ಚಳ್ಳಕೆರೆ ನಗರದ ವಾಲ್ಮೀಕಿ ನಗರ ಕುವೆಂಪು ಶಾಲೆಯಲ್ಲಿ ಮಂಗಳವಾರ scienceವಿಜ್ಞಾನ ವಸ್ತು ಪ್ರದರ್ಶನಕ್ಕೆ ಬಿಇಒ‌ ಕೆ.ಎಸ್. ಸುರೇಶ್ ಚಾಲನೆ ನೀಡಿದರು. 
ಚಿತ್ರದುರ್ಗ

ಚಳ್ಳಕೆರೆ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆscience

ಪ್ರಮುಖ ಮುಖ್ಯಾಂಶಗಳು

  • ಬಿಇಒ ಕೆ.ಎಸ್. ಸುರೇಶ್ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ
  • ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಗುಣವಿರಲಿ
  • ತಾಲೂಕಿನ ವಿವಿಧ ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳಿಂದ ವೈಜ್ಞಾನಿಕ ಆವಿಷ್ಕಾರಗಳ ಪ್ರದರ್ಶನ

ಚಳ್ಳಕೆರೆ: ವಿದ್ಯಾರ್ಥಿಗಳು ಕೇವಲ ಪಠ್ಯವನ್ನು ಓದುವುದಕ್ಕಿಂತ ಹೆಚ್ಚಾಗಿ ವಾಸ್ತವ ನೆಲೆಗಟ್ಟಿನಲ್ಲಿ ಶಿಕ್ಷಣದ ದೃಷ್ಟಿಕೋನವನ್ನು ಅರ್ಥೈಸಿಕೊಳ್ಳಬೇಕು ಎಂದು ಚಳ್ಳಕೆರೆ ಬಿಇಒ (ಕ್ಷೇತ್ರ ಶಿಕ್ಷಣಾಧಿಕಾರಿ) ಕೆ.ಎಸ್. ಸುರೇಶ್ ಅವರು ಹೇಳಿದರು.

ಚಳ್ಳಕೆರೆ ನಗರದ ವಾಲ್ಮೀಕಿ ನಗರದ ಕುವೆಂಪು ಶಾಲೆಯಲ್ಲಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಇಒ ಸುರೇಶ್ ಅವರು, "ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ನಂಬಿಕೆ ಹುಟ್ಟಬೇಕು. ನಮ್ಮ ಸುತ್ತಮುತ್ತಲಿನ ವಾಸ್ತವದ ಸಂಗತಿಗಳು ಸೇರಿದಂತೆ ಭೂಪಟದ ಏಳು ಖಂಡಗಳಲ್ಲೂ ಏಕರೂಪತೆಯ ಫಲಿತಾಂಶವೇ ವಿಜ್ಞಾನ ಎನ್ನುವುದನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ, ಅನುಪಯುಕ್ತ ವಸ್ತುಗಳನ್ನು ವೈಜ್ಞಾನಿಕವಾಗಿ ಬಳಕೆ ಮಾಡುವ ಚಿಂತನೆಯನ್ನು ಬೆಳೆಸಿಕೊಳ್ಳಬೇಕು.

ಶಿಕ್ಷಣವು ಬದಲಾವಣೆಗೆ ಜಾಗೃತಿಯಾಗಬೇಕು ಮತ್ತು ಮೂಢನಂಬಿಕೆಯಿಂದ ಹೊರತಾಗಿ ಸಮಾಜ ಕಟ್ಟುವ ಯೋಚನೆ ಹುಟ್ಟಬೇಕು. ಶಾಲಾ ಹಂತದಲ್ಲಿ ಆಯೋಜಿಸುವ ಇಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು," ಎಂದು ಸಲಹೆ ನೀಡಿದರು.

ಗುಣಮಟ್ಟ ಕುಂಠಿತದ ಕಳವಳ

ನಿವೃತ್ತ ಪ್ರಾಚಾರ್ಯ ಡಾ. ಸಿ. ಶಿವಲಿಂಗಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಪರ ಬದಲಾವಣೆಗಳು ಕಾಣುತ್ತಿದ್ದರೂ, ಬಡ ಮಕ್ಕಳಿಗೆ ಸಮಾನ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ನೆಲೆ ಉಳಿಯಬೇಕು ಎನ್ನುವ ಚಿಂತೆ ಇರಬೇಕು. ಹೆಣ್ಣುಮಕ್ಕಳ ಪ್ರಗತಿ ಶಿಕ್ಷಣದಲ್ಲಿ ಆಗಬೇಕು. ಪ್ರಸ್ತುತ ಸ್ಪರ್ಧಾತ್ಮಕ ಸಮಾಜದಲ್ಲಿ ವಿದ್ಯಾರ್ಥಿಗಳಲ್ಲಿ ಪರಿಶ್ರಮ ಅಗತ್ಯ. ಕುಟುಂಬ ಮತ್ತು ಶಿಕ್ಷಕರ ಮೌಲ್ಯವನ್ನು ಕಾಪಾಡುವ ರೀತಿಯಲ್ಲಿ ವಿದ್ಯಾರ್ಥಿಗಳು ಬದ್ಧತೆಯಿಂದ ಕಲಿಯಬೇಕು ಎಂದರು.

ಅಲ್ಲದೆ, ಪರೀಕ್ಷಾ ಪದ್ಧತಿಯಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

"ನೂರು ಅಂಕಗಳಿಗೆ ಪರೀಕ್ಷೆ ಬರೆಯುವ ಪದ್ಧತಿಯನ್ನು ಈಗ ಎಂಬತ್ತು ಅಂಕಕ್ಕೆ ಇಳಿಸಲಾಗಿದೆ. ಇದರಲ್ಲೂ ಶಾಲೆಯಿಂದ ನೀಡುವ ಆಂತರಿಕ ಇಪ್ಪತ್ತು ಅಂಕಗಳ ಜತೆಗೆ ಕೇವಲ ಹದಿನೈದು ಅಂಕ ಪಡೆದರೆ ಪಾಸು ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟವು ಕುಂಠಿತಗೊಳ್ಳುತ್ತದೆ" ಎಂದು ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ವಿವಿಧ ಪ್ರೌಢ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ವಿಭಿನ್ನ ಮಾದರಿಯ ವಿಜ್ಞಾನ ಆವಿಷ್ಕಾರಗಳನ್ನು ಸಿದ್ಧಪಡಿಸಿ ಬಹಳ ಆಸಕ್ತಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಿ.ಟಿ. ಮಂಜುನಾಥ ಸ್ವಾಮಿ, ಶಿಕ್ಷಣ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.