ಪ್ರಮುಖ ಮುಖ್ಯಾಂಶಗಳು
ಚಳ್ಳಕೆರೆ:ತಾಲೂಕಿಗೆ ಶ್ರಮಿಕ ವಸತಿ ಶಾಲೆ ಮಂಜೂರಾಗಿದ್ದು, ಅಸಂಘಟಿತ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಜ್ಞಾನದ ಬೆಳಕಾಗಲಿದೆ.knowledge
ಕ್ಷೇತ್ರದ ಶಾಸಕರ ಪ್ರಯತ್ನದ ಫಲವಾಗಿ ಚಳ್ಳಕೆರೆ ತಾಲೂಕಿನಲ್ಲಿ ಶ್ರಮಿಕ ವಸತಿ ಶಾಲೆ ಸ್ಥಾಪನೆಗೆ ರಾಜ್ಯ ಸರ್ಕಾರ 2026-27ನೇ ಸಾಲಿನ ಆಯವ್ಯಯದಲ್ಲಿ 45 ಕೋಟಿ ರೂ. ಅನುದಾನ ನಿಗದಿಮಾಡಿದೆ.
ಈ ಹಿನ್ನೆಲೆಯಲ್ಲಿ ಪರಶುರಾಮಪುರ ಸಮೀಪದ ವೇದಾವತಿ ನದಿ ತೀರದಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣಕ್ಕೆ ತಾಲೂಕು ಆಡಳಿತ ಸ್ಥಳ ಪರಿಶೀಲನೆ ನಡೆಸಿ 10 ಎಕರೆ ಭೂಮಿ ಮಂಜೂರಾತಿಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಹತ್ತು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಶಾಲೆಯಲ್ಲಿ 6ರಿಂದ 12ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತದೆ. 45 ಕೋಟಿ ರೂ. ವೆಚ್ಚದ ಸುಸಜ್ಜಿತ ಶಾಲೆಯಲ್ಲಿ ಪ್ರತಿ ತರಗತಿಗೆ ತಲಾ ಏಳು ಕೊಠಡಿಗಳು, ಐದು ಪ್ರಯೋಗಾಲಯ ಕೊಠಡಿಗಳು, ಗ್ರಂಥಾಲಯ ಇರಲಿದೆ.
ಬಹು ಚಟುವಟಿಕೆ ಕೊಠಡಿ ಹಾಗೂ ಕ್ರೀಡಾ ಕೊಠಡಿ, ಆಡಳಿತ ಕಚೇರಿ, ಸಿಬ್ಬಂದಿ ಕೊಠಡಿ ಮತ್ತು ಬಾಲಕ ಹಾಗೂ ಬಾಲಕಿಯರ ವಸತಿ ನಿಲಯಗಳು, ಅಡುಗೆ ಮನೆ, ಭೋಜನಾಲಯ, ಶಿಕ್ಷಕರ ವಸತಿ ಗೃಹಗಳು, ಶೌಚಗೃಹಗಳ ವ್ಯವಸ್ಥೆ ಇರಲಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲೂ 350 ಮಕ್ಕಳ ಕಲಿಕೆಗೆ ಅಗತ್ಯ ಮೂಲ ಸೌಕರ್ಯ ಸಿಗುವ ರೀತಿಯಲ್ಲಿ ಅತ್ಯಾಧುನಿಕವಾಗಿ ಶಾಲೆ ನಿರ್ಮಾಣವಾಗಲಿದೆ.
ಬ್ರಿಟಿಷರ ವಿರುದ್ಧವೂ ಕಾರ್ಮಿಕ ಸಂಘಟನೆಗಳು ಹೋರಾಟ ನಡೆಸಿದ ಹಿನ್ನೆಲೆ ಇದೆ. ಸ್ವಾತಂತ್ರ್ಯಾನಂತರವೂ ಅಗತ್ಯ ಸೌಕರ್ಯಗಳಿಗೆ ಹೋರಾಟ ನಡೆಸುತ್ತಲೇ ಇವೆ. ಇದುವರೆಗೂ ಕಾರ್ಮಿಕರ ಬದುಕಿಗೆ ಸಾಮಾಜಿಕ ಭದ್ರತೆ ಮತ್ತು ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ. ಸರ್ಕಾರಗಳು ಖಾಸಗಿ ವಲಯದ ಪರವಾಗಿ ಆಡಳಿತ ನಡೆಸುತ್ತ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ.
ತಾಲೂಕಿನಲ್ಲಿ 12 ಸಾವಿರ ನೋಂದಾಯಿತ ಕಾರ್ಮಿಕರಿದ್ದರೂ ತಾಲೂಕು ಕೇಂದ್ರದಲ್ಲಿ ಕಾರ್ಮಿಕರ ಭವನ ಇಲ್ಲ. ಅವರ ಬದುಕಿಗೆ ಕೈಗಾರಿಕೆಗಳೂ ಇಲ್ಲ. ಕೂಲಿ ಹುಡುಕಿಕೊಂಡು ವಲಸೆ ಹೋಗುವ ಹೀನಾಯ ಸ್ಥಿತಿ ಕಾರ್ಮಿಕರದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆ ಬಿಡಿಸಿ ಪಾಲಕರು ತಮ್ಮ ಜೊತೆ ಕೂಲಿಗೆ ಕರೆದುಕೊಂಡು ಹೋಗುತ್ತಾರೆ.
ಕ್ಷೇತ್ರದ ಶಾಸಕರ ಇಚ್ಛಾಶಕ್ತಿಯಿಂದ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿ ಶಾಲೆ ಸ್ಥಾಪನೆ ಆಗುತ್ತಿರುವುದು ಬಯಲು ಸೀಮೆಯ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಕಾರ್ಮಿಕ ಸಂಘಗಳ ಮುಖಂಡರಾದ ಸಿ.ವೈ. ಶಿವರುದ್ರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಎಂ.ಎಚ್. ಪ್ರಭು, ಟಿ. ತಿಪ್ಪೇಸ್ವಾಮಿ.