ಬಸವರಾಜ್ ಖಂಡೇನಹಳ್ಳಿ ಹಿರಿಯೂರು
ತಾಲೂಕಿನ ಬಡ ರೋಗಿಗಳಿಗೆ ಸಂಜೀವಿನಿ ಯಾಗ ಬೇಕಿದ್ದ, ಇಲ್ಲಿನ ಸರ್ಕಾರಿ ಆಸ್ಪತ್ರೆಗೇ ತುರ್ತು ಸರ್ಜರಿಯ ಅಗತ್ಯವಿದೆ.
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯರ ಕೊರತೆ, ಶಿಥಿಲ ಗೊಂಡ ಕಟ್ಟಡ, ಮೂಲ ಸೌಲಭ್ಯ ಕೊರತೆ ಎದುರಿಸುತ್ತಿದೆ. ನಿತ್ಯ ತಾಲೂಕಿನ ವಿವಿಧೆಡೆಯಿಂದ 500-600 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೇ ರೋಗಿಗಳು ಹೈರಾಣಾಗಿದ್ದಾರೆ.
ಹಿರಿಯೂರಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಇಲ್ಲಿನ ಜನಸಂಖ್ಯೆ ಒಂದು ಲಕ್ಷದ ಸನಿಹಕ್ಕೆ ತಲುಪಿದೆ. ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿದೆ, ತಾಯಿ-ಮಗು, ಬಾಣಂತಿಯರ ವಾರ್ಡ್ಗಳಲ್ಲಿ ಛಾವಣಿ ಶಿಥಿಲಗೊಂಡು ಅದರ ತುಣುಕುಗಳು ಬಿದ್ದು ರೋಗಿಗಳು ಗಾಯಗೊಂಡಿರುವುದೂ ಉಂಟು. ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ, ಕುಡಿವ ನೀರಿನ ಸಮಸ್ಯೆ, ಶೌಚಗೃಹಗಳ ಸ್ಥಿತಿಯಂತೂ ಹೇಳತೀರದು. ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಕಾಯಿಲೆಗೆ ಮಾತ್ರೆ, ಚುಚ್ಚು ಮದ್ದು ಸಿಗುವುದು ಬಿಟ್ಟರೆ ದೊಡ್ಡ ಕಾಯಿಲೆಗಳಿಗೆ ಶಸ್ತ್ರ ಚಿಕಿತ್ಸೆ ಇರಲೀ ಕನಿಷ್ಠ ಔಷಧೋಪಚಾರವೂ ಸಿಗುವುದಿಲ್ಲ.
ತಾಲೂಕಿನ ಬಡ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 100 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡು 3 ವರ್ಷ ಕಳೆದರೂ ಜನಾರ್ಪಣೆಯಾಗಿಲ್ಲ. ನಗರದ ಹೊರವಲಯದ ಆದಿವಾಲ ಗೊಲ್ಲರಹಟ್ಟಿ ಸಮೀಪ ಸರ್ಕಾರಿ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಸ್ಪತ್ರೆ ಮಂಜೂರಾಗಿತ್ತು. ಬಡವರ ಬದುಕಿಗೆ ಸಂಜೀವಿನಿಯಾಗಬೇಕಿದ್ದ ಆಸ್ಪತ್ರೆ ಪಾಳು ಬೀಳುವ ಸ್ಥಿತಿ ತಲುಪಿದೆ. ಆರೋಗ್ಯ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳ ತಂಡ 2-3 ಬಾರಿ ಆಸ್ಪತ್ರೆ ಕಟ್ಟಡ, ವೈದ್ಯಕೀಯ ಪರಿಕರ ಮೂಲ ಸೌಕರ್ಯ ಕುರಿತು ಪರಿಶೀಲನೆ ನಡೆಸಿತ್ತು. ಆಸ್ಪತ್ರೆ ಸ್ಥಳಾಂತರಕ್ಕೆ ಮೀನ ಮೇಷ ಎಣಿಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಟ್ಟಡ (ತಾಲೂಕು ಆಡಳಿತ ಸೌಧ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ತಾಪಂ ಕಟ್ಟಡ)ಉದ್ಘಾಟಿಸಲು ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪವೂ ಇದೆ.
ಹಿರಿಯೂರು ನಗರದಿಂದ ನೂತನ ಆಸ್ಪತ್ರೆ ತಲುಪಲು ಯಾವುದೇ ಸಾರಿಗೆ-ಸಂಪರ್ಕ ವ್ಯವಸ್ಥೆ ಇಲ್ಲ. ಕಿರಿದಾದ ರಸ್ತೆಯಲ್ಲಿ ವಾಹನಗಳ ಸಂಚಾರ ಕಷ್ಟಸಾಧ್ಯವಾಗಿದೆ. ದ್ವಿಪಥ ರಸ್ತೆ ಅಭಿವೃದ್ಧಿ, ಆಸ್ಪತ್ರೆ ಬಳಿ ಮೂಲ ಸೌಲಭ್ಯ ಅಭಿವೃದ್ಧಿ, ವೈದ್ಯಕೀಯ ಪರಿಕರ ಇತರ ಸೌಲಭ್ಯಕ್ಕೆ 50 ಕೋಟಿ ರೂ. ಅನುದಾನ ಅಗತ್ಯ ಇದೆ ಎನ್ನಲಾಗಿದೆ. ಹಿರಿಯೂರಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಅಪಘಾತ ವಲಯವಾಗಿ ಗುರುತಿಸಿಕೊಂಡಿದೆ. ರಾತ್ರಿ ಸಮಯದಲ್ಲಿ ಅಪಘಾತದಲ್ಲಿ ಗಾಯಗೊಂಡು ತುರ್ತು ಚಿಕಿತ್ಸೆಗೆ ಬರುವವರು ವೈದ್ಯರ ಕೊರತೆಯಿಂದ ಚಿಕಿತ್ಸೆ ಸಿಗದೆ ಒದ್ದಾಡುವುದು ಮಾಮೂಲಿಯಾಗಿದೆ. ರೋಗಿ ದಾಖಲಾದರೆ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ.
ಪ್ರತಿ ನಿತ್ಯ ತಜ್ಞ ವೈದ್ಯರು ಆಸ್ಪತ್ರೆಗೆ ಬಂದರೂ ಮಧ್ಯಾಹ್ನ 12.30ಕ್ಕೆ ಟೀ ಕುಡಿಯಲು ಹೋದವರು ನಾಪತ್ತೆ ಆಗುತ್ತಾರೆ. ವೈದ್ಯರು ಬರುತ್ತಾರೆ ಎಂದು ಗಂಟೆಗಟ್ಟಲೆ ಕಾಯುವ ರೋಗಿಗಳು ಸುಸ್ತಾಗಿ ತಮ್ಮ ಊರಿನತ್ತ ತೆರಳುತ್ತಾರೆ. ವೈದ್ಯರು ಲಕ್ಷಾಂತರ ರೂ. ಸಂಬಳ ಪಡೆದರೂ ವೃತ್ತಿಧರ್ಮ ಪಾಲಿಸದೇ ಮಧ್ಯಾಹ್ನದ ಅವಧಿಯಲ್ಲಿ ಖಾಸಗಿ ಕ್ಲಿನಿಕ್, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ದೂರು ಕೇಳಿಬಂದಿವೆ. ಉಳ್ಳವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಬಡವರಿಗೆ ಸರ್ಕಾರಿ ಆಸ್ಪತ್ರೆಯೊಂದೇ ಗತಿ. ವೈದ್ಯರಿದ್ದರೂ ಸಕಾಲಕ್ಕೆ ಆರೋಗ್ಯ ಸೇವೆ ಸಿಗುತ್ತಿಲ್ಲ, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂಬ ಆರೋಪ ರೋಗಿಗಳದ್ದಾಗಿದೆ.
ಹಿರಿಯೂರಿನ ಸರ್ಕಾರಿ ಆಸ್ಪತ್ರೆ ವೈದ್ಯರು ತಮ್ಮ ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ಗಳಲ್ಲಿ ಕೆಲಸ ಮಾಡುತ್ತಾರೆ ಎಂಬ ವ್ಯಾಪಕ ದೂರು ಕೇಳಿಬಂದಿದೆ. ಬಡ ರೋಗಿಗಳಿಗೆ ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೇ ಸರ್ಕಾರ, ಆರೋಗ್ಯ ಇಲಾಖೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.ಚಂದ್ರಹಾಸ್ ಬಿಜೆಪಿ ಮುಖಂಡ
ಬಡ ಜನರಿಗೆ ಸಕಾಲಕ್ಕೆ ಆರೋಗ್ಯ ಸೇವೆ ಸಿಗಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಿರಿಯೂರು ತಾಲೂಕಿನ ಜನರ ಪಾಲಿಗೆ ಸಂಜೀವಿನಿಯಾಗಿದೆ, ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಕ, ಮೂಲ ಸೌಕರ್ಯ ಕಲ್ಪಿಸಿ ಆರೋಗ್ಯ ಸೇವೆಗೆ ಮುಕ್ತಗೊಳಿಸಬೇಕು.ಚಮನ್ ಷರೀಫ್ ಯುವ ಪ್ರಶಸ್ತಿ ಪುರಸ್ಕೃತ
ವೈದ್ಯರು ತಮ್ಮ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲೇ ಇದ್ದು ವೈದ್ಯಕೀಯ ಸೇವೆ ಸಲ್ಲಿಸುವಂತೆ ಸೂಚಿಸಲಾಗಿದೆ. ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ನಲ್ಲಿ ಇದ್ದರೆ ಕ್ರಮ ಜರುಗಿಸಲಾಗುವುದು, ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ.ಡಾ. ಜಯರಾಮ್ ಎಎಂಒ, ಹಿರಿಯೂರು ತಾಲೂಕು ಆಸ್ಪತ್ರೆ