ಚಿತ್ರದುರ್ಗದ ಎಸ್‌ಜೆಎಂ ಡೆಂಟಲ್ ಕಾಲೇಜಿನಲ್ಲಿ ಸ್ಥಾಪಿಸಲಿರುವ ಕಮಾಂಡ್ ಸೆಂಟರ್ ಸ್ಥಳವನ್ನು ಗುರುವಾರ ಎಸ್‌ಪಿ ಕುಶಾಲ್ ಚೌ ಕ್ಸೆ ಪರಿಶೀಲಿಸಿದರು. ಎಎಸ್‌ಪಿ ಡಾ. ಶಿವಕುಮಾರ್, ಡಿವೈಎಸ್‌ಪಿ ಅರುಣ್‌ನಾಗೇಗೌಡ ಇತರರು ಇದ್ದಾರೆ, 
ಚಿತ್ರದುರ್ಗ

ಹಿಂದೂ ಮಹಾ ಗಣಪತಿ ಶೋಭಾಯಾತ್ರೆಗೆ ಭಾರೀ ಪೊಲೀಸ್ ಸರ್ಪಗಾವಲು

೧೦ ಕಡೆ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ನಗರದಲ್ಲಿ ಅ.೩ರಂದು ಆಯೋಜಿಸಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಗೆ ಕೈಗೊಳ್ಳುತ್ತಿರುವ ಸಿದ್ಧತೆಗಳು ಅಂತಿಮ ಘಟ್ಟ ತಲುಪುತ್ತಿವೆ.

ಅದ್ಧೂರಿ ಹಾಗೂ ವೈಭವದ ದೇಶದ ೨ನೇ ಶೋಭಾಯಾತ್ರೆಗೆ ಒಂದೆಡೆ ಉತ್ಸವ ಸಮಿತಿ, ಸುರಕ್ಷತೆ, ಶಾಂತಿಯುತ ಯಾತ್ರೆಯ ಯಶಸ್ಸಿಗೆ ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಣಪತಿ ಪ್ರತಿಷ್ಠಾಪಿಸಿರುವ ನಗರದ ಶ್ರೀ ಜಗದ್ಗುರು ಜಯದೇವ ಕ್ರೀಡಾಂಗಣದಿಂದ ಅಂದು ಬೆಳಗ್ಗೆ ೧೦.೩೦ಕ್ಕೆ ವೇದಿಕೆ ಕಾರ್ಯಕ್ರಮದ ಬಳಿಕ ಆರಂಭವಾಗಲಿರುವ ಶೋಭಾಯಾತ್ರೆ, ಬಿಡಿ ರಸ್ತೆ ಹಾಗೂ ಹೊಳಲ್ಕೆರೆ ರಸ್ತೆ ಮಾರ್ಗದ ಮೂಲಕ ಚಂದ್ರವಳ್ಳಿಯಲ್ಲಿ ರಾತ್ರಿ ಸಮಾಪನಗೊಳ್ಳಲಿದೆ.

ಯಾತ್ರೆ ಯಶಸ್ವಿಗೆ ನಿಯೋಜಿಸಿರುವ ಬಂದೋಬಸ್ತ್ ಕುರಿತಂತೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ ಕುಶಾಲ್ ಚೌಕ್ಸೆ, ಅಂದಾಜು ೪ ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿರುವ ಈ ಯಾತ್ರೆಗೆ ಅಗತ್ಯ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

೪ ಸಾವಿರ ಪೊಲೀಸರು

ಆರು ಎಸ್‌ಪಿ, ನಾಲ್ವರು ಎಎಸ್‌ಪಿ, ಆರು ಜನ ಪ್ರೊಬೇಷನರಿ ಎಎಸ್‌ಪಿ, ೧೫ ಡಿವೈಎಸ್‌ಪಿ, ೫೦ ಇನ್ಸ್ಪೆಕ್ರ‍್ಸ್, ೬೮ ಪಿಎಸ್‌ಐ, ೨೧೮ ಪ್ರೊಬೇಷನರಿ ಪಿಎಸ್‌ಐ, ೧೫೫ ಎಎಸ್‌ಐ, ೧೯೯೪ ಎಚ್‌ಸಿ/ಪಿಸಿ, ೭೫೦ ಗೃಹರಕ್ಷಕದಳದ ಸಿಬ್ಬಂದಿ, ೧೬ ಕೆಎಸ್‌ಆರ್‌ಪಿ, ೧೪ ಡಿಎಆರ್, ೩ ಕ್ಯೂಆರ್‌ಟಿ ಸೇರಿ ಅಂದಾಜು ೪ ಸಾವಿರ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ೨೬ ವಾಚ್‌ಟವರ್, ೬೭ ವಿಡಿಯೊ ಕ್ಯಾಮರಾ ಚಿತ್ರೀಕರಣ ಸಿಬ್ಬಂದಿ, ೪೯ ಸ್ಕÊೆ ಸೆಂಟ್ರಿಗಳು, ೫ ಡ್ರೋನ್ ಹಾಗೂ ೧೫೯ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಮಿತಿಯ ೧೦೦ ಸ್ವಯಂ ಸೇವಕರು ಪೊಲೀಸರೊಂದಿಗೆ ಕೈ ಜೋಡಿಸಲಿದ್ದಾರೆ.

ಮಹಿಳಾ ತಂಡ

ಮಹಿಳೆಯರು, ಮಕ್ಕಳ ಸುರಕ್ಷತೆಗಾಗಿ ಪೊಲೀಸ್ ಮಹಿಳಾ ತಂಡ, ಪಿಕ್‌ಪಾಕೆಟ್, ಸರಗಳ್ಳತನ ಮತ್ತಿತರ ಕೃತ್ಯಗಳ ಹತೋಟಿಗೆ ವಿವಿಧ ಜಿಲ್ಲೆಗಳ ಕ್ರÊೆಂ ಸಿಬ್ಬಂದಿ ಮೆರವಣಿಗೆಯಲ್ಲಿ ಇರುತ್ತಾರೆ. ನಗರದ ಎಸ್‌ಜೆಎಂ ಡೆಂಟಲ್ ಕಾಲೇಜಿನಲ್ಲಿ ಕಮಾಂಡ್ ಸೆಂಟರ್ ಹಾಗೂ ಇದಕ್ಕೆ ಪೂರಕವಾಗಿ ಮೊಬೈಲ್ ಕಮಾಂಡ್ ಸೆಂಟರ್ ಹುಬ್ಬಳ್ಳಿಯಿಂದ ತರಿಸಲಾಗಿದೆ. ಕಿಡಿಗೇಡಿಗಳ ನಿಯಂತ್ರಣಕ್ಕೆ ೪ ಪಿಕ್‌ಅಪ್ ತಂಡಗಳಿರುತ್ತವೆ.

ಅಽಕಾರಿಗಳ ಸಂವಹನಕ್ಕಾಗಿಯೇ ಹೆಚ್ಚುವರಿ ಕಂಟ್ರೋಲ್ ರೂಂ. ಸ್ಥಾಪಿಸಲಾಗಿದೆ. ೧೮ ಸೆಕ್ಟರ್‌ಗಳನ್ನಾಗಿ ವಿಂಗಡಿಸಿರುವ ಮೆರವಣಿಗೆ ಮಾರ್ಗದಲ್ಲಿ ಮೊಬೈಲ್ ಪೆಟ್ರೋಲಿಂಗ್ ಇರುತ್ತದೆ. ಮೂವರು ವಲಯ ಮ್ಯಾಜಿಸ್ಟ್ರೇಟ್‌ಗಳನ್ನೂ ಜಿಲ್ಲಾಽಕಾರಿ ನೇಮಿಸಿದ್ದಾರೆ. ಮೆರವಣಿಗೆಯಲ್ಲಿ ಕಡಿಮೆ ಡೆಸಿಬಲ್‌ನ ಡಿಜೆ ಇರುತ್ತದೆ ಎಂದು ಚೌಕ್ಸೆ ತಿಳಿಸಿದರು.

ಕುಡಿವ ನೀರಿನ ವ್ಯವಸ್ಥೆ ಇರುತ್ತದೆ. ಪ್ರಸಾದ ವಿತರಣೆ ಕುರಿತಂತೆ ನಿಗಾ ವಹಿಸಲಾಗಿದೆ. ಮೆರವಣಿಗೆ ಮಾರ್ಗಕ್ಕೆ ಅಡ್ಡ ರಸ್ತೆಗಳಿಂದ ಯಾರು ಬರದಂತೆ ಬ್ಯಾರಿಕೇಡ್ ಹಾಕಲಾಗಿದೆ. ಅಲ್ಲಲ್ಲಿರುವ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ಉಪಯುಕ್ತ ಮಾಹಿತಿ ಪ್ರಚುರಪಡಿಲಾಗುತ್ತದೆ. ಸುಳ್ಳು ಸುದ್ದಿ ಇತ್ಯಾದಿಗಳಿಗೆ ಸಂಬಂಽಸಿದಂತೆ ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ೫೧೪ ರೌಡಿಗಳು, ೫೯ ಮತೀಯ ಗೂಂಡಗಳನ್ನು ಬಾಂಡ್‌ಓವರ್ ಮಾಡಿದ್ದು, ಅವರೆಲ್ಲರಿಗೂ ಸೂಕ್ತ ಎಚ್ಚರಿಕೆ ನೀಡಲಾಗಿದೆ.

ಸಂಚಾರ ನಿಷೇಧ

ನಗರದ ಚಳ್ಳಕೆರೆ ಗೇಟ್‌ನಿಂದ ಎಂಜಿ ಸರ್ಕಲ್, ಹೊಳಲ್ಕೆರೆ ರಸ್ತೆ ಕಣಿವೆ ಕ್ರಾಸ್‌ವರೆಗೆ ಎಲ್ಲ ವಾಹನಗಳ ಸಂಚಾರ ನಿಷೇಽಸಲಾಗಿದೆ. ಬೆಂಗಳೂರು, ಚಳ್ಳಕೆರೆ, ಹೊಸಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಭೀಮಸಮುದ್ರ ಕಡೆಯಿಂದ ಬರುವ ಎಲ್ಲ ವಾಹನ, ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳು ರಾ.ಹೆ.೪೮ರಿಂದ ನಗರದ ಮೆದೇಹಳ್ಳಿ ರಸ್ತೆ ಮತ್ತು ಜೆಎಂಐಟಿ ಸರ್ಕಲ್ ಮುಖಾಂತರ ನಗರಕ್ಕೆ ಬಂದು ಅದೇ ಮಾರ್ಗದಲ್ಲಿ ಹಿಂತಿರುಗಬೇಕು. ನಗರದ ೧೦ ಸ್ಥಳಗಳಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸಲಾಗಿದೆ. ಚಳ್ಳಕೆರೆ, ಹಿರಿಯೂರು ಕಡೆಯಿಂದ ಬರುವ ವಾಹನಗಳನ್ನು ಶ್ರೀ ರಾಮ ಕಲ್ಯಾಣ ಮಂಟಪ ಹಾಗೂ ಜೈಲ್ ಬಳಿ ನಿಲ್ಲಿಸಬೇಕು. ಹೊಳಲ್ಕೆರೆ ಕಡೆಯಿಂದ ಬರುವಂಥ ವಾಹನ ಚಂದ್ರವಳ್ಳಿ ಕ್ರಾಸ್ ಮೈದಾನ ಮತ್ತು ಎಸ್‌ಜೆಎಂ ಕಾಲೇಜು ಸಮೀಪ, ದಾವಣಗೆರೆ ಕಡೆಯಿಂದ ಬರುವಂಥ ವಾಹನಗಳನ್ನು ಎಪಿಎಂಸಿ ಹಾಗೂ ಹೊಸಪೇಟೆ ಕಡೆ ಯಿಂದ ಬರುವ ವಾಹನಗಳಿಗೆ ಪೊಲೀಸ್ ಸಮುದಾಯದ ಬಳಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಅಂಬುಲೆನ್ಸ್ಗಳ ಸಂಚಾರ

ಜಿಲ್ಲಾಸ್ಪತ್ರೆಗೆ ಬರುವ ಅಂಬ್ಯುಲೆನ್ಸ್ಗಳಿಗೆ ತುರುವನೂರು ರಸ್ತೆ ಮತ್ತು ಸರಸ್ವತಿಪುರಂನಿಂದ ಜೋಗಿಮಟ್ಟಿ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶವಿದೆ. ತುರ್ತು ಸಂದರ್ಭಕ್ಕೆಂದು ೬ ಅಂಬುಲೆನ್ಸ್ಗಳು, ಐದು ಕ್ವಿಕ್ ರೆಸ್ಪಾನ್ಸ್ ಟೀಂ, ಐದು ಕಡೆ ಪ್ರಥಮ ಚಿಕಿತ್ಸಾ ಕೇಂದ್ರಗಳೊಂದಿಗೆ ವಿವಿಧ ೨೨ ಆಸ್ಪತ್ರೆಗಳಲ್ಲಿ ೩೦೦ ಹಾಸಿಗೆಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಮಾರ್ಗದಲ್ಲಿ ೧೩ ವೈದ್ಯರು ಇರುತ್ತಾರೆ. ೬ ಕಡೆ ಪೊಲೀಸ್ ಸಹಾಯವಾಣಿ ಕೇಂದ್ರಗಳಿರುತ್ತವೆ.

ಶಿಥಿಲ ಕಟ್ಟಡಗಳು

ಶೋಭಾಯಾತ್ರೆ ಮಾರ್ಗದ ಶಿಥಿಲ ಕಟ್ಟಡಗಳ ಮೇಲೆ ಯಾರಿಗೂ ಹಾಗೂ ಮನೆಗಳ ಮೇಲೆ ಬೇರೆಯವರಿಗೆ ನಿಲ್ಲಲು ಅವಕಾಶ ಕೊಡದಂತೆ ಈಗಾಗಲೇ ಕಟ್ಟಡ, ಮನೆ ಮಾಲೀಕರಿಗೆ ನೋಟಿಸ್ ಕೊಡಲಾಗಿದೆ. ಈ ಧಾರ್ಮಿಕ, ದೇವರ ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿ ಯಾರೂ ಭಾಗವಹಿಸಬಾರದು. ನಗರದ ಪ್ರವೇಶಿಸುವ ವಿವಿಧ ೯ ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಅಕ್ರಮ ಮದ್ಯ ಮಾರಾಟ, ಸಾಗಾಟದೆಡೆ ಹದ್ದಿನ ಕಣ್ಣಿಡಲಾಗಿದೆ. ಶಾಂತಿಯುತ ಮೆರವಣಿಗೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಎಸ್‌ಪಿ ಕುಶಾಲ್ ಚೌಕ್ಸೆ ಮನವಿ ಮಾಡಿದರು.