ಹಿರಿಯೂರು ತಾಲೂಕಿನ ಹರಿಯಬ್ಬೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾಹಿತಿ ಜಡೇಕುಂಟೆ ಮಂಜುನಾಥ್, ಅಶೋಕ್, ರುದ್ರಮುನಿ ಇದ್ದರು.language
- ಕನ್ನಡ ಅನ್ನ ಕೊಡುವ ಮತ್ತು ಬದುಕು ನೀಡುವ ಭಾಷೆ
- ಸಾಹಿತಿ ಜಡೇಕುಂಟೆ ಮಂಜುನಾಥ್ ಅಭಿಪ್ರಾಯ
- ಹರಿಯಬ್ಬೆ ಕೆಪಿಎಸ್ ಶಾಲೆಯಲ್ಲಿ ಕನ್ನಡ ಜಾಗೃತಿ
ಹಿರಿಯೂರು: ಕನ್ನಡ ಅನ್ನ ಕೊಡುವ ಮತ್ತು ಬದುಕು ನೀಡುವ ಭಾಷೆಯಾಗಲು ಪ್ರಭುತ್ವದ ಪಾತ್ರ ಅತ್ಯಂತ ಮಹತ್ವವಾದುದು ಎಂದು ಸಾಹಿತಿ ಜಡೇಕುಂಟೆ ಮಂಜುನಾಥ್ ಹೇಳಿದರು.
ತಾಲೂಕಿನ ಹರಿಯಬ್ಬೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ನವೆಂಬರ್ ಬಂತೆಂದರೆ ಸಾಕು ಕನ್ನಡದ ಜಾಗೃತಿ ಪ್ರತಿಯೊಬ್ಬರಲ್ಲೂ ಪುಟಿದೇಳುತ್ತದೆ. ಇದಾಗಬಾರದು. ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡ ಮನೆ ಮಾತಾಗಬೇಕು ಎಂದರು.
ಕನ್ನಡ ಮಾತನಾಡುವ ಜನ ನಾಲ್ಕಾರು ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದರು. ಆಗ ಆಲೂರು ವೆಂಕಟರಾಯರಂತಹ ಕನ್ನಡದ ಪಿತಾಮಹರು ಹೋರಾಟಕ್ಕೆ ಚಾಲನೆ ನೀಡಿ 5 ದಶಕಗಳಿಗೂ ಹೆಚ್ಚು ಕಾಲ ಹೋರಾಡಿ ಮೈಸೂರು ರಾಜ್ಯ ಸ್ಥಾಪನೆಗೆ ಕಾರಣರಾದರು. ದೇವರಾಜು ಅರಸು ಮುಖ್ಯಮಂತ್ರಿ ಆದ ನಂತರ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು ಎಂದು ತಿಳಿಸಿದರು.
ಜಾಗತೀಕರಣದ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನ ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಹೋಗಲಾರಂಭಿಸಿದ ಕಾಲಘಟ್ಟದಲ್ಲಿ ಇಂಗ್ಲೀಷ್ ಕಲಿತವರಿಗೆ ಹೆಚ್ಚು ಉದ್ಯೋಗ ಸಿಗಲಾರಂಭಿಸಿದಾಗ ಕನ್ನಡದ ಅಭಿಮಾನದ ಪ್ರಶ್ನೆ ಜಾಗೃತವಾಯಿತು. ಕನ್ನಡ ಅನ್ನದ ಭಾಷೆಯಾಗಿ ಜನರ ಮನಸ್ಸಿನಲ್ಲಿ ಉಳಿದು ಹೋಯಿತು. ಕನ್ನಡ ಶಾಲೆಗಳು ಇಂದು ಅವನತಿಯ ಹಾದಿಯನ್ನು ಹಿಡಿದಿವೆ. ಇಂಗ್ಲೀಷ್ ವ್ಯಾಮೋಹ ಎಲ್ಲೆಡೆ ಮನೆ ಮಾಡಿದೆ ಎಂದರು.
ಯುವ ಪೀಳಿಗೆ ಮನಸ್ಸು ಮಾಡಲಿ
ಕನ್ನಡತನವನ್ನು ಉಳಿಸಿಕೊಂಡು ಅನ್ನ ಕೊಡುವ ಭಾಷೆಯನ್ನು ಕಲಿಯಬೇಕು. ಆ ಮೂಲಕ ಬದುಕು ಕಟ್ಟಿಕೊಳ್ಳಲು ಇಂದಿನ ಯುವ ಪೀಳಿಗೆ ಮನಸ್ಸು ಮಾಡಬೇಕು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನ್ಯ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಕನ್ನಡತನವನ್ನು ಮರೆಯಬಾರದು ಎಂದರು.
ಕನ್ನಡಿಗರು ಕನ್ನಡ ಮರೆತಿದ್ದೇವೆ
ತಾಲೂಕು ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ಕನ್ನಡ ಹೃದಯದ ಭಾಷೆಯಾದಾಗ ಮಾತ್ರ ನಾವು ಕನ್ನಡಿಗರು ಗಟ್ಟಿಯಾಗಲು ಸಾಧ್ಯ. ತಮಿಳಿಗರು, ಮರಾಠಿಗರು ದೇಶದ ಯಾವುದೇ ರಾಜ್ಯಗಳಿಗೆ ಹೋದರೂ ಅವರ ಮಾತೃ ಭಾಷೆಯನ್ನೇ ಮಾತನಾಡುತ್ತಾರೆ. ಆದರೆ ನಾವು ಕನ್ನಡಿಗರು ಕನ್ನಡವನ್ನು ಮರೆತಿದ್ದೇವೆ. ಇಂದಿನ ಪೀಳಿಗೆ ಇದನ್ನು ಗ್ರಹಿಸಬೇಕು. ಮಕ್ಕಳು ಹೆಚ್ಚು ಓದುವ ಕಡೆಗೆ ಮನಸ್ಸು ಮಾಡಬೇಕು ಎಂದರು.
ಉಪ ಪ್ರಾಚಾರ್ಯ ಎಂ.ಜಿ.ರುದ್ರಮುನಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಅರಿವು ಶಾಲಾ ಹಂತದಲ್ಲೇ ಗರಿಗೆದರಬೇಕು. ಆ ನಿಟ್ಟಿನಲ್ಲಿ ನಮ್ಮ ಹಿರಿಯೂರು ಶಿಕ್ಷಣ ಇಲಾಖೆ ಇಂತಹ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಹರಿಯಬ್ಬೆ ಪಬ್ಲಿಕ್ ಶಾಲೆಗೆ ಇಲ್ಲಿನ ಗೆಳೆಯರ ಬಳಗ ಸಂಪೂರ್ಣ ಸಹಕಾರ ನೀಡುತ್ತಿದೆ. ಹಲವು ಮಹನೀಯರನ್ನು ಈ ಶಾಲೆ ಕರೆಸಲು ಇಲ್ಲಿನ ಅನೇಕರು ನೆರವಾಗಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಶಕ್ತಿಗೆ ಉತ್ತೇಜನ ನೀಡಲು ಗೋಡೆ ಪತ್ರಿಕೆ ಮಾಡಲಾಗುವುದು ಎಂದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಆರ್.ಗೋವಿಂದರಾಜು, ಸದಸ್ಯ ಸುಭಾನ್ ಸಾಬ್, ಶಿಕ್ಷಕರಾದ ವಿಜಯಕುಮಾರ್, ಎಂ.ರಮೇಶ್, ಬಿ.ತಿಪ್ಪೇಸ್ವಾಮಿ, ಎನ್.ಪುಷ್ಪವತಿ, ಭಾಗ್ಯಮ್ಮ ಇದ್ದರು.
ರಮೇಶ್ ಸ್ವಾಗತಿಸಿದರೆ, ಸಪ್ತಗಿರಿ ವಂದಿಸಿದರು. ಬಿ.ಬಿ.ಜಾನ್ ನಿರೂಪಿಸಿದರು.