ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ಜೀವನಾಡಿ ವಿವಿ ಸಾಗರ ಜಲಾಶಯದಿಂದ 1 ವರ್ಷದಲ್ಲಿ 10 ಟಿಎಂಸಿ ನೀರು ಬಳಕೆಯಾಗಿದ್ದು, ಅಣೆಕಟ್ಟೆ ನೀರಿನ ಮಟ್ಟ 116.55 ಅಡಿಗೆ ಕುಸಿದಿದೆ. ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆ, ಭದ್ರಾ ಜಲಾಶಯದಲ್ಲಿ ನೀರಿನ ಅಲಭ್ಯದಿಂದ ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರಕ್ಕೆ ಹಂಚಿಕೆಯಾಗಿದ್ದ 2 ಟಿಎಂಸಿ ಅಡಿ ನೀರು ಈವರೆಗೂ ಅಣೆಕಟ್ಟೆಗೆ ಹರಿದಿಲ್ಲ. ಮುಂಗಾರು ಮಳೆ ಕೊರತೆ, ಭೀಕರ ಬರ, ಅಂತರ್ಜಲ ಕುಸಿತದಿಂದ ಎಲ್ಲೆಡೆ ಜನ& ಜಾನುವಾರುಗಳ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ.
ತಾಲೂಕಿನಲ್ಲಿ ಕೃಷಿ ನೀರಾವರಿ ವಿಸ್ತರಣೆ ಯಿಂದ ಜಲಾಶಯದ ನೀರಿನ ಬಳಕೆ, ಬೇಡಿಕೆ ಮಿತಿ ಮೀರಿದೆ. 2026 ರಲ್ಲಿ(ಫೆಬ್ರವರಿ, ಮೇ, ಸೆಪ್ಟೆಂಬರ್) ಅಚ್ಚುಕಟ್ಟು ಜಮೀನಿಗೆ 3 ಬಾರಿ ನೀರು ಹರಿಸಲಾಗಿದ್ದು (4 ಟಿಎಂಸಿ ಅಡಿ) ಇದರ ಜತೆಗೆ ವೇದಾವತಿ ನದಿಗೆ 0.25 ಟಿಎಂಸಿ, ಸುವರ್ಣಮುಖಿಗೆ 0.5 ಟಿಎಂಸಿ ಅಡಿ ನೀರು ಬಿಡಲಾಗಿದೆ. ವೇದಾವತಿ ಮತ್ತು ಸುವರ್ಣಮುಖಿ ನದಿಗೆ ಪ್ರಸಕ್ತ ವರ್ಷ 2 ಟಿಎಂಸಿ ಅಡಿ ನೀರು ಹರಿಸಲಾಗಿದೆ.
ಶತಮಾನದ ಇತಿಹಾಸವಿರುವ ವಿವಿ ಸಾಗರ ಜಲಾಶಯದ ನೀರಿನ ಬಳಕೆ ದಶಕಗಳ ಕಾಲ ಅಚ್ಚುಕಟ್ಟು ಪ್ರದೇಶಕ್ಕೆ ಸೀಮಿತವಾಗಿತ್ತು. ಇಂದು ಜಿಲ್ಲೆಯ ಕುಡಿವ ನೀರಿನ ಯೋಜನೆ ಗಳಿಗೆ ಆಸರೆಯಾಗಿದೆ. ಬಹುಗ್ರಾಮ, ಧರ್ಮಪುರ ಏತ ನೀರಾವರಿ, ಜಲಜೀವನ್ ಮಿಷನ್ ಕುಡಿವ ನೀರಿನ ಯೋಜನೆ ಮೂಲಕ ನೀರಿನ ಭವಿಷ್ಯ ಭದ್ರಗೊಳಿಸಲು ದಿಟ್ಟ ಹೆಜ್ಜೆ ಇಡಲಾಗಿದೆ. 30 ಟಿಎಂಸಿ ಅಡಿ(130 ಅಡಿ) ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 28 ಟಿಎಂಸಿ ನೀರು ಬಳಕೆಗೆ ಅವಕಾಶವಿದೆ. (60 ಅಡಿಗೆ ಡೆಡ್ ಸ್ಟೋರೇಜ್) ಅಣೆಕಟ್ಟು ಹೂಳು ಸಂಗ್ರಹದಿಂದ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ ಎನ್ನಲಾಗಿದೆ. ವಿವಿ ಸಾಗರ ಜಲಾಶಯದ ನೀರು ಶರವೇಗದಲ್ಲಿ ಖಾಲಿ ಯಾಗುತ್ತಿದ್ದು, ಲಭ್ಯವಿರುವ ನೀರನ್ನು ಬೇಕಾಬಿಟ್ಟಿ ಬಳಸಿದರೆ 2027ಕ್ಕೆ ಡೆಡ್ ಸ್ಟೋರೇಜ್ ತಲುಪುವ ಸಾಧ್ಯತೆ ಇದೆ. 2025ರಲ್ಲಿ 130 ಅಡಿ ಸಂಗ್ರಹವಿದ್ದ ಜಲಾಶಯ 2026ರಲ್ಲಿ 116 ಅಡಿಗೆ ಇಳಿದಿದೆ. 10 ಟಿಎಂಸಿ ಅಡಿ ನೀರನ್ನು ಬಳಕೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಕುಸಿತ ಕಂಡು ಅಭಾವ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಮಳೆಗಾಲದಲ್ಲಿ ನೀರಿನ ಬಳಕೆ ಹೆಚ್ಚಳ, ಸಂಗ್ರಹ ಕುಸಿತ ರೈತರಲ್ಲಿ ಆತಂಕ ಹೆಚ್ಚಿಸಿದೆ.
ತಾಲೂಕಿನ ಕರಿಯಾಲ ಸಮೀಪದ ಗಾಯತ್ರಿ ಜಲಾಶಯದ ನೀರು ಡೆಡ್ ಸ್ಟೋರೆಜ್ ತಲುಪಿದೆ. ಜೆಜಿ ಹಳ್ಳಿ&ಕಲ್ವಳ್ಳಿ ಭಾಗದಲ್ಲಿ ಅಂತರ್ಜಲ ಪಾತಾಳ ಸೇರಿದೆ. ಒಂದು ಕಡೆ ಸಮೃದ್ಧಿ, ಮತ್ತೊಂದೆಡೆ ಬರ ಎದುರಾಗಿದೆ. 0.97 ಟಿಎಂಸಿ ಅಡಿ ನೀರು ಸಂಗ್ರಹ ಸಾಮಾರ್ಥ್ಯದ ಗಾಯತ್ರಿ ಜಲಾಶಯ ಡೆಡ್ ಸ್ಟೋರೇಜ್ ತಲುಪಿದೆ. ತುಮಕೂರು ಜಿಲ್ಲೆಯ ಬೋರನಕಣಿವೆ, ಬುಕ್ಕಾಪಟ್ಟಣ, ಬೆಳ್ಳಾರ ಭಾಗದ ಮೈದಾನ ಪ್ರದೇಶದಿಂದ ಹರಿದು ಬರುವ ಸುವರ್ಣಮುಖಿ ನದಿ ಟಿಸಿಲುಗಳ ನೀರು ಜಲಾಶಯದ ಜಲ ಮೂಲ. ಪ್ರಸ್ತುತ ಜಲಾಶಯದಲ್ಲಿ 2 ಅಡಿ ಮಾತ್ರ ನೀರಿನ ಸಂಗ್ರಹವಿದೆ.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಿವಿ ಸಾಗರಕ್ಕೆ ಹಂಚಿಕೆಯಾಗಿದ್ದ 2 ಟಿಎಂಸಿ ನೀರು ಅಣೆಕಟ್ಟೆಗೆ ಇಲ್ಲಿವರೆಗೆ ಹರಿಸಿಲ್ಲ, ಹಿರಿಯೂರು ಉಪಚುನಾವಣೆ ಕಾರಣಕ್ಕೆ ಚಿತ್ರದುರ್ಗ ಶಾಖಾ ನಾಲೆಗೆ ತರಾತುರಿಯಲ್ಲಿ 3 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಎತ್ತಿನಹೊಳೆ ಯೋಜನೆಯಿಂದ ವಿವಿ ಸಾಗರಕ್ಕೆ ನೀರು ಹರಿಸಲಾಗಿದೆ ಎಂದು ಅಧಿಕಾರಿಗಳು ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ.ಕಸವನಹಳ್ಳಿ ರಮೇಶ್ ಅಧ್ಯಕ್ಷ, ತಾಲೂಕು ನೀರಾವರಿ ಹೋರಾಟ ಸಮಿತಿ.
ಭದ್ರಾ ಮೇಲ್ದಂಡೆ ಯೋಜನೆಯಡಿ ವಿವಿಎಸ್ ಡ್ಯಾಂಗೆ 10 ಟಿಎಂಸಿ ಅಡಿ ನೀರು ಹಂಚಿಕೆ ಮಾಡಬೇಕು, ಜಲಾಶಯದ ನೀರಿನ ಬಳಕೆ ಮಿತಿಮೀರಿದ್ದು, 2027ಕ್ಕೆ ಡೆಡ್ ಸ್ಟೋರೇಜ್ ತಲುಪುವ ಸಾಧ್ಯತೆ ಇದೆ. ಜೀವನಾಡಿ ವಿವಿಎಸ್ ಜಲಾಶಯ ಉಳಿವಿಗೆ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು.ಕೆ.ಟಿ.ತಿಪ್ಪೇಸ್ವಾಮಿ ಅಧ್ಯಕ್ಷ ಜಿಲ್ಲಾ ರೈತ ಸಂ.
2025ರಲ್ಲಿ ವಿವಿಎಸ್ ಜಲಾಶಯದಲ್ಲಿ 130 ಅಡಿ ನೀರಿನ ಸಂಗ್ರಹವಿತ್ತು, ಒಂದು ವರ್ಷದಲ್ಲಿ ಕುಡಿವ ನೀರು, ಅಚ್ಚುಕಟ್ಟು ಪ್ರದೇಶ, ವೇದಾವತಿ, ಸುವರ್ಣಮುಖಿ ನದಿಗೆ 10 ಟಿಎಂಸಿ ಅಡಿ ನೀರು ಹರಿಸಲಾಗಿದೆ, ಪ್ರಸ್ತುತ ಜಲಾಶಯದ ನೀರಿನ ಮಟ್ಟ 116 ಅಡಿಗೆ ಇಳಿದಿದೆ.ಜಯಕುಮಾರ್ ಎಇಇ. ನೀರಾವರಿ ಇಲಾಖೆ.