ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಗ್ರಾಮಸ್ಥರು ಸಮೃದ್ಧ ಮಳೆ, ಬೆಳೆಯಾಗಲಿ ಎನ್ನುವ ಸಂಕಲ್ಪದೊಂದಿಗೆ ಭಾನುವಾರ ಹೊರಬೀಡು ಆಚರಿಸಿದರು. Celebration 
ಚಿತ್ರದುರ್ಗ

ರಂಗವ್ವನಹಳ್ಳಿ ಗ್ರಾಮಸ್ಥರಿಂದ ಹೊರಬೀಡು ಆಚರಣೆ Celebration

ಪ್ರಮುಖ ಮುಖ್ಯಾಂಶಗಳು

  • ಚಳ್ಳಕೆರೆಯಲ್ಲಿ ವಿಶಿಷ್ಟ ಆಚರಣೆ
ಚಳ್ಳಕೆರೆ: ಸಮೃದ್ಧ ಮಳೆ, ಬೆಳೆ, ಗ್ರಾಮದ ಜನ, ಜಾನುವಾರುಗಳಿಗೆ ಒಳಿತಾಗಲಿ ಎನ್ನುವ ಸಂಕಲ್ಪದೊಂದಿಗೆ ತಾಲೂಕಿನ ರಂಗವ್ವನಹಳ್ಳಿ ಗ್ರಾಮಸ್ಥರು ಭಾನುವಾರ ಹೊರಬೀಡು ಆಚರಿಸಿದರು. Celebration
ಸಕಾಲಕ್ಕೆ ಮಳೆಯಾಗದೆ ಬರ ಆವರಿಸಿದ ಸಂದರ್ಭದಲ್ಲಿ ವರುಣನ ಕೃಪೆಗಾಗಿ ಊರಿನ ಬುಡ್ಡೆಕಲ್ಲಿಗೆ ನೂರೊಂದು ಕೊಡ ನೀರು ಸುರಿದು ಪೂಜೆ ನೆರವೇರಿಸುವುದು, ಕತ್ತೆಗಳಿಗೆ ಮದುವೆ ಮಾಡಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡುವುದು, ಗ್ರಾಮದ ದೇವಾಲಯಗಳಲ್ಲಿ ವೇದಗಳ ಪಠಣ ಮಾಡಿಸುವ ಆಚರಣೆಗಳು ಗ್ರಾಮೀಣ ಭಾಗದಲ್ಲಿ ಪ್ರಚಲಿತದಲ್ಲಿವೆ. ಅದೇ ರೀತಿ ಗ್ರಾಮಸ್ಥರು ಹೊರಬೀಡು ಆಚರಿಸುವ ಪದ್ಧತಿಯೂ ಇದೆ. ಹೊರಬೀಡು ಹೋಗುವ ವೇಳೆ ಊರ ಸುತ್ತ ಬೇಲಿ ಹಾಕಿ, ಒಂದು ದಿನ ಊರ ಒಳಗೆ ಯಾರೂ ಹೋಗದಂತೆ ನೋಡಿಕೊಳ್ಳುವುದು, ಹೊರಬೀಡಿನಿಂದ ಮರಳಿ ಬಂದಾಗ, ಗ್ರಾಮ ದೇವರಿಗೆ ಪೂಜೆ ಸಲ್ಲಿಸಿ, ಊರ ಸುತ್ತ ಮುಸುರೆ ಹಾಕಿ ಊರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಮನೆಯೊಳಗೆ ಪ್ರವೇಶ ಮಾಡುತ್ತಾರೆ. ಈಗಲೂ ಕೆಲ ಗ್ರಾಮಗಳಲ್ಲಿ ಹೊರಬೀಡು ಆಚರಿಸುವುದುಂಟು.
ಈ ಬಾರಿ ಮುಂಗಾರು ಮಳೆಯಾಗದೆ ನಿರೀಕ್ಷಿತ ಬಿತ್ತನೆ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡ ರಂಗವ್ವನಹಳ್ಳಿ ಗ್ರಾಮಸ್ಥರು ಹೊರಬೀಡು ಆಚರಿಸಿ ತಮಗೆ ಬಂದೊದಗಿರುವ ಸಂಕಷ್ಟ ನಿವಾರಿಸುವಂತೆ ದೇವರನ್ನು ಬೇಡಿಕೊಂಡಿದ್ದಾರೆ.
ಅಡುಗೆ ಪದಾರ್ಥಗಳನ್ನು ಕಟ್ಟಿಕೊಂಡು ಗ್ರಾಮದ ಹೊರವಲಕ್ಕೆ ತೆರಳಿದ ಗ್ರಾಮಸ್ಥರು ಹಸಿರು ವನಸಿರಿ ಮಧ್ಯೆ ಬಾಡೂಟ ತಯಾರಿಸಿ, ನೆಂಟರಿಷ್ಟರೊಂದಿಗೆ ಕುಟುಂಬ ಸದಸ್ಯರೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿದರು. ದಿನವಿಡೀ ಗ್ರಾಮೀಣ ಕ್ರೀಡೆ, ಜಾನಪದ ಹಾಡುಗಳನ್ನು ಹೇಳಿಕೊಂಡು ಸಂಭ್ರಮಿಸಿದರು.