leopard ಪರಶುರಾಮಪುರ ಸಮೀಪದ ದೊಡ್ಡಚೆಲ್ಲೂರು-ಕಡೇಹುಡೆ ಗ್ರಾಮಗಳ ನಡುವಿನ ಕುರುಚಲು ಕಾಡಿಗೆ ಹೊಂದಿಕೊಂಡಿರುವ ಹೊಲದ ಬಳಿ ಚಿರತೆಯೊಂದು ಅಲೆದಾಡುತ್ತಿರುವ ದೃಶ್ಯ. 
ಚಿತ್ರದುರ್ಗ

ದೊಡ್ಡಚೆಲ್ಲೂರು-ಕಡೇಹುಡೆ ಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷ leopard

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
  • ರೈತ ವಲಯದಲ್ಲಿ ತೀವ್ರ ಆತಂಕ
  • ಜಾನುವಾರುಗಳ ಮೇಲೆ ದಾಳಿ, ಬೋನು ಇಡಲು ಒತ್ತಾಯ
ಪರಶುರಾಮಪುರ: ಸಮೀಪದ ದೊಡ್ಡಚೆಲ್ಲೂರು ಹಾಗೂ ಕಡೇಹುಡೆ ಗ್ರಾಮಗಳ ನಡುವೆ ಇರುವ ಕುರುಚಲು ಕಾಡಿನಲ್ಲಿ ಕಳೆದರಡು ದಿನಗಳಿಂದ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯ ಜನರಲ್ಲಿ ಹಾಗೂ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.leopard
ಕಡೇಹುಡೆ ಗ್ರಾಮದ ರೈತರೊಬ್ಬರು ತಮ್ಮ ಹೊಲದಲ್ಲಿ ದಾಳಿಂಬೆ ಗಿಡಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದ್ದರು. ಗಿಡ ನೆಡುವ ಮುನ್ನ ಹೊಲದಲ್ಲಿ ತೋಡಲಾಗಿದ್ದ ಕುಳಿಗಳ ಬಳಿ ಪೂಜೆ ಕೈಗೊಳ್ಳುತ್ತಿದ್ದ ವೇಳೆ ಚಿರತೆಯು ಹೊಲದ ಸುತ್ತಲೂ ಮುಕ್ತವಾಗಿ ಅಡ್ಡಾಡುತ್ತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ ತಕ್ಷಣವೇ ಎಚ್ಚೆತ್ತ ರೈತರು, ಗಿಡಮರಗಳ ಮರೆಯಲ್ಲಿ ಅಡಗಿ ನಿಂತು ದೂರದಿಂದಲೇ ಚಿರತೆಯ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ದೊಡ್ಡಚೆಲ್ಲೂರು ಮತ್ತು ಕಡೇಹುಡೆ ಗ್ರಾಮದ ಕೆಲವು ಯುವಕರು ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ.

ಜಂಟಿ ಚಿರತೆಗಳ ಹಾವಳಿ?

ದೊಡ್ಡಚೆಲ್ಲೂರು ಬಳಿ ಹದಿನೈದು ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಒಂದು ಚಿರತೆ ಬಿದ್ದಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಸೆರೆಹಿಡಿದು ಚಿತ್ರದುರ್ಗದ ಜೋಗಿಮಟ್ಟಿ ಬಳಿಯ ಪ್ರಾಣಿಸಂಗ್ರಹಾಲಯಕ್ಕೆ ತಂದು ಬಿಟ್ಟಿದ್ದರು. ಆದರೆ, ಈ ಭಾಗದಲ್ಲಿ ಜಂಟಿ ಚಿರತೆಗಳಿದ್ದವು ಎನ್ನಲಾಗುತ್ತಿದ್ದು, ಸದ್ಯ ಕುರುಚಲು ಕಾಡಿನಲ್ಲಿ ಬೀಡುಬಿಟ್ಟಿರುವ ಮತ್ತೊಂದು ಚಿರತೆಯು ಸಂಜೆಯಾಗುತ್ತಿದ್ದಂತೆ ಕಡೇಹುಡೆ ಮತ್ತು ದೊಡ್ಡಚೆಲ್ಲೂರು ಸುತ್ತಮುತ್ತಲಿನ ಗ್ರಾಮಗಳ ಕುರಿ-ಮೇಕೆ ಹಟ್ಟಿಗಳ ಬಳಿ ಬಂದು ನಾಯಿಗಳನ್ನು ದೋಚಿ ತಿಂದು ಹೋಗುತ್ತಿದೆ.

ಕುರಿಗಾಹಿಗಳ ಮೇಲೂ ನಡೆದಿತ್ತು ದಾಳಿ

ಕೆಲವು ದಿನಗಳ ಹಿಂದೆಯಷ್ಟೇ ಇದೇ ಚಿರತೆಯು ಇಲ್ಲಿನ ಇಬ್ಬರು ಕುರಿಗಾಹಿಗಳ ಮೇಲೆ ದಾಳಿ ನಡೆಸಿ, ಕಚ್ಚಿ ತೀವ್ರವಾಗಿ ಗಾಯಗೊಳಿಸಿತ್ತು. ಗಾಯಾಳುಗಳನ್ನು ಪರಶುರಾಮಪುರ ಹಾಗೂ ಚಳ್ಳಕೆರೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಗ್ರಾಮಸ್ಥರು ಸ್ಮರಿಸಿದ್ದಾರೆ.

ಬೋನು ಇಡಲು ಗ್ರಾಮಸ್ಥರ ಆಗ್ರಹ

ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಪರಶುರಾಮಪುರ ಉಪವಲಯ ಹಾಗೂ ಚಳ್ಳಕೆರೆ ವಲಯ ಅರಣ್ಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಚಿರತೆ ಸೆರೆಹಿಡಿಯಲು ಸೂಕ್ತ ಸ್ಥಳದಲ್ಲಿ ಬೋನು ಇಡಬೇಕು. ಜೊತೆಗೆ ಹೆಚ್ಚುವರಿಯಾಗಿ ಈ ಭಾಗಕ್ಕೆ ಇಲಾಖೆಯ ಸಿಬ್ಬಂದಿಯನ್ನು ಗಸ್ತಿಗೆ ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.