ಮಕ್ಕಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಐಮಂಗಲ ಹೋಬಳಿಯ ಗುಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪುನರಾರಂಭಿಸಲಾಯಿತು. ಬಿಇಒ ಸಿ.ಎಂ. ತಿಪ್ಪೇಸ್ವಾಮಿ, ಆರ್.ಟಿ.ಎಸ್. ಶ್ರೀನಿವಾಸ್, ಪುಟ್ಟಸ್ವಾಮಿ, ಸಿ. ಪವಿತ್ರಾ, ಮುಖ್ಯ ಶಿಕ್ಷಕ ನಿಜಲಿಂಗಪ್ಪ ಇತರರು ಇದ್ದರು. 
ಚಿತ್ರದುರ್ಗ

ಗುಡಿಹಳ್ಳಿ ಸರ್ಕಾರಿ ಶಾಲೆ ಪುನರಾರಂಭ

ನಾಗೇಂದ್ರಪ್ಪ ಕೆ.ಎನ್.

ಪ್ರಮುಖ ಮುಖ್ಯಾಂಶಗಳು

  • ಬಿಇಒ ಸಿ.ಎಂ. ತಿಪ್ಪೇಸ್ವಾಮಿ ಹೇಳಿಕೆ
  • ಶೂನ್ಯ ದಾಖಲಾತಿಯಿಂದ ಮುಚ್ಚಲಾಗಿದ್ದ ಸ್ಕೂಲ್
ಐಮಂಗಲ: ಶೂನ್ಯ ದಾಖಲಾತಿಯಿಂದ ಮುಚ್ಚಲಾಗಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲೆ ಪುನರಾರಂಭ ಮಾಡಲಾಗಿದೆ ಎಂದು ಬಿಇಒ ಸಿ.ಎಂ. ತಿಪ್ಪೇಸ್ವಾಮಿ ತಿಳಿಸಿದರು.
ಹೋಬಳಿಯ ಗುಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಾಖಲಾತಿ ಆಂದೋಲನದ ಪರಿಣಾಮವಾಗಿ ಗುಡಿಹಳ್ಳಿ ಶಾಲೆಗೆ ಮಕ್ಕಳು ದಾಖಲಾಗುತ್ತಿದ್ದಾರೆ. ಆದ್ದರಿಂದ ಶಾಲೆಯನ್ನು ಮತ್ತೆ ಆರಂಭಿಸಲಾಗುತ್ತಿದೆ. 8 ಮಕ್ಕಳು ದಾಖಲಾಗಿದ್ದು, ಇನ್ನೂ ಹೆಚ್ಚಿನ ಮಕ್ಕಳು ದಾಖಲಾಗುವ ನಿರೀಕ್ಷೆ ಇದೆ. ಮಕ್ಕಳ ಸಂಖ್ಯೆ ಹೆಚ್ಚಾದಲ್ಲಿ ನಿಯಮಾನುಸಾರ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ.ಎಸ್. ಶ್ರೀನಿವಾಸ್ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿ-ಭಾಷಾ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಪುಟ್ಟಸ್ವಾಮಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿ. ಪವಿತ್ರಾ, ಗೌನಹಳ್ಳಿ ಶಾಲಾ ಮುಖ್ಯ ಶಿಕ್ಷಕ ನಿಜಲಿಂಗಪ್ಪ, ಗ್ರಾಪಂ ಮಾಜಿ ಸದಸ್ಯ ಮಲ್ಲನಾಯ್ಕ, ಎಲ್. ಭೂತೇಶ್, ಪಾಲಕರಾದ ಜಿ.ಕೆ. ತಿಮ್ಮಯ್ಯ, ಜಿ.ಕೆ. ನಾಗರಾಜ್, ತಿಪ್ಪೇಸ್ವಾಮಿ, ಕನ್ಯಾಕುಮಾರಿ, ಹಿರಿಯ ವಿದ್ಯಾರ್ಥಿಗಳಾದ ಹಾಲೇಶ್, ಪರಶುರಾಮ್, ಆಶಾ ಕಾರ್ಯಕರ್ತೆ ಪವಿತ್ರಾ, ಅಂಗನವಾಡಿ ಕಾರ್ಯಕರ್ತೆ ವಿನೋದಾ, ಅಡುಗೆ ಸಿಬ್ಬಂದಿ ಪಾರ್ವತಮ್ಮ ಇತರರು ಇದ್ದರು.