ಖಾಸಗಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿರುವ ಅವ್ಯವಸ್ಥೆ.  
ಚಿತ್ರದುರ್ಗ

ಅವ್ಯವಸ್ಥೆ ತಾಣ ಹೊಸದುರ್ಗ ಖಾಸಗಿ ಬಸ್ ನಿಲ್ದಾಣ

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ
  • ದುರ್ವಾಸನೆ ಬೀರುವ ಶೌಚಗೃಹಗಳು
ಎಂ. ಯೋಗೀಶ ಹೊಸದುರ್ಗ
ಪ್ರಯಾಣಿಕರ ಅನುಕೂಲಕ್ಕೆ ಜನರ ತೆರಿಗೆ ಹಣದಲ್ಲಿ ಪಟ್ಟಣದಲ್ಲಿ ನಿರ್ಮಿಸಿದ ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿದೆ.
ಇಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಚರಂಡಿ ಮೇಲೆ ಸ್ಲಾೃಬ್ ಹಾಕಿಲ್ಲ. ಪ್ರಯಾಣಿಕರು ಕುಳಿತುಕೊಳ್ಳಲು ಜಾಗವಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ವಾಹನಗಳ ಸಂಚಾರವಿದ್ದರೂ ನಿಲ್ದಾಣದಲ್ಲಿ ಹತ್ತಾರು ಸಮಸ್ಯೆಗಳಿವೆ. ನಿರ್ವಹಣೆ ಹೊಣೆ ಹೊತ್ತಿರುವ ಪುರಸಭೆ ಆಡಳಿತ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಹೆಸರಿಗೆ ಖಾಸಗಿ ಬಸ್ ನಿಲ್ದಾಣವಾದರೂ ಹೆಚ್ಚಾಗಿ ಬೈಕುಗಳು, ಕಾರುಗಳು, ಆಟೋಗಳು, ವಾಣಿಜ್ಯ ವಾಹನಗಳು ಸೇರಿ ಎಲ್ಲ ರೀತಿಯ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಸಾಮಾನ್ಯವಾಗಿದೆ. ಇದರಿಂದ ಬಸ್‌ಗಳು ಹಾಗೂ ಪ್ರಯಾಣಿಕರಿಗೆ ಸಂಚರಿಸುವುದೇ ಸವಾಲಾಗಿದೆ. ಕಾರುಗಳು ಹಾಗೂ ವಾಣಿಜ್ಯ ವಾಹನಗಳನ್ನು ನಿಲ್ದಾಣದ ಒಳಗೆ ಪಾರ್ಕಿಂಗ್ ಮಾಡಲಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಡೆಯಿಂದ ಬರುವ ಹಾಗೂ ಹೋಗುವ ಎಲ್ಲ ವಾಹನಗಳಿಗೂ ಖಾಸಗಿ ಬಸ್ ನಿಲ್ದಾಣ ರಸ್ತೆಯಂತಾಗಿದೆ.
ಕಳೆದ ವಾರ ನಿಲ್ದಾಣದಿಂದ ಹೊರ ಹೋಗುವಾಗ ಖಾಸಗಿ ಬಸ್ ಕಾರಿಗೆ ತಗುಲಿದ ಪರಿಣಾಮ ಗಲಾಟೆ ನಡೆದು ಬಸ್ ಚಾಲಕ ಕಾರಿನ ಮಾಲೀಕನಿಗೆ ದಂಡ ಕಟ್ಟುವಂತಾಗಿತ್ತು. ನೂರಾರು ಬೈಕ್‌ಗಳು, ಕಾರುಗಳು ನಿಲ್ದಾಣದ ತುಂಬಾ ನಿಲ್ಲುವುದರಿಂದ ಬಸ್‌ಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಪ್ರಯಾಣಿಕರಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಪುರಸಭೆ ಅಸಡ್ಡೆ ತೋರುತ್ತಿದೆ. ಶೌಚಗೃಹಗಳು ಗಬ್ಬೆದ್ದು ದುರ್ವಾಸನೆ ಬೀರುತ್ತಿವೆ. ಪ್ರಯಾಣಿಕರು ಕುಡಿಯುವ ನೀರನ್ನು ಖರೀದಿಸಿ ಕುಡಿಯಬೇಕಾದ ಸ್ಥಿತಿ ಇದೆ. ಬಸ್ ನಿಲ್ದಾಣದ ತುಂಬಾ ಕಸ ಬಿದ್ದಿರುತ್ತದೆ.
ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅಗತ್ಯದಷ್ಟು ಆಸನಗಳ ವ್ಯವಸ್ಥೆ ಇಲ್ಲ. ನಡೆದಾಡುವ ಸ್ಥಳದಲ್ಲಿ ವ್ಯಾಪಾರಿಗಳು ಅಂಗಡಿ ಇಟ್ಟುಕೊಂಡಿದ್ದಾರೆ. ನಿಲ್ದಾಣ ಸಣ್ಣಪುಟ್ಟ ಅಂಗಡಿಗಳಿಂದ ತುಂಬಿ ಸಂತೆಯಂತಾಗಿದೆ. ಮಳಿಗೆಗಳನ್ನು ಪಡೆದಿರುವ ವ್ಯಾಪಾರಿಗಳು ಪ್ರಯಾಣಿಕರು ಓಡಾಟಕ್ಕೆ ಇರುವ ಜಾಗವನ್ನೂ ಅತಿಕ್ರಮಿಸಿದ್ದಾರೆ.
ಪ್ರವೇಶ ದ್ವಾರದ ಬಾಗಿಲುಗಳಿಗೆ ಅಳವಡಿಸಿದ್ದ ಗಾಜುಗಳು ಒಡೆದು ಹೋಗಿ ಗುಟ್ಕಾದ ಕೆಂಪು ಕಲೆಗಳು ಅಸಹ್ಯ ಮೂಡಿಸುತ್ತಿವೆ. ಕಟ್ಟಡದಲ್ಲಿ ಗಿಡಗಳು ಬೆಳೆದು ಚಾವಣಿ ಮತ್ತು ಗೋಡೆಗಳು ಶಿಥಿಲಗೊಳ್ಳುತ್ತಿವೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ಅಲ್ಲಿನ ವಾತಾವರಣ ಕಂಡು ಬರುತ್ತಿದೆ.
ಬಸ್ ನಿಲ್ದಾಣದ ಮುಂಭಾಗದ ಚರಂಡಿ ಮೇಲಿನ ಸ್ಲಾೃಬ್‌ಗಳು ಹಾಳಾಗಿದೆ. ನಿಲ್ದಾಣಕ್ಕೆ ಬರುವ ಅನೇಕ ದ್ವಿಚಕ್ರ ವಾಹನ ಸವಾರರು ಚರಂಡಿಗೆ ಬಿದ್ದು ಗಾಯಯೊಂಡಿದ್ದರೂ ಆದರೂ ಸ್ಲಾೃಬ್ ಹಾಕುವ ಕಾರ್ಯ ಇಲ್ಲಿಯವರೆಗೆ ನಡೆದಿಲ್ಲ. ಬಸ್ ನಿಲ್ದಾಣದ ಆವರಣ ಬಹುತೇಕ ಅತಿಕ್ರಮಣವಾಗಿದೆ.
ಶ್ರೀ ಗುರು ಒಪ್ಪತ್ತಿನ ಸ್ವಾಮಿ ವಿರಕ್ತಮಠಕ್ಕೆ ಸೇರಿದ ಜಾಗವನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಉಚಿತವಾಗಿ ಪುರಸಭೆಗೆ ನೀಡಲಾಗಿತ್ತು. ನಿರ್ವಹಣೆ ಹೊಣೆ ಹೊತ್ತಿರುವ ಪುರಸಭೆ ಆಡಳಿತ ತನ್ನ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ನಿರ್ವಹಣೆ ಮಾಡುವಲ್ಲಿ ಸೋತಿರುವುದು ವಿಪರ್ಯಾಸ. ಪುರಸಭೆ ಆಡಳಿತ ಅಧಿಕಾರಿಗಳ ಕೈಗೆ ವರ್ಗಾವಣೆಯಾದ ನಂತರ ಅವ್ಯವಸ್ಥೆ ಹೆಚ್ಚಾಗಿದೆ ಎನ್ನುವುದು ಪ್ರಯಾಣಿಕರ ಆರೋಪವಾಗಿದೆ.