ಚಳ್ಳಕೆರೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಚಿವ ಟಿ. ರಘುಮೂರ್ತಿ ಉದ್ಘಾಟಿಸಿದರು. ಬಿ.ಸಿ. ಸಂಜೀವಮೂರ್ತಿ, ಎಂ. ರವೀಶ್ ಇತರರಿದ್ದರು. Rajyothsava
ಚಿತ್ರದುರ್ಗ

ಕನ್ನಡ ಭಾಷೆ ಬದುಕಿನ ಅಸ್ತಿತ್ವ

ಚಳ್ಳಕೆರೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಚಳ್ಳಕೆರೆ: ಕನ್ನಡ ಭಾಷಾ ಜಾಗೃತಿಗೆ ಪ್ರತಿಯೊಬ್ಬರ ಸಹಭಾಗಿತ್ವ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು.

ನಗರದ ಹೊರವಲಯದ ಶ್ರೀ ಸಾಯಿ ಗಣೇಶ ಬಡಾವಣೆಯಲ್ಲಿ ಭಾನುವಾರ ನಗರಂಗೆರೆ ಗ್ರಾಪಂ ಹಿತ ರಕ್ಷಣಾ ವೇದಿಕೆ, ಮೂರ್ತಿ ಇಂಡಸ್ಟ್ರೀಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆಗೆ ಸೀಮಿತ ಆಗಬಾರದು. ಪ್ರತಿದಿನದ ಬದುಕಿನ ಅಸ್ತಿತ್ವದಂತೆ ಕಾಣಬೇಕು ಎಂದರು.

ತಾಲೂಕಿನಲ್ಲಿ ಶ್ರೀಸಾಯಿ ಬಾಬಾ ಮಂದಿರ ಕಟ್ಟಿ, ಮಧ್ಯ ಕರ್ನಾಟಕದಲ್ಲಿ ಧಾರ್ಮಿಕ ಕೇಂದ್ರವಾಗಿ ಹೆಸರು ಮಾಡುವಲ್ಲಿ ಯಶಸ್ವಿಯಾದ ಬಿ.ಸಿ. ಸಂಜೀವಮೂರ್ತಿ ಅವರು ಗೋಶಾಲೆ ಆರಂಭ ಮಾಡಲು ಒಂದು ಎಕರೆ ಭೂಮಿ ಕೇಳಿದ್ದಾರೆ. ಒಳ್ಳೆಯ ಕಾರ್ಯಕ್ಕೆ ಸಹಕಾರ ಸದಾ ಇರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕತೆಗಾರ ತಿಪ್ಪಣ್ಣ ಮರಿಕುಂಟೆ, ಸಾಮಾಜಿಕ ಹೋರಾಟಗಾರ ಎಸ್.ಎಚ್. ಸೈಯದ್, ಕವಿ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ, ಡಾ. ನಾರಾಯಣಮೂರ್ತಿ ಸೇರಿದಂತೆ ನಗರಂಗೆರೆ ಪಂಚಾಯತಿ ವ್ಯಾಪ್ತಿಯಲ್ಲಿ 1600 ರಂಗೋಲಿ ಹಾಕಿ, ಬಹುಮಾನಕ್ಕೆ ಪಾತ್ರರಾದ ಮಹಿಳೆಯರನ್ನು ಅಭಿನಂದಿಸಲಾಯಿತು.

ಶಾಶ್ವತ ಗೋಶಾಲೆ ಆರಂಭಿಸಿ

ಶಿಮುಲ್ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಬರಗಾಲದ ಪರಿಸ್ಥಿತಿಗೆ ಎಲ್ಲವೂ ಸರ್ಕಾರ ನೀಡಲಾಗದು. ಬಯಲು ಸೀಮೆಯ ದನ, ಕರುಗಳ ಸಂರಕ್ಷಣೆಗೆ ಶಾಶ್ವತ ಗೋ ಶಾಲೆ ಆರಂಭಿಸಲು ಸಚಿವರು ಸ್ಥಳಾವಕಾಶ ಮಾಡಬೇಕು. ಯಾವುದೇ ಆರ್ಥಿಕ ನೆರವು ಕೇಳದೆ ಮೂಕ ಪ್ರಾಣಿಗಳ ಪೋಷಣೆ ಮಾಡುವ ಹೊಣೆಯನ್ನು ನಾವು ನಿರ್ವಹಿಸುತ್ತೇವೆ ಎಂದು ಸಚಿವರಲ್ಲಿ ಮನವಿ ಮಾಡಿದರು.

ಶ್ರೀ ರಾಮಕೃಷ್ಣ ಸೇವಾಶ್ರಮ ಶ್ರೀ ಜಪಾನಂದ ಶ್ರೀ, ಶ್ರೀ ನರಹರಿ ಸದ್ಗುರು ಪೀಠಾಧ್ಯಕ್ಷರಾದ ಡಾ.ವೈ. ರಾಜಾರಾಂ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಡಿಎಸ್ ತಾಲೂಕಾಧ್ಯಕ್ಷ ಪಿ. ತಿಪ್ಪೇಸ್ವಾಮಿ, ಮುಖಂಡ ಎಂ. ರವೀಶ್‌ಕುಮಾರ್, ಜಿ.ಆರ್. ಪುಷ್ಪಾ, ಜಿ.ಎಸ್. ರಶ್ಮಿ, ಶಾರದಾ, ಅರುಣಾ, ಅಪರ್ಣಾ, ಕವಿತಾ, ನಯನಾ, ಬಿ.ಸಿ. ಸತೀಶ್ ಕುಮಾರ್, ಬಿ.ಸಿ. ವೆಂಕಟೇಶ್ ಮೂರ್ತಿ ಇತರರಿದ್ದರು.

ಪ್ರಸ್ತುತ ರಾಜ್ಯದ ಬರಗಾಲದ ನಿವಾರಣೆಗೆ ಸರ್ಕಾರ ಸನ್ನದ್ಧವಾಗಿದೆ. ಬೆಳೆ ವಿಮೆ ಕಟ್ಟಿರುವ ರೈತರಿಗೆ 207 ಕೋಟಿ ರೂ. ವಿಮೆ ಬಿಡುಗಡೆ ಆಗಲಿದೆ. ಇದರಲ್ಲಿ 59 ಕೋಟಿ ರೂ. ಚಳ್ಳಕೆರೆ ತಾಲೂಕಿನ ರೈತರಿಗೆ ಸಿಗಲಿದೆ. ಮಳೆ ಕೊರತೆಯಿಂದ ಬಿತ್ತನೆ ಮಾಡದೇ ಇರುವ 1.5 ಲಕ್ಷ ಮತ್ತು ವಿಮೆ ಕಟ್ಟಿರುವ 3 ಲಕ್ಷ ರೈತರು ವಿಮೆ ಪಡೆಯಲು ಅರ್ಹರಾಗಿದ್ದಾರೆ.
ಟಿ. ರಘುಮೂರ್ತಿ ಸಚಿವ