ಹಿರಿಯೂರು ತಾಲೂಕಿನ ವಿವಿಧೆಡೆ ರೈತರ ಜಮೀನಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿರುವುದು.
- ಹಿರಿಯೂರು ತಾಲೂಕಿನಲ್ಲಿ ಮಳೆ ಕೊರತೆ
- ಮುಂಗಾರಿನಲ್ಲಿ ಶೇ.9ರಷ್ಟು ಬಿತ್ತನೆ
- ಜಾನುವಾರುಗಳ ಮೇವಿಗೂ ಹಾಹಾಕಾರ
ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ಯಾತಕ್ಕೆ ಮಳೆ ಹೋದವೋ ಶಿವ ಶಿವಾ... ಲೋಕ ತಲ್ಲಣಿಸುತ್ತಾವೋ... ಬರದ ಬವಣೆಯನ್ನು ಬಿಡಿಸಿಡುವ ಈ ಹಾಡು ಪ್ರಸ್ತುತ ಹಿರಿಯೂರು ತಾಲೂಕಿಗೆ ಅನ್ವಯಿಸುವಂತಿದೆ.
ಮುಂಗಾರು ಆರಂಭದಲ್ಲಿ ಭರವಸೆ ಮೂಡಿಸಿದ್ದ ಮಳೆರಾಯ ಜೂನ್, ಜುಲೈನಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯನ್ನುಂಟುಮಾಡಿದೆ. ಈ ವಾರದಲ್ಲಿ ವರುಣ ಕೃಪೆ ತೋರಿದರೆ ಮಾತ್ರ ಶೇಂಗಾ ಬೆಳೆ ಚೇತರಿಸಿಕೊಳ್ಳಲಿದೆ.
ಬಿತ್ತನೆ ಕುಂಠಿತ: ಬಯಲು ಸೀಮೆಯಲ್ಲಿ ಶೇಂಗಾ ಪ್ರಮುಖ ಮಳೆಯಾಶ್ರಿತ ಬೆಳೆಯಾಗಿದ್ದರೂ, ವರ್ಷದಿಂದ ವರ್ಷಕ್ಕೆ ಶೇಂಗಾ ಬಿತ್ತನೆ ಪ್ರದೇಶ ಇಳಿಮುಖವಾಗುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಶೇ.9ರಷ್ಟು ಮಾತ್ರ ಬಿತ್ತನೆಯಾಗಿದೆ. ಎಲ್ಲೆಲ್ಲೂ ಬರದ ಛಾಯೆ ಆವರಿಸಿದೆ. ಮುಂಗಾರಿನ ಹೊಸ್ತಿಲಲ್ಲಿ ಆರ್ಭಟಿಸಿದ ಮಳೆ, ಬಿತ್ತನೆ ಹಂತದಲ್ಲಿ ಕೈ ಕೊಟ್ಟಿದೆ.
ಮೇವಿಗೂ ಹಾಹಾಕಾರ: ಮಳೆ ಕೊರತೆಯಿಂದ ಜಾನುವಾರುಗಳ ಮೇವಿಗೂ ಹಾಹಾಕಾರ ಎದುರಾಗಿದೆ. ಕಳೆದ ಎರಡು ವರ್ಷದಿಂದಲೂ ತಾಲೂಕಿನಲ್ಲಿ ಮೇವಿನ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇದೆ. ಮಳೆಯಾಶ್ರಿತ ಪ್ರದೇಶದಲ್ಲಿ ಶೇಂಗಾ, ಜೋಳ, ತೊಗರಿ, ಹುರುಳಿ, ಸಜ್ಜೆ, ಸೂರ್ಯಕಾಂತಿ ಇತರ ವಾಣಿಜ್ಯ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ವರುಣ ಕೃಪೆ ತೋರಿದರೆ ಮಾತ್ರ ಬೆಳೆಗಳಿಗೆ ಜೀವ ಕಳೆ ಬರಲಿದೆ.
ಬಿತ್ತನೆ ಗುರಿ: ಕೃಷಿ ನೀರಾವರಿ ಪ್ರದೇಶದ ವಿಸ್ತರಣೆ, ಮಳೆ ಕಣ್ಣಾಮುಚ್ಚಾಲೆ, ರೈತರ ವಲಸೆ, ಜಾನುವಾರು ಸಾಕಾಣಿಕೆ ಇಳಿಮುಖ, ದುಬಾರಿ ಕೂಲಿ, ರಸಗೊಬ್ಬರ ಬೆಲೆ ಹೆಚ್ಚಳ, ಕೃಷಿ ಕೂಲಿ ಕಾರ್ಮಿಕರ ಕೊರತೆ, ಶೇಂಗಾ ಬೆಳೆಯುವ ಭೂಮಿಯನ್ನು ಅಡಿಕೆ ಅತಿಕ್ರಮಣ ಮಾಡಿರುವ ಕಾರಣಗಳಿಂದ ಶೇಂಗಾ ಬಿತ್ತನೆ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2020ರಲ್ಲಿ 21 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಭೂಮಿಯಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತಿತ್ತು. 2022ರಲ್ಲಿ 14 ಸಾವಿರ ಹೆಕ್ಟೇರ್, 2023ರಲ್ಲಿ 11, 2024, 2025, 2026 ರಲ್ಲಿ 10 ಸಾವಿರ ಹೆಕ್ಟೇರ್‌ಗೆ ಇಳಿದಿದೆ.
ತೊಗರಿ, ಶೇಂಗಾ, ಸೂರ್ಯಕಾಂತಿ, ಜೋಳ, ಹುರುಳಿ, ಸಜ್ಜೆ, ಸಿರಿಧಾನ್ಯಗಳ ಬಿತ್ತನೆ ಪ್ರಮಾಣ 2019ರಲ್ಲಿ 47 ಸಾವಿರ ಹೆಕ್ಟೇರ್, 2021-2022ಕ್ಕೆ 40 ಸಾವಿರ ಹೆಕ್ಟೇರ್, 2023-24, 2025ರಲ್ಲಿ 35 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. ಭದ್ರೆ ವಿವಿ ಸಾಗರ ಒಡಲು ಸೇರಿದ್ದು, ವೇದಾವತಿ, ಸುವರ್ಣಮುಖಿ ನದಿ ಪಾತ್ರದಲ್ಲಿ ಸರಣಿ ಚೆಕ್ ಡ್ಯಾಂ ಕಂ ಬ್ಯಾರೇಜ್ ನಿರ್ಮಾಣ, ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ವಿಸ್ತರಣೆ, ಅಂತರ್ಜಲ ಹೆಚ್ಚಳದಿಂದ ಮಳೆಯಾಶ್ರಿತ ಭೂಮಿಯಲ್ಲಿ ಅಡಿಕೆ, ಟಮ್ಯಾಟೋ, ದಾಳಿಂಬೆ, ಪಪ್ಪಾಯ, ಬಾಳೆ, ಡ್ರಾೃಗನ್ ಫ್ರೂೃಟ್, ಶ್ರೀಗಂಧ, ತರಕಾರಿ ಬೆಳೆಗಳ ಕೃಷಿ ವಿಸ್ತರಣೆಯಿಂದ ಶೇಂಗಾ ಬಿತ್ತನೆ ಕುಂಠಿತವಾಗಿದೆ.
ವಾಡಿಕೆ ಬಿತ್ತನೆ ಗುರಿ: 40510 ಹೆಕ್ಟೇರ್ ಪೈಕಿ ಪ್ರಸ್ತುತ 3806 ಹೆಕ್ಟೇರ್(ಶೇ.9.39)ನಲ್ಲಿ ಬಿತ್ತನೆಯಾಗಿದೆ. ತಾಲೂಕಿನಲ್ಲಿ ಪ್ರಸಕ್ತ ವರ್ಷ ವಾಡಿಕೆ ಮಳೆ 171.50 ಮಿ.ಮೀ., ಜೂನ್‌ನಲ್ಲಿ ಮಳೆ ಪ್ರಮಾಣ 114.87 ಮಿ.ಮೀ., ಆದರೆ, ಶೇ.34ರಷ್ಟು ಕೊರತೆಯಾಗಿದೆ.
"
ಬಯಲುಸೀಮೆ ಶೇಂಗಾ ಬೆಳೆಗಾರರು ಸಂಕಷ್ಟದಲ್ಲಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಶೇಂಗಾ ಬೆಳೆಗೆ ವಿಶೇಷ ಪ್ಯಾಕೇಜ್, ಸೂಕ್ತ ಬೆಂಬಲ ಬೆಲೆ ಘೋಷಿಸಿ ಸಾಂಪ್ರದಾಯಿಕ ಬೆಳೆ ಸಂರಕ್ಷಿಸಬೇಕು. ಇಲ್ಲದಿದ್ದರೆ ಬಯಲುಸೀಮೆಯಲ್ಲಿ ಶೇಂಗಾ ಕಣ್ಮರೆಯಾಗಲಿದೆ.
— -ಕೆ.ಟಿ. ತಿಪ್ಪೇಸ್ವಾಮಿ. ರೈತ ಸಂಘದ ಜಿಲ್ಲಾಧ್ಯಕ್ಷ
"
ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಮುಂಜಾಗ್ರತೆಯಿಂದ ದಾಸ್ತಾನು ಮಾಡಿಕೊಳ್ಳಲಾಗಿದೆ. ಬೆಳೆ ವಿಮೆ ಪಾವತಿಗೆ ಜು.30ರ ವರೆಗೆ ಅವಕಾಶವಿದೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು.
— -ಜೆ. ಅಶೋಕ್, ಸಹಾಯಕ ಕೃಷಿ ನಿರ್ದೇಶಕ, ಹಿರಿಯೂರು.