ಎಂ. ಯೋಗೀಶ್, ಹೊಸದುರ್ಗ
ಪಟ್ಟಣದ ವಿನಾಯಕ ರಂಗಮಂದಿರದಲ್ಲಿ ಅಕ್ಟೋಬರ್ 11ರಿಂದ ಆರಂಭವಾಗಲಿರುವ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಶರನ್ನವರಾತ್ರಿ ದಸರಾ ಮಹೋತ್ಸವದ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. Navadurga festival
ಹತ್ತು ದಿನಗಳ ಕಾಲ ದುರ್ಗಾ ಸೇವಾ ಸಮಿತಿ ನೇತೃತ್ವದಲ್ಲಿ ಹೊಸದುರ್ಗ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರತಿ ವರ್ಷ ದುರ್ಗಾಪರಮೇಶ್ವರಿ ದೇವಿ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಈ ಬಾರಿ 9ನೇ ವರ್ಷದ ಆಚರಣೆಯಾಗಿರುವುದರಿಂದ ನವದುರ್ಗೆಯರು ಸೇರಿದಂತೆ ದೇವಿಯ ಹತ್ತು ಮೂರ್ತಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಕೆಕ್ಕಾರು ಗ್ರಾಮದ ವಿಗ್ರಹ ಶಿಲ್ಪಿ ಜೆ.ಡಿ. ಭಟ್ ನೇತೃತ್ವದ ಹತ್ತು ಜನರ ತಂಡವು ಕಳೆದ ಹದಿನೈದು ದಿನಗಳಿಂದ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದು, ಕೆಲಸ ಅಂತಿಮ ಹಂತದಲ್ಲಿದೆ. ಮೂರ್ತಿಗಳ ನಿರ್ಮಾಣಕ್ಕಾಗಿ ಕುಂದಾಪುರದಿಂದ ತರಲಾದ ವಿಶೇಷ ಜೇಡಿಮಣ್ಣು ಬಳಸಲಾಗುತ್ತಿದೆ. ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ನೈಸರ್ಗಿಕ ಬಣ್ಣಗಳು, ರೇಷ್ಮೆ ವಸ್ತ್ರ ಹಾಗೂ ಕಸೂತಿ ಆಭರಣಗಳನ್ನು ಬಳಸಿ ಮೂರ್ತಿಗಳಿಗೆ ನೈಜ ಕಳೆ ತರಲಾಗುತ್ತಿದೆ.
ನವದುರ್ಗೆಯರ ಪ್ರತಿಷ್ಠಾಪನೆಗಾಗಿ ಮುಖ್ಯ ವೇದಿಕೆಯಲ್ಲಿ ಹತ್ತು ಮಂಟಪಗಳನ್ನು ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಪ್ರತಿದಿನ ಹೋಮ-ಹವನ ನೆರವೇರಿಸಲು ಬೃಹತ್ ಯಾಗಶಾಲೆ ನಿರ್ಮಿಸಿ, ಐದು ಹೋಮಕುಂಡಗಳನ್ನು ಸಿದ್ಧಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 50 ಅಡಿ ಅಗಲ ಹಾಗೂ 60 ಅಡಿ ಉದ್ದದ ಬೃಹತ್ ವೇದಿಕೆ ಸಜ್ಜಾಗಿದೆ.
ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಪಟ್ಟಣ ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲಿ ಬೃಹತ್ ಸ್ವಾಗತ ಗೋಪುರಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ ಹತ್ತು ದಿನಗಳ ಕಾಲ ಹೊಸದುರ್ಗದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮ ಮನೆಮಾಡಲಿದೆ.
ದುರ್ಗಾಪರಮೇಶ್ವರಿ ಶರನ್ನವರಾತ್ರಿ ಉತ್ಸವವು ಹೊಸದುರ್ಗ ಪಟ್ಟಣದ ಪ್ರಮುಖ ಹಬ್ಬವಾಗಿ ಗುರುತಿಸಿಕೊಂಡಿದೆ. ಜಾತಿ, ಮತ, ಧರ್ಮದ ಭೇದವಿಲ್ಲದೆ ಸಾರ್ವಜನಿಕರೆಲ್ಲರೂ ಒಟ್ಟಾಗಿ ಇದನ್ನು ಆಚರಿಸುತ್ತಾರೆ. ಒಂಬತ್ತು ವರ್ಷಗಳ ಆಚರಣೆಯನ್ನು ಒಂದು ಸಂಕಲ್ಪ ಎಂದು ಪರಿಗಣಿಸಲಾಗಿದ್ದು, ಈ ಬಾರಿಯ ಉತ್ಸವವು ಎರಡನೇ ಸಂಕಲ್ಪದ 9ನೇ ವರ್ಷದ ಆಚರಣೆಯಾಗಿದೆ. ದ್ವಿತೀಯ ಸಂಕಲ್ಪದ ಕೊನೆಯ ವರ್ಷವಾದ್ದರಿಂದ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ನವದುರ್ಗೆಯರ ಸ್ಥಾಪನೆಯು ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮೂರ್ತಿಗಳನ್ನು ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
9ನೇ ವರ್ಷದ ದಸರಾ ಉತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ. ಭಕ್ತರ ಸಹಕಾರದಿಂದ ಹೊಸದುರ್ಗ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಂತಿಮ ಹಂತದ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.ಟಿ. ಮಂಜುನಾಥ್, ಅಧ್ಯಕ್ಷರು, ದುರ್ಗಾ ಸೇವಾ ಸಮಿತಿ.
ಹೊಸದುರ್ಗದ ದಸರಾ ಉತ್ಸವ ಊರ ಹಬ್ಬವಾಗಿ ಮಾರ್ಪಟ್ಟಿದೆ. ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ರೂಪಿತಗೊಂಡಿವೆ. ಹತ್ತು ದಿನಗಳ ಕಾಲ ಪಟ್ಟಣದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಲಿದ್ದು, ನವದುರ್ಗೆಯರ ಆರಾಧನೆಗೆ ಭಕ್ತ ಸಮೂಹ ಸಜ್ಜಾಗಿದೆ.ಕೆ.ಆರ್. ಪ್ರವೀಣ್, ಮಾಜಿ ಪುರಸಭಾ ಸದಸ್ಯರು.