸವಣ್ಣನ ಕಾಯಕ ತತ್ವ ಬದುಕಿನಲ್ಲಿ ಅಳವಡಿಸಿಕೊಂಡರೆ ಸಾಧನೆಗೆ ದಾರಿಯಾಗುತ್ತದೆ. ಅದೃಷ್ಟದ ಬದಲು ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಡಬೇಕು. ಬಿಇ ಮುಗಿಸಿದ ಶೇ.17ರಷ್ಟು ಜನರಿಗೆ ಮಾತ್ರ ಉದ್ಯೋಗದ ಅವಕಾಶವಿದೆ. ಯಾವುದೇ ವೃತ್ತಿ ಶಿಕ್ಷಣ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರ ವಹಿಸಬೇಕು ಎಂದರು.
3 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಬಸವಾದಿ ಶರಣರ ಆಶಯಗಳನ್ನು ಈಡೇರಿಸಲು, ಯುವ ಸಮುದಾಯದ ಜಾಗೃತಿಗೆ 2011ರಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಲಾಯಿತು. ಪ್ರತಿ ವರ್ಷ ವೃತ್ತಿ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಕಳೆದ 14 ವರ್ಷಗಳಿಂದ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ಬಿಇಒ ಎಲ್. ಜಯಪ್ಪ ಹೇಳಿದರು.
ಪರಿಶ್ರಮ ಅಗತ್ಯ: ಬರೀ ಅಂಕಗಳಿಂದ ಉತ್ತಮ ಬದುಕು ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ಕಠಿಣ ಪರಿಶ್ರಮ, ಒತ್ತಡ ನಿಭಾಯಿಸುವ ಸಾಮರ್ಥ್ಯ ಉತ್ತಮ ಬದುಕು ರೂಪಿಸುತ್ತದೆ. ಇದನ್ನು ಯುವ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು. ಗ್ರಾಮೀಣ ಮಕ್ಕಳ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಗ್ರಾಮನಿಧಿ ಎನ್ನುವ ಸಂಸ್ಥೆ ಆರಂಭಿಸಲಾಗುತ್ತಿದೆ. ಇದರ ಮೂಲಕ 30 ವಿಧದ ತರಬೇತಿ ನೀಡಿ ಶಿಕ್ಷಣ ಪರಿಪೂರ್ಣಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದು ಎಂಎಲ್‌ಸಿ ಕೆ.ಎಸ್. ನವೀನ್ ಹೇಳಿದರು.
ಚಿಂತಕ ಸಿದ್ದು ಯಾಪಲಪರವಿ ಮಾತನಾಡಿ, ಮಕ್ಕಳು ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು. ಮೊಬೈಲ್ ಸೇರಿ ಆಧುನಿಕ ತಂತ್ರಜ್ಞಾನವನ್ನು ಜ್ಞಾನಾರ್ಜನೆ, ಉತ್ತಮ ಬದುಕು ರೂಪಿಸಿಕೊಳ್ಳಲು ಬಳಸಿ ಕೊಳ್ಳಬೇಕು ಎಂದರು. ನೌಕರರ ಸಂಘದ ಅಧ್ಯಕ್ಷ ಶಶಿಧರ್, ಗೌರವಾಧ್ಯಕ್ಷ ಎಲ್. ಜಯಪ್ಪ, ಬಿ.ಜಿ. ಅರುಣಕುಮಾರ್, ಶಾಸಕ ಟಿ. ಎಚ್. ಬಸವರಾಜಪ್ಪ, ಜಿಪಂ ಮಾಜಿ ಸದಸ್ಯ ಆರ್. ಹನುಮಂತಪ್ಪ, ಬಿ.ಎಸ್. ದ್ಯಾಮಪ್ಪ, ಕೆ.ಎಸ್. ಕಲ್ಮಠ, ಎಂ. ಶಿವಲಿಂಗಪ್ಪ, ಉದ್ಯಮಿ ಪ್ರವೀಣ್ ದ್ಯಾಮಪ್ಪ, ದಿಲೀಪ್, ಮರಿದಿಮ್ಮಪ್ಪ, ಎಚ್.ಬಿ. ರವಿಕುಮಾರ, ಮಲ್ಲಿಕಾರ್ಜುನಪ್ಪ ಇತರರು ಇದ್ದರು.